ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾವೇರಿ ನೀರು ಬಳಕೆಗೆ ನೀಲ ನಕ್ಷೆ ಅಗತ್ಯ: ಸುರೇಶ್‌ ಕುಮಾರ್‌

Published 1 ನವೆಂಬರ್ 2023, 20:52 IST
Last Updated 1 ನವೆಂಬರ್ 2023, 20:52 IST
ಅಕ್ಷರ ಗಾತ್ರ

ಬೆಂಗಳೂರು: ‘ರಾಜ್ಯದಲ್ಲಿ ಮುಂಗಾರು ಕೈಕೊಟ್ಟಿರುವುದರಿಂದ ಕಾವೇರಿ ಜಲಾನಯನ ವ್ಯಾಪ್ತಿಯಲ್ಲಿರುವ ಜಲಾಶಯಗಳಲ್ಲಿ ನೀರಿನ ಮಟ್ಟ ಶೇ 50 ಕ್ಕಿಂತಲೂ ಕಡಿಮೆ ಇದ್ದು, ಮುಂದಿನ ಮಳೆಗಾಲದವರೆಗೆ ಈಗ ಲಭ್ಯವಿರುವ ನೀರನ್ನು ಸಮರ್ಪಕವಾಗಿ ಬಳಸಿಕೊಳ್ಳಲು ನೀಲ ನಕ್ಷೆ ತಯಾರಿಸಬೇಕು’ ಎಂದು ಬಿಜೆಪಿ ಶಾಸಕ ಎಸ್‌.ಸುರೇಶ್‌ಕುಮಾರ್‌ ಅವರು ಒತ್ತಾಯಿಸಿದ್ದಾರೆ.

ಈ ಸಂಬಂಧ ಅವರು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಪತ್ರವೊಂದನ್ನು ಬರೆದಿದ್ದಾರೆ.

ಮುಂದಿನ 15 ದಿನಗಳ ಕಾಲ ತಮಿಳುನಾಡಿಗೆ ಪ್ರತಿ ದಿನ 2,600 ಕ್ಯೂಸೆಕ್‌ ನೀರು ಹರಿಸುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿ ರಾಜ್ಯಕ್ಕೆ ಸೂಚನೆ ನೀಡಿ ದೊಡ್ಡ ಶಾಕ್‌ ನೀಡಿದೆ. ಸಮಿತಿಯ ಆದೇಶ ಕುಡಿಯುವ ನೀರಿನ ಸರಬರಾಜಿಗೆ, ವಿಶೇಷವಾಗಿ ಬೆಂಗಳೂರು ನಗರದ ನಾಗರಿಕರಿಗೆ ದೊಡ್ಡ ಆತಂಕವನ್ನು ತಂದೊಡ್ಡಿದೆ ಎಂದು ಹೇಳಿದ್ದಾರೆ.

ಪತ್ರದ ಪ್ರಮುಖ ಅಂಶಗಳು

* ಕೂಡಲೇ ಬೆಂಗಳೂರು ನಗರದ ಶಾಸಕರಿಗೆ ಕುಡಿಯುವ ನೀರಿನ ಸರಬರಾಜಿನ ಪರಿಸ್ಥಿತಿ ಕುರಿತು ಸ್ಪಷ್ಟೀಕರಣ ನೀಡಬೇಕು. ಮುಂದಿನ ಜೂನ್‌ವರೆಗೆ ನಗರಕ್ಕೆ ಬೇಕಾಗುವ ಕುಡಿಯುವ ನೀರಿನ ಪ್ರಮಾಣ ಮತ್ತು ಲಭ್ಯತೆ ಇರುವ ನೀರಿನ ಪ್ರಮಾಣದ ಸ್ಪಷ್ಟೀಕರಣ ಅಗತ್ಯವಿದೆ.

*ಮುಂದಿನ ಜೂನ್‌ವರೆಗೂ ಕುಡಿಯುವ ನೀರು ಸರಬರಾಜು ಮಾಡಲು ಬೆಂಗಳೂರು ಜಲಮಂಡಳಿ ಹಾಕಿಕೊಂಡಿರುವ ಯೋಜನೆಗಳ ಕುರಿತು ವಿವರಣೆ ನೀಡಬೇಕು.

*ಹಿಂದೆಲ್ಲ ಮಾಡಿದಂತೆ, ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಎಲ್ಲಾ ಖಾಸಗಿ ಟ್ಯಾಂಕರ್‌ಗಳನ್ನು ಸರ್ಕಾರವೇ ತೆಗೆದುಕೊಂಡು ಆರ್‌ಟಿಓ ಮೂಲಕ ವಿವಿಧ ಕ್ಷೇತ್ರಗಳಿಗೆ ಹಂಚುವುದು ಅಗತ್ಯವಿದೆ.

* ವಾಣಿಜ್ಯ ಉದ್ದೇಶಗಳಿಗಾಗಿ ಉಪಯೋಗಿಸುತ್ತಿರುವ ಖಾಸಗಿ ಕೊಳವೆ ಬಾವಿಗಳನ್ನು ಬೆಂಗಳೂರು ನಾಗರಿಕರ ಉಪಯೋಗಕ್ಕಾಗಿ ಸರ್ಕಾರ ಮುಂದಿನ 9 ತಿಂಗಳ ಮಟ್ಟಿಗೆ ವಶಕ್ಕೆ ತೆಗೆದುಕೊಳ್ಳಬೇಕು. ಕೆಟ್ಟು ನಿಂತಿರುವ ಎಲ್ಲ ಕೊಳವೆ ಬಾವಿಗಳ ತುರ್ತು ದುರಸ್ತಿ ಮಾಡಬೇಕಿದೆ.

* ನೀರಿನ ದೊಡ್ಡ ಪ್ರಮಾಣದ ಸೋರುವಿಕೆಗಳನ್ನು ಕೂಡಲೇ ಪತ್ತೆ ಮಾಡಿ ಅದನ್ನೆಲ್ಲಾ ಸರಿಪಡಿಸುವ ಕಾರ್ಯ ಆಗಬೇಕು. ಕೆಪಿಟಿಸಿಎಲ್‌ ಮತ್ತು ಬೆಸ್ಕಾಂ ಜೊತೆಗೆ ಸಮನ್ವಯ ಸಾಧಿಸಿ, ಜಲ ಮಂಡಳಿಗಳ ಪಂಪ್‌ ಹೌಸ್‌ಗಳಿಗೆ ವಿದ್ಯುತ್‌ ಸರಬರಾಜಿನಲ್ಲಿ ಯಾವುದೇ ರೀತಿಯ ಅಡಚಣೆ ಆಗದಂತೆ ನೋಡಿಕೊಳ್ಳಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT