ಗುರುವಾರ, 7 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ ಇಲಾಖೆಗೆ ರೇಷ್ಮೆ , ತೋಟ: 2 ಸಾವಿರಕ್ಕೂ ಹೆಚ್ಚು ಹುದ್ದೆ ರದ್ದು

2 ಸಾವಿರಕ್ಕೂ ಹೆಚ್ಚು ಹುದ್ದೆ ರದ್ದು l ವಿವಿಧ ಇಲಾಖೆಗಳ ವಿಲೀನಕ್ಕೆ ಚಿಂತನೆ
Last Updated 11 ಅಕ್ಟೋಬರ್ 2022, 19:25 IST
ಅಕ್ಷರ ಗಾತ್ರ

ಬೆಂಗಳೂರು: ರೇಷ್ಮೆ ಮತ್ತು ತೋಟಗಾರಿಕೆ ಇಲಾಖೆಗಳನ್ನು ಕೃಷಿ ಇಲಾಖೆಯೊಂದಿಗೆ ವಿಲೀನಗೊಳಿಸುವುದು ಹಾಗೂ ಕೆಲವು ಇಲಾಖೆಗಳನ್ನು ಮುಚ್ಚುವ ಮೂಲಕ ಎರಡು ಸಾವಿರಕ್ಕೂ ಹೆಚ್ಚು ಹುದ್ದೆಗಳನ್ನು ರದ್ದುಗೊಳಿಸುವ ತೀರ್ಮಾನವನ್ನು ಕಂದಾಯ ಸಚಿವರ ನೇತೃತ್ವದ ಸಂಪುಟ ಉಪ ಸಮಿತಿ ಕೈಗೊಂಡಿದೆ.

ವಿವಿಧ ಇಲಾಖೆಗಳ ವಿಲೀನ ಕುರಿತು ಕಂದಾಯ ಸಚಿವ ಆರ್‌.ಅಶೋಕ ಅಧ್ಯಕ್ಷತೆಯ ಸಂಪುಟ ಉಪ ಸಮಿತಿ ಮಂಗಳವಾರ ಮೂರನೇ ಸಭೆ ನಡೆಸಿತು. ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಮತ್ತು ಗೃಹ ಸಚಿವ ಆರಗ ಜ್ಞಾನೇಂದ್ರ ಪಾಲ್ಗೊಂಡಿದ್ದರು. ಕೆಲವು ಇಲಾಖೆಗಳು, ನಿಗಮ, ಪ್ರಾಧಿಕಾರಗಳ ರದ್ದತಿ ನಿರ್ಧಾರವನ್ನು ಸಭೆ ಕೈಗೊಂಡಿದೆ.

ಸಭೆಯ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅಶೋಕ, ‘ಅನಗತ್ಯವಾಗಿರುವ ಹುದ್ದೆಗಳು ಮತ್ತು ಇಲಾಖೆಗಳನ್ನು ವಿಲೀನಗೊಳಿಸುವುದು ಅಥವಾ ರದ್ದು ಮಾಡುವುದರ ಮೂಲಕ ರಾಜ್ಯ ಸರ್ಕಾರದ ಬೊಕ್ಕಸದ ಮೇಲಿನ ಹೊರೆಯನ್ನು ತಗ್ಗಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ. ಮಂಗಳವಾರದ ಸಭೆಯಲ್ಲಿ ಉಪ ಸಮಿತಿ ಹಲವು ನಿರ್ಧಾರಗಳನ್ನು ಕೈಗೊಂಡಿದ್ದು, ಸಂಪುಟದ ಒಪ್ಪಿಗೆ
ಯೊಂದಿಗೆಶೀಘ್ರದಲ್ಲಿಯೇ ಅನುಷ್ಠಾನಕ್ಕೆ ತರಲಾಗುವುದು’ ಎಂದು ತಿಳಿಸಿದರು.

ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಗಳನ್ನು ಕೃಷಿ ಇಲಾಖೆಯೊಂದಿಗೆ ವಿಲೀನಗೊಳಿಸಲಾಗುವುದು. ಸಚಿವಾಲಯ ಸೇರಿದಂತೆ ಎಲ್ಲ ಹಂತಗಳಲ್ಲೂ ಈ ಬದಲಾವಣೆ ಜಾರಿಯಾಗಲಿದೆ. ಕೆಳಹಂತದ ಹುದ್ದೆಗಳನ್ನು ವಿಲೀನಗೊಳಿಸಿ, ಹಿರಿಯ ಅಧಿಕಾರಿಗಳ ಹುದ್ದೆಗಳನ್ನು ರದ್ದುಗೊಳಿಸಲಾಗುವುದು. ಈ ಇಲಾಖೆಗಳಲ್ಲಿ ಸುಮಾರು 2,000 ಹುದ್ದೆಗಳು ರದ್ದಾಗಲಿವೆ ಎಂದು ವಿವರಿಸಿದರು.

ರೇಷ್ಮೆ ಬೆಳೆಯುವ ಪ್ರದೇಶಗಳಿಗೆ ಸೀಮಿತವಾಗಿ ರೇಷ್ಮೆ ಕೃಷಿ ಅಧಿಕಾರಿಗಳ ಹುದ್ದೆಗಳನ್ನು ಉಳಿಸಿಕೊಳ್ಳಲಾಗುವುದು. ಮೇಲಿನ ಹಂತದಲ್ಲಿ ಎರಡೂಇಲಾಖೆಗಳ ಜವಾಬ್ದಾರಿಯನ್ನು ಕೃಷಿ ಇಲಾಖೆಗೆ ವಹಿಸಲಾಗು
ವುದು.ಮುದ್ರಣ, ಲೇಖನ ಸಾಮಗ್ರಿ ಮತ್ತು ಪ್ರಕಟಣೆಗಳ ಇಲಾಖೆಯನ್ನು ಶಿಕ್ಷಣ ಇಲಾಖೆಯ ಜತೆ ವಿಲೀನಗೊಳಿಸಲಾಗುತ್ತದೆ. ಕೆಲವು ನಿಗಮಗಳನ್ನು ರದ್ದುಗೊಳಿಸುವ ತೀರ್ಮಾನವೂ ಆಗಿದೆ ಎಂದರು.

ಅರಣ್ಯ ಅಧಿಕಾರಿಗಳ ಹುದ್ದೆಗಳಿಗೆ ಕತ್ತರಿ

ಭಾರತೀಯ ಅರಣ್ಯ ಸೇವೆ (ಐಎಫ್‌ಎಸ್‌) ಸೇರಿದಂತೆ ರಾಜ್ಯದ ಅರಣ್ಯ ಇಲಾಖೆಯಲ್ಲಿರುವ ಹಿರಿಯ ಅಧಿಕಾರಿಗಳ ಹುದ್ದೆಗಳನ್ನು ಗಣನೀಯವಾಗಿ ತಗ್ಗಿಸಲು ಸಂಪುಟ ಉಪಸಮಿತಿಯು ಚಿಂತನೆ ನಡೆಸಿದೆ. ಪೂರಕವಾಗಿ ಸಮಗ್ರ ವಿವರ ಒದಗಿಸಲು ಅರಣ್ಯ ಇಲಾಖೆಗೆ ಸೂಚಿಸಿದೆ.

‘ಮಲೆನಾಡು, ಕರಾವಳಿ ಜಿಲ್ಲೆಗಳನ್ನು ಹೊರತುಪಡಿಸಿ ಜಿಲ್ಲೆಗೆ ಒಂದು ಜಿಲ್ಲಾ ಅಥವಾ ಉಪ ಅರಣ್ಯ ಸಂರಕ್ಷಣಾಧಿಕಾರಿ, ಉಪ ವಿಭಾಗಕ್ಕೆ ಒಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ತಾಲ್ಲೂಕಿಗೆ ಒಂದು
ವಲಯ ಅರಣ್ಯಾಧಿಕಾರಿ ಹುದ್ದೆ ಉಳಿಸಿಕೊಳ್ಳಬೇಕು. ಉಳಿದ ಅಧಿಕಾರಿಗಳ ವೃಂದದ ಹುದ್ದೆಗಳನ್ನು ರದ್ದುಗೊಳಿಸಿ ಕೆಳಹಂತದ ಸಿಬ್ಬಂದಿ ಸಂಖ್ಯೆ ಹೆಚ್ಚಿಸಲು ಇಲಾಖೆಯ ವರದಿ ಕೇಳಲಾಗಿದೆ’ ಎಂದು ಸಚಿವ ಅಶೋಕ ಹೇಳಿದರು.

ಜಿಲ್ಲೆಗೊಂದೇ ಯೋಜನಾ ಪ್ರಾಧಿಕಾರ: ಅಶೋಕ

ಒಂದೇ ಜಿಲ್ಲೆಯೊಳಗೆ ಹಲವು ಯೋಜನಾ ಪ್ರಾಧಿಕಾರ ಗಳಿವೆ. ಅವೆಲ್ಲವನ್ನೂ ರದ್ದುಪಡಿಸಿ ಜಿಲ್ಲಾ ಮಟ್ಟದಲ್ಲಿ ಒಂದೇ ಯೋಜನಾ ಪ್ರಾಧಿಕಾರ ಉಳಿಸಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಅಶೋಕ ವಿವರಿಸಿದರು.

ಬೆಂಗಳೂರು ಸುತ್ತಮುತ್ತ ಹತ್ತಕ್ಕೂ ಹೆಚ್ಚು ಯೋಜನಾ ಪ್ರಾಧಿಕಾರಗಳಿವೆ. ನೆಲಮಂಗಲ, ಹೊಸಕೋಟೆ, ದೇವನಹಳ್ಳಿ, ಮಾಗಡಿ, ಚನ್ನಪಟ್ಟಣ, ರಾಮನಗರ ಹೀಗೆ ಹಲವು ಯೋಜನಾ ಪ್ರಾಧಿಕಾರಗಳು ಅಸ್ತಿತ್ವದಲ್ಲಿವೆ. ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ವ್ಯಾಪ್ತಿ ಪ್ರತ್ಯೇಕ ಪ್ರಾಧಿಕಾರವಿದೆ. ಈ ಎಲ್ಲವನ್ನೂ ರದ್ದುಗೊಳಿಸಿ ಜಿಲ್ಲೆಗೆ ಒಂದೇ ಯೋಜನಾ ಪ್ರಾಧಿಕಾರ ಉಳಿಸಿಕೊಳ್ಳಲು ನಿರ್ಧರಿಸಲಾಗಿದೆ ಎಂದರು.

ರದ್ದಾಗಲಿರುವ ನಿಗಮಗಳು

*ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ

*ಮೈಸೂರು ತಂಬಾಕು ಕಂಪನಿ

*ಕರ್ನಾಟಕ ಕೃಷಿ ಕೈಗಾರಿಕಾ ನಿಗಮ

*ಕರ್ನಾಟಕ ಆಹಾರ ನಿಗಮ (ಕೃಷಿ ಇಲಾಖೆ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT