ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕುಮಾರಸ್ವಾಮಿ ಬೇಜವಾಬ್ದಾರಿ ಹೇಳಿಕೆಯಿಂದ ಜನರು ಬೀದಿಗಿಳಿಯುವ ಸ್ಥಿತಿ ಬಂದಿದೆ’

Last Updated 31 ಜುಲೈ 2018, 7:16 IST
ಅಕ್ಷರ ಗಾತ್ರ

ಬೆಳಗಾವಿ:ಉತ್ತರ ಕರ್ನಾಟಕ ಕುರಿತು ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ. ಇದರಿಂದಾಗಿ ಜನರು, ಸ್ವಾಮೀಜಿಗಳು ಬೀದಿಗಿಳಿದು ಹೋರಾಟ ನಡೆಸುವಂತಹ ಸ್ಥಿತಿ ಬಂದಿದೆ ಎಂದು ಮಾಜಿ ಮುಖ್ಯಮಂತ್ರಿಬಿ.ಎಸ್. ಯಡಿಯೂರಪ್ಪ ಟೀಕಿಸಿದರು.

ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು‘ಜಾತಿಯ ವಿಷ ಬೀಜ ಬಿತ್ತುತ್ತಿದ್ದಾರೆ. ದೇವೇಗೌಡರು ಈ ಬಗ್ಗೆ ಪ್ರತಿಕ್ರಿಯೆ ನೀಡಿಲ್ಲ. ತಂದೆಯ ಸಹಮತ ಇಲ್ಲದೆ ಅವರು ಮಾತನಾಡಲು ಸಾಧ್ಯವೇ ಇಲ್ಲ’ ಆರೋಪಿಸಿದರು.

‘ಅನೇಕರ ಹೋರಾಟ, ತ್ಯಾಗ, ಬಲಿದಾನದಿಂದಾಗಿ ರಾಜ್ಯ ಏಕೀಕರಣ ಆಗಿದೆ. ಅದಕ್ಕೆ ಯಾರೂ ತೊಂದರೆ ಮಾಡಬಾರದು. ಬಂದ್ ಆಚರಣೆ ಮಾಡಬೇಡಿ’ಎಂದು ಹೋರಾಟಗಾರರಲ್ಲಿ ಮನವಿ ಮಾಡಿದ ಯಡಿಯೂರಪ್ಪ, ‘ಸದನದ ಒಳಗೆ ಹಾಗೂ ಹೊರಗೆ ನಿಮ್ಮ ಪರವಾಗಿ ಹೋರಾಟ ಮಾಡುತ್ತೇವೆ’ ಎಂದು ಭರವಸೆ ನೀಡಿದರು.

ಅಖಂಡ ಕರ್ನಾಟಕಕ್ಕಾಗಿ ಕನ್ನಡದ ಕಟ್ಟಾಳುಗಳು,‌ ಸಾಹಿತಿಗಳು ದಶಕಗಳ ಕಾಲ ಹೋರಾಟ ಮಾಡಿದ್ದಾರೆ.ಲಿಂಗಾಯತ ಮುಖ್ಯಮಂತ್ರಿಗಳು ಉತ್ತರ ಕರ್ನಾಟಕ ಕ್ಕೆ ಏನು ಮಾಡಿದ್ದಾರೆ? ಅವರ ಕೊಡುಗೆ ಏನು? ಅಂತ ದೇವೇಗೌಡರು ಕೇಳಿದ್ದಾರೆ. ಪ್ರಧಾನಿಯಾಗಿ ನಿಮ್ಮ ಕೊಡುಗೆ ಏನು?’ ಎಂದು ವಾಗ್ದಾಳಿ ನಡೆಸಿದರು.

ಕುಮಾರಸ್ವಾಮಿ ಅವರು ಸ್ವಾಮೀಜಿಗಳು, ಹೋರಾಟಗಾರರ ಬಳಿ ಕ್ಷಮೆ ಕೇಳಿ ಹೋಗಬೇಕಿತ್ತು. ಅದರಬದಲಿಗೆ ಬೆಂಕಿ ಹಚ್ಚುವ ಕೆಲಸ ಮಾಡಿದ್ದಾರೆ. ಅವರ ಕುಟುಂಬದ ಸ್ವಾರ್ಥ ರಾಜಕಾರಣ, ಅಧಿಕಾರ ದಾಹಕ್ಕಾಗಿ, ರಾಜ್ಯವನ್ನು ಒಡೆಯುವ ದುಸ್ಸಾಹಸ, ಷಡ್ಯಂತ್ರ ಮಾಡುತ್ತಿದ್ದೀರಿ. ಅಪ್ಪ ಮಕ್ಕಳ ಹೇಳಿಕೆ ಆಕಸ್ಮಿಕವಲ್ಲ, ಪೂರ್ವ ನಿಯೋಜಿತವಾದುದು ಎನಿಸುತ್ತಿದೆ ಎಂದು ದೂರಿದರು.

ದವಸ ಧಾನ್ಯಗಳು, ವಿದ್ಯುತ್ ಪೂರೈಕೆಯಲ್ಲೂ ಉತ್ತರ ಕರ್ನಾಟಕದ ದೊಡ್ಡ ಪಾಲಿದೆ ಎನ್ನುವುದನ್ನು ಅರಿಯಿರಿ. ಅಲ್ಲಿ ಏನೂ ಇಲ್ಲ ಎನ್ನಬೇಡಿ ಎಂದು ತಿರುಗೇಟು ನೀಡಿದರು.

ಅಖಂಡ ಕರ್ನಾಟಕ ಪರವಾಗಿ ಹಾಗೂ ಈ ಭಾಗದ ಜನರಿಗೆ ಅನ್ಯಾಯವಾದರೆ ಕೈಕಟ್ಟಿ ಕೂರುವುದಿಲ್ಲ.ದುರಂಹಕಾರ, ಬೆಂಕಿ ಹಚ್ಚುವ ಮಾತು ಪ್ರಜಾತಂತ್ರ ವ್ಯವಸ್ಥೆಯನ್ನು ಅವಮಾನಿಸುವಂಥದ್ದಾಗಿದೆ.ಸುವರ್ಣ ವಿಧಾನಸೌಧಕ್ಕೆ ಪ್ರಮುಖ ಕಚೇರಿಗಳನ್ನು ಸ್ಥಳಾಂತರಿಸಬೇಕು. ವರ್ಷಪೂರ್ತಿ ಕ್ರಿಯಾಶೀಲವಾಗಿ ಇರಬೇಕು ಎಂದು ಆಗ್ರಹಿಸಿದರು.

ಶ್ರೀರಾಮುಲು, ಉಮೇಶ ಕತ್ತಿ ಅವರ ಮಾತಿನ ಉದ್ದೇಶಅಭಿವೃದ್ಧಿಯೇ ಹೊರತು, ವಿಭಜನೆ ಮಾಡಬೇಕು ಎನ್ನುವುದಲ್ಲಎಂದ ಅವರು ಇನ್ನುಮುಂದೆ ಈ ರೀತಿಯ ಹೇಳಿಕೆ ನೀಡದಂತೆ ಅವರಿಗೆ ಮನವರಿಕೆ ಮಾಡಿಕೊಡಲಾಗುವುದು ಎಂದರು.15 ದಿನ ಅಥವಾ ಒಂದು ತಿಂಗಳು ಕಾಯಿರಿ. ಜನರು ಈ ಸರ್ಕಾರದ ಬಗ್ಗೆ, ಶಾಸಕರು ಹಾಗೂ ಕಾಂಗ್ರೆಸ್‌ನವರ ಬಗ್ಗೆ ವಿಶ್ವಾಸ ಕಳೆದುಕೊಂಡಿದ್ದಾರೆ. ಹೀಗಾಗಿ 15 ದಿನಗಳಲ್ಲಿ ಏನೇನಾಗುತ್ತದೆಯೋ ಕಾದು ನೋಡಿರಿ ಎನ್ನುವ ಮೂಲಕ ಕುತೂಹಲ ಮೂಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT