ಶನಿವಾರ, 30 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕೈ’ ಹೈಕಮಾಂಡ್‌ನಿಂದ ಸರ್ಕಾರದ ನಿಯಂತ್ರಣ: ಬೊಮ್ಮಾಯಿ

Published 3 ಆಗಸ್ಟ್ 2023, 13:56 IST
Last Updated 3 ಆಗಸ್ಟ್ 2023, 13:56 IST
ಅಕ್ಷರ ಗಾತ್ರ

ಬೆಂಗಳೂರು: ‘ಕರ್ನಾಟಕ ಸರ್ಕಾರವನ್ನು ಕಾಂಗ್ರೆಸ್‌ ಹೈಕಮಾಂಡ್‌ ದೆಹಲಿಯಿಂದಲೇ ನಿಯಂತ್ರಿಸುತ್ತಿದ್ದು, ಇದು ಪ್ರಜಾಪ್ರಭುತ್ವ ವಿರೋಧಿ ನಡೆ. ರಾಜ್ಯದ ಜನರಿಗೆ ಅವಮಾನ ಮಾಡಿದಂತೆ’ ಎಂದು ಬಿಜೆಪಿ ಶಾಸಕ ಬಸವರಾಜ ಬೊಮ್ಮಾಯಿ ಅವರು ಸುದ್ದಿಗಾರರ ಜೊತೆ ಮಾತನಾಡಿ ಹೇಳಿದ್ದಾರೆ.

‘ಸಿದ್ದರಾಮಯ್ಯ ಕನ್ನಡದ ಅಸ್ಮಿತೆ ಬಗ್ಗೆ ಮಾತನಾಡುತ್ತಿದ್ದರು. ಈಗ ಇಡೀ ಸಂ‍ಪುಟವನ್ನೇ ದೆಹಲಿಗೆ ಕರೆದುಕೊಂಡು ಹೋಗಿ ಕನ್ನಡದ ಅಸ್ಮಿತೆಗೆ ಧಕ್ಕೆ ತಂದಿದ್ದಾರೆ. ರಾಜ್ಯ ಸರ್ಕಾರದ ಆಡಳಿತವನ್ನು ಕಾಂಗ್ರೆಸ್‌ ಹೈಕಮಾಂಡ್‌ ನಿಯಂತ್ರಣಕ್ಕೆ ಒಪ್ಪಿಸಿರುವುದನ್ನು ರಾಜ್ಯದ ಜನರು ಒಪ್ಪಲು ಸಾಧ್ಯವೇ ಇಲ್ಲ’ ಎಂದು ಅವರು ಹರಿಹಾಯ್ದರು.

 ‘ವೀಕ್‌’ ಆದ ಸಿದ್ದರಾಮಯ್ಯ

ಮೊದಲ ಅವಧಿಯ ಸಿದ್ದರಾಮಯ್ಯಗೂ ಎರಡನೇ ಅವಧಿಯ ಸಿಎಂ ಸಿದ್ದರಾಮಯ್ಯಗೂ ಸಾಕಷ್ಟು ವ್ಯತ್ಯಾಸ ಇದೆ. ಈಗ ಸಿದ್ದರಾಮಯ್ಯ ‘ವೀಕ್’ ಆಗಿದ್ದು, ಆಡಳಿತದ ಮೇಲೆ ಅವರ ಹಿಡಿತ ತಪ್ಪಿದೆ ಎಂದು ಬೊಮ್ಮಾಯಿ ಆರೋಪಿಸಿದರು.

ಅಧಿಕಾರ ಹಿಡಿದ ಎರಡೇ ತಿಂಗಳಲ್ಲಿ ಮುಖ್ಯಮಂತ್ರಿಯವರು ಸಂಪುಟದ ಸಚಿವರನ್ನು ಕರೆದುಕೊಂಡು ದೆಹಲಿಗೆ ಹೋಗಿ ಸಭೆ ನಡೆಸಿರುವುದನ್ನು ನೋಡಿದರೆ ಸರ್ಕಾರದಲ್ಲಿ ಎಲ್ಲವೂ ಸರಿ ಇಲ್ಲ ಎಂಬುದು ಗೊತ್ತಾಗುತ್ತದೆ. ಅವರ ಆಡಳಿತ ಮೊದಲಿನಷ್ಟು ಬಿಗಿ ಇಲ್ಲ ಎಂದರು.

ದೆಹಲಿಯಲ್ಲಿ ಕಾಂಗ್ರೆಸ್‌ ಸಭೆ ನಡೆಸಿದ ಬಗ್ಗೆ ನನ್ನ ತಕರಾರಿಲ್ಲ. ಆದರೆ ಇಡೀ ಸಂಪುಟ ದೆಹಲಿಗೆ ಹೋಗಿ ಪಕ್ಷದ ಸಭೆ ನಡೆಸಿರುವುದು ಇತಿಹಾಸದಲ್ಲೇ ನಡೆದಿರಲಿಲ್ಲ
ಬಸವರಾಜ ಬೊಮ್ಮಾಯಿ ಬಿಜೆಪಿ ಶಾಸಕ

ಸರ್ಕಾರದ ಆರಂಭದಲ್ಲಿಯೇ ಕಾಂಗ್ರೆಸ್‌ನ ರಾಜ್ಯ ಉಸ್ತುವಾರಿ ರಣದೀಪ್‌ಸಿಂಗ್‌ ಸುರ್ಜೇವಾಲಾ ಅವರು ಬಿಬಿಎಂಪಿ ಅಧಿಕಾರಿಗಳ ಸಭೆ ನಡೆಸಿದ್ದರು. ಇದೀಗ ಸಚಿವರ ಸಭೆಯನ್ನು ಹೈಕಮಾಂಡ್‌ ನಡೆಸಿದೆ. ವರ್ಗಾವಣೆ ದಂಧೆ, ಸ್ವಜನ ಪಕ್ಷಪಾತ ಅವ್ಯಾಹತವಾಗಿ ನಡೆಯುತ್ತಿದೆ ಎಂದು ಬೊಮ್ಮಾಯಿ ದೂರಿದರು.

‘ಬಿಜೆಪಿ ಅವಧಿಯಲ್ಲಿ ಅಕ್ರಮಗಳು ಆಗಿವೆ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ, ಆದರೆ, ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಆಗಿರುವ ಅವ್ಯವಹಾರಗಳ ಬಗ್ಗೆ ಲೋಕಾಯುಕ್ತ ತನಿಖೆ ನಡೆಯುತ್ತಿದ್ದು, ಅದರ ಬಗ್ಗೆ ಉತ್ತರ ನೀಡಲಿ. ನಮ್ಮ ಅವಧಿಯಲ್ಲಿ ಅಭಿವೃದ್ಧಿಗಾಗಿ ಬಿಡುಗಡೆಯಾದ ಹಣವನ್ನು ತಡೆ ಹಿಡಿದಿದ್ದಾರೆ. ಇದರಿಂದ ಯಾವುದೇ ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ’ ಎಂದು ತಿಳಿಸಿದರು.

ಶಾಸಕ ಬಸವರಾಜ ರಾಯರಡ್ಡಿ ಅವರು ನೀಡಿರುವ ರಾಜಕೀಯ ಹೇಳಿಕೆ ಕುರಿತು ಕೇಳಿದ ಪ್ರಶ್ನೆಗೆ, ರಾಯರಡ್ಡಿ ಅತ್ಯಂತ ಮೇಧಾವಿ. ಅವರು ಯಾವಾಗ ಯಾರ ಬಗ್ಗೆ ಏನು ಮಾತನಾಡುತ್ತಾರೆ ಎನ್ನುವುದು ತಿಳಿಯುವುದಿಲ್ಲ ವ್ಯಂಗ್ಯವಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT