ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾವೇರಿ ಹೋರಾಟ: ಮಂಡ್ಯ, ಮದ್ದೂರು ಬಂದ್‌ ಇಂದು

Published 22 ಸೆಪ್ಟೆಂಬರ್ 2023, 19:50 IST
Last Updated 22 ಸೆಪ್ಟೆಂಬರ್ 2023, 19:50 IST
ಅಕ್ಷರ ಗಾತ್ರ

ಮಂಡ್ಯ: ತಮಿಳುನಾಡಿಗೆ ನೀರು ಹರಿಸುತ್ತಿರುವುದನ್ನು ಖಂಡಿಸಿ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಸೇರಿದಂತೆ ವಿವಿಧ ಸಂಘಟನೆಗಳು ಶನಿವಾರ ಮಂಡ್ಯ, ಮದ್ದೂರು ಬಂದ್‌ಗೆ ಕರೆ ನೀಡಿವೆ.

ಬಸ್‌, ಆಟೊ, ಲಾರಿ ಮಾಲೀಕರ ಸಂಘಟನೆಗಳು, ಬೀದಿಬದಿ ವ್ಯಾಪಾರಿಗಳ ಸಂಘದ ಸದಸ್ಯರು, ಪೆಟ್ರೋಲ್‌ ಬಂಕ್‌, ಚಿತ್ರಮಂದಿರಗಳ ಮಾಲೀಕರು, ವರ್ತಕರ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ.

‘ಬೆಳಿಗ್ಗೆ 8 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಶಾಂತಿಯುತವಾಗಿ ಹೋರಾಟ ನಡೆಯಲಿದ್ದು ಮಂಡ್ಯ, ಮದ್ದೂರು
ಸ್ತಬ್ಧವಾಗಲಿವೆ. ವಿವಿಧೆಡೆ ಮೆರವಣಿಗೆ, ಬೈಕ್‌ ರ್‍ಯಾಲಿ ನಡೆಸಲಾಗುವುದು’ ಎಂದು ಸಮಿತಿಯ ಸಂಘಟನಾ ಕಾರ್ಯದರ್ಶಿ ಸುನಂದಾ ಜಯರಾಂ ತಿಳಿಸಿದರು.

‘ಕೆಆರ್‌ಎಸ್‌ ಜಲಾಶಯ ಸೇರಿದಂತೆ ವಿವಿಧೆಡೆ ಬಿಗಿ ಬಂದೋಬಸ್ತ್‌ ಮಾಡಲಾಗಿದೆ. ಕ್ಷಿಪ್ರ ಕಾರ್ಯಾಚರಣೆ ಪಡೆಯನ್ನು (ಆರ್‌ಎಎಫ್‌) ನಿಯೋಜಿಸಲಾಗಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎನ್‌.ಯತೀಶ್‌ ತಿಳಿಸಿದರು.

ಜಲಮಂಡಳಿ ಪಂಪ್‌ಹೌಸ್‌ಗೆ ಮುತ್ತಿಗೆ

ಕಾವೇರಿ ನದಿಯಿಂದ ಬೆಂಗಳೂರಿಗೆ ಕುಡಿಯುವ ನೀರು ಪೂರೈಸಲು ಬೆಂಗಳೂರು ಜಲಮಂಡಳಿಯು ಮಳವಳ್ಳಿ ತಾಲ್ಲೂಕು ತೊರೆಕಾಡನಹಳ್ಳಿ ಬಳಿ ನಿರ್ಮಿಸಿರುವ ಪಂಪ್‌ಹೌಸ್‌ಗೆ ವಿವಿಧ ಸಂಘಟನೆಗಳ ಮುಖಂಡರು ಮುತ್ತಿಗೆ ಹಾಕಲು ಯತ್ನಿಸಿದರು. ಪೊಲೀಸರು ಅವರನ್ನು ಬಂಧಿಸಿ, ನಂತರ ಬಿಡುಗಡೆ ಮಾಡಿದರು.

‘ಕಾವೇರಿ ನೀರು ಬಳಸುವ ಬೆಂಗಳೂರಿಗರು ಗಂಭೀರವಾಗಿ ಪ್ರತಿಭಟಿಸಿಲ್ಲ. ಚಿತ್ರರಂಗದ ಗಣ್ಯರೂ ಹೋರಾಡದಿದ್ದರೆ ಚಲನಚಿತ್ರ ವಾಣಿಜ್ಯ ಮಂಡಳಿ ಕಚೇರಿ ಎದುರು ಪ್ರತಿಭಟಿಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ಪಂಪ್‌ಹೌಸ್‌ ಗೇಟ್‌ ತೆರೆದು ಒಳನುಗ್ಗಲು ಯತ್ನಿಸಿದಾಗ ಪೊಲೀಸರು ಅವರನ್ನು ತಡೆದರು. ಆ ವೇಳೆ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆಯಿತು. ಪೊಲೀಸರು ಪ್ರತಿಭಟನಾಕಾರರನ್ನು ಎಳೆದು ವಾಹನಕ್ಕೆ ತುಂಬಿಕೊಂಡು ಹಲಗೂರು ಸಮೀಪದ ಕಲ್ಯಾಣಮಂಟಪವೊಂದಕ್ಕೆ ಕರೆದೊಯ್ದರು, ನಂತರ ಬಿಡುಗಡೆ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT