ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಮೀರ್ ಒತ್ತಡ: ವಕ್ಫ್‌ ಮಂಡಳಿ ನಾಮನಿರ್ದೇಶನ ರದ್ಧತಿ ವಾಪಸ್‌

Published 25 ಮೇ 2023, 15:59 IST
Last Updated 25 ಮೇ 2023, 15:59 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯ ವಕ್ಫ್‌ ಮಂಡಳಿಗೆ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಾಡಿದ್ದ ಸದಸ್ಯರ ನಾಮನಿರ್ದೇಶನವನ್ನು ರದ್ದುಗೊಳಿಸಿ ಹೊರಡಿಸಿದ್ದ ಅಧಿಸೂಚನೆಯನ್ನು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯು ಎರಡೇ ದಿನಗಳಲ್ಲಿ ಹಿಂಪಡೆದಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಮೇ 20ರಂದು ಅಸ್ತಿತ್ವಕ್ಕೆ ಬಂದಿತ್ತು. ಹಿಂದಿನ ಸರ್ಕಾರದ ಅವಧಿಯಲ್ಲಿ ನಿಗಮ, ಮಂಡಳಿ, ಪ್ರಾಧಿಕಾರ, ಅಕಾಡೆಮಿಗಳಿಗೆ ಮಾಡಿದ್ದ ನಾಮನಿರ್ದೇಶನಗಳನ್ನು ರದ್ದುಗೊಳಿಸುವಂತೆ ಮುಖ್ಯಮಂತ್ರಿ ಆದೇಶ ಹೊರಡಿಸಿದ್ದರು. ಆ ಬಳಿಕ ವಿವಿಧ ಇಲಾಖೆಗಳು ಪ್ರತ್ಯೇಕ ಆದೇಶಗಳನ್ನು ಹೊರಡಿಸಿದ್ದವು.

ಎನ್‌.ಕೆ. ಮುಹಮ್ಮದ್ ಶಾಫಿ ಸಅದಿ, ಮೀರ್‌ ಅಝರ್‌ ಹುಸೇನ್‌ ಮತ್ತು ಜಿ.ಕೆ. ಯಾಕೂಬ್‌ ಅವರನ್ನು ರಾಜ್ಯ ವಕ್ಫ್‌ ಮಂಡಳಿ ಸದಸ್ಯರಾಗಿ ಹಿಂದಿನ ಬಿಜೆಪಿ ಸರ್ಕಾರವು 2020ರ ಜನವರಿ 2ರಂದು ನಾಮನಿರ್ದೇಶನ ಮಾಡಿತ್ತು. ಶಾಫಿ ಸಅದಿ ಬಿಜೆಪಿ ಬೆಂಬಲದಿಂದ ವಕ್ಫ್‌ ಮಂಡಳಿಯ ಅಧ್ಯಕ್ಷರೂ ಆಗಿದ್ದರು. ಐಎಎಸ್‌ ಅಧಿಕಾರಿ ಜೆಹರಾ ನಸೀಮ್‌ ಅವರನ್ನು ಮಂಡಳಿಯ ಸದಸ್ಯರನ್ನಾಗಿ 2023ರ ಮಾರ್ಚ್‌ 9ರಂದು ನಾಮನಿರ್ದೇಶನ ಮಾಡಲಾಗಿತ್ತು.

ನಾಲ್ಕೂ ಜನರ ನಾಮನಿರ್ದೇಶವನ್ನು ರದ್ದುಗೊಳಿಸಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯು ಸೋಮವಾರ (ಮೇ 22) ಅಧಿಸೂಚನೆ ಹೊರಡಿಸಿತ್ತು. ಬುಧವಾರ ಹೊಸ ಅಧಿಸೂಚನೆ ಹೊರಡಿಸಿರುವ ಇಲಾಖೆಯು, ‘ವಕ್ಫ್‌ ಮಂಡಳಿ ಸದಸ್ಯರ ನಾಮನಿರ್ದೇಶನ ರದ್ದುಗೊಳಿಸಿ ಹೊರಡಿಸಿದ್ದ ಅಧಿಸೂಚನೆಯನ್ನು ಮುಂದಿನ ಆದೇಶದವರೆಗೆ ಹಿಂಪಡೆಯಲಾಗಿದೆ’ ಎಂದು ತಿಳಿಸಿದೆ.

ವಕ್ಫ್‌ ಮಂಡಳಿ ಸದಸ್ಯರ ನಾಮನಿರ್ದೇಶನ ರದ್ಧತಿ ಅಧಿಸೂಚನೆ ಹಿಂಪಡೆದಿರುವುದರ ಕಾರಣ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಧಿಕಾರಿಯೊಬ್ಬರು, ‘ವಕ್ಫ್‌ ಮಂಡಳಿ ಸದಸ್ಯರ ನಾಮನಿರ್ದೇಶನ ರದ್ದುಗೊಳಿಸಿದ್ದ ಅಧಿಸೂಚನೆ ಹಿಂಪಡೆಯುವಂತೆ ಸಚಿವ ಬಿ.ಜೆಡ್‌. ಜಮೀರ್‌ ಅಹಮದ್‌ ಖಾನ್‌ ಅವರು ನಿರ್ದೇಶನ ನೀಡಿದ್ದರು. ಅದರಂತೆ ಕ್ರಮ ಕೈಗೊಳ್ಳಲಾಗಿದೆ’ ಎಂದು ತಿಳಿಸಿದರು.

ಮುಖ್ಯಮಂತ್ರಿ ನೇತೃತ್ವದಲ್ಲಿ ವಿಧಾನಸೌಧದಲ್ಲಿ ಸೋಮವಾರ ಹಿರಿಯ ಪೊಲೀಸ್‌ ಅಧಿಕಾರಿಗಳ ಸಭೆ ನಡೆದಿತ್ತು. ಆ ಸಭೆಯಲ್ಲಿ ಸಚಿವ ಜಮೀರ್‌ ಅಹಮದ್‌ ಅವರೂ ಪಾಲ್ಗೊಂಡಿದ್ದರು. ಸಭೆಗೂ ಮೊದಲು ವಿಧಾನಸೌಧದ ಮೂರನೇ ಮಹಡಿಯ ಮೊಗಸಾಲೆಯಲ್ಲಿ ಸಚಿವರನ್ನು ಭೇಟಿ ಮಾಡಿದ್ದ ಶಾಫಿ ಸಅದಿ ಮತ್ತು ಬೆಂಬಲಿಗರು, ನಾಮನಿರ್ದೇಶನ ರದ್ದುಗೊಳಿಸಿರುವ ಆದೇಶ ಹಿಂಪಡೆಯುವಂತೆ ಒತ್ತಡ ಹೇರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT