ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೇ 50 ಮೀಸಲಾತಿ | ‘ಸುಪ್ರೀಂ’ಗೆ ಅಫಿಡವಿಟ್ ಸಲ್ಲಿಸಲಾಗಿದೆ: ಯಡಿಯೂರಪ್ಪ

ಹರಿಹರ ಬೆಳ್ಳೂಡಿ ಶಾಖಾ ಮಠದಲ್ಲಿ ಮುಖ್ಯಮಂತ್ರಿ
Last Updated 4 ಏಪ್ರಿಲ್ 2021, 20:09 IST
ಅಕ್ಷರ ಗಾತ್ರ

ದಾವಣಗೆರೆ: ‘ಈಗಿರುವ ಶೇ 50 ಮೀಸಲಾತಿ ಮಿತಿ ಸಡಿಲಿಸಿ, ಹೆಚ್ಚಿಸಬೇಕು ಎಂದು ಸುಪ್ರೀಂ ಕೋರ್ಟ್‌ಗೆ ಅಫಿಡವಿಟ್‌ ಸಲ್ಲಿಸಲಾಗಿದೆ. ಕೋರ್ಟ್‌ನಲ್ಲಿ ಚರ್ಚೆ ಆರಂಭಗೊಂಡಿದೆ. ನಮ್ಮ ವಾದ ಮಂಡಿಸಿದ್ದೇವೆ’ ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ತಿಳಿಸಿದರು.

ಕಾಗಿನೆಲೆ ಕನಕಪೀಠದ ಹರಿಹರ ಬೆಳ್ಳೂಡಿ ಶಾಖಾ ಮಠದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

‘ಹಾಲುಮತದ ಕುಲಶಾಸ್ತ್ರ ಅಧ್ಯಯನ ನಡೆಯುತ್ತಿದೆ. ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ಮೀಸಲಾತಿಗೆ ಸಂಬಂಧಿಸಿ ಸಮಿತಿ ರಚಿಸಲಾಗಿದೆ. ಸಮಿತಿ ವರದಿಯ ನಿರೀಕ್ಷೆಯಲ್ಲಿದ್ದೇವೆ. ಯಾವ ಭೇದಭಾವ ಮಾಡದೇ ನಿಮ್ಮ ಬೇಡಿಕೆಗಳನ್ನು ಈಡೇರಿಸುತ್ತೇವೆ’ ಎಂದು ಭರವಸೆ ನೀಡಿದರು.

ಹೊಸದುರ್ಗ ಶಾಖಾಮಠದಲ್ಲಿ ನಿರ್ಮಾಣಗೊಳ್ಳುತ್ತಿರುವ 32 ಅಡಿಯ ಏಕಶಿಲಾ ಕನಕ ಮೂರ್ತಿ ನಿಲ್ಲಿಸಲು ಅನುದಾನ ನೀಡಬೇಕು. ಸಂಗೊಳ್ಳಿ ರಾಯಣ್ಣ ಪ್ರಾಧಿಕಾರಕ್ಕೆ ಬರಬೇಕಿರುವ ಬಾಕಿ ಅನುದಾನ ಒದಗಿಸಬೇಕು ಎಂದು ಕಾಗಿನೆಲೆ ನಿರಂಜನಾನಂದ ಸ್ವಾಮೀಜಿ ಬೇಡಿಕೆ ಇಟ್ಟರು. ‘ಏಕಶಿಲಾಮೂರ್ತಿಗೆ ₹ 5 ಕೋಟಿ ಅನುದಾನ ಬಿಡುಗಡೆ ಮಾಡುತ್ತೇನೆ’ ಎಂದು ಘೋಷಣೆ ಮಾಡಿದ ಯಡಿಯೂರಪ್ಪ, ‘ಪ್ರಾಧಿಕಾರಕ್ಕೆ ನೀಡಲು ಬಾಕಿ ಇರುವ ₹ 30 ಕೋಟಿ ಒದಗಿಸಲು ಪ್ರಯತ್ನಿಸಲಾಗುವುದು’ ಎಂದು ಆಶ್ವಾಸನೆ ನೀಡಿದರು.

ಕಾರ್ಯಕ್ರಮಕ್ಕೆ ಮುನ್ನ ಸುದ್ದಿಗಾರರ ಜತೆ ಮಾತನಾಡಿದ ಮುಖ್ಯಮಂತ್ರಿ, ‘ಈವರೆಗೆ ನಡೆದ ಎಲ್ಲ ಉಪ ಚುನಾವಣೆಗಳನ್ನು ಗೆದ್ದಿದ್ದೇವೆ. ಮಸ್ಕಿಯಲ್ಲಿ ಕೂಡ ಗೆಲ್ಲುತ್ತೇವೆ’ ಎಂದು ತಿಳಿಸಿದರು.

ಸಿಡಿ ಪ್ರಕರಣ ಒಳಗೊಂಡಂತೆ ಕೆಲವು ಪ್ರಶ್ನೆಗಳಿಗೆ ಉತ್ತರಿಸದೇ ಮುಂದೆ ಸಾಗಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT