ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾವೇರಿ ನೀರು ಹಂಚಿಕೆ | ಸಿಎಂ ನೇತೃತ್ವದಲ್ಲಿ ನಾಳೆ ತಜ್ಞರ ಸಭೆ: ಎಚ್‌.ಕೆ. ಪಾಟೀಲ

Published 28 ಸೆಪ್ಟೆಂಬರ್ 2023, 9:44 IST
Last Updated 28 ಸೆಪ್ಟೆಂಬರ್ 2023, 9:44 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಕಾವೇರಿ ನದಿ ನೀರು ಹಂಚಿಕೆ ಸಮಸ್ಯೆ ಕುರಿತು ಚರ್ಚಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಾಳೆ(ಶುಕ್ರವಾರ) ತಜ್ಞರ ಸಭೆ ಕರೆಯಲಾಗಿದ್ದು, ಸಮಾಲೋಚನೆ ನಡೆಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು’ ಎಂದು ಸಚಿವ ಎಚ್‌.ಕೆ. ಪಾಟೀಲ ತಿಳಿಸಿದರು.

ಗುರುವಾರ ಸುದ್ದಿಗಾರರೊಂದಿಗೆ ಮಾನಾಡಿದ ಅವರು, ‘ಕಾವೇರಿ ನದಿ ನೀರು ಕಡಿಮೆಯಾಗುತ್ತಿರುವುದರಿಂದ ಸಂಕಷ್ಟದ ಪರಿಸ್ಥಿತಿ ಎದುರಾಗಿದೆ. ಇಂತಹ ದುರಿತ ಕಾಲದಲ್ಲಿ ನಾವು ಕಾನೂನಾತ್ಮಕವಾಗಿ ಜಾಗರೂಕತೆಯಿಂದ ಹೆಜ್ಜೆ ಇಡಬೇಕಿದೆ. ರಾಜ್ಯದ ಹಿತಕ್ಕೆ ಯಾವೆಲ್ಲ ಕ್ರಮಕೈಗೊಳ್ಳಬೇಕು ಅವೆಲ್ಲವನ್ನೂ ಮಾಡುತ್ತೇವೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಯವರು ಸುಪ್ರೀಂಕೋರ್ಟ್‌, ಹೈಕೋರ್ಟ್‌ನಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ನ್ಯಾಯಮೂರ್ತಿಗಳ, ವಕೀಲರ, ಜಲತಜ್ಞರ ಹಾಗೂ ಅನುಭವಿಗಳ ಸಭೆ ಕರೆದಿದ್ದಾರೆ. ಅವರ ಜೊತೆ ಸಮಾಲೋಚಿಸಿ, ಮಾರ್ಗದರ್ಶನ ಪಡೆದು ಮುಂದಿನ ಹೆಜ್ಜೆ ಇಡಲಾಗುವುದು’ ಎಂದರು.

ಬರದಿಂದಾಗಿ ರಾಜ್ಯದ ಜನತೆ ಸಂಕಷ್ಟ ಎದುರಿಸುತ್ತಿದೆ. ಹತಾಶೆ, ಆಕ್ರೋಶ ವ್ಯಕ್ತಪಡಿಸಲು ರಾಜ್ಯ ಬಂದ್‌ ಕರೆ ನೀಡಿದ್ದಾರೆ. ಎಲ್ಲರೂ ಶಾಂತ ರೀತಿಯಿಂದ ಪ್ರತಿಭಟನೆ ನಡೆಸಲಿ
–ಎಚ್‌.ಕೆ. ಪಾಟೀಲ, ಸಚಿವ

‘ಕಾವೇರಿ ನದಿಯಲ್ಲಿ ನೀರು ಎಷ್ಟು ಹರಿಯುತ್ತಿದೆ, ಅಣೆಕಟ್ಟೆಯಲ್ಲಿ ಎಷ್ಟು ನೀರು ಕಡಿಮೆಯಾಗಿದೆ ಎನ್ನುವುದು ತೆರೆದ ಪುಸ್ತಕ. ಬೆಂಗಳೂರಿನ ಜನತೆಗೆ ಕುಡಿಯಲು ನಾವು ನೀರನ್ನು ಉಳಿಸಿಕೊಳ್ಳಬೇಕು. ಬರದ ಈ ಸನ್ನಿವೇಶದ ಸಂದರ್ಭದಲ್ಲಿ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ(ಸಿಡಬ್ಲ್ಯೂಎಂಎ) ಸಹ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು. ಸಂಕಷ್ಟದ ಸೂತ್ರ ಕಂಡುಹಿಡಿಯಲು ಸುಪ್ರೀಂಕೋರ್ಟ್‌ ಮತ್ತು ಸಿಡಬ್ಲ್ಯೂಎಂಎಗೆ ನಾವು ಒತ್ತಾಯ ಮಾಡುತ್ತಲೇ ಇದ್ದೇವೆ’ ಎಂದು ಹೇಳಿದರು.

‘ಇಂಡಿಯಾ ಒಕ್ಕೂಟ ಬಲಗೊಳಿಸಿಕೊಳ್ಳಲು ಕಾಂಗ್ರೆಸ್‌ ತಮಿಳುನಾಡಿಗೆ ಕಾವೇರಿ ನದಿ ನೀರು ಹರಿಸುತ್ತಿದೆ’ ಎನ್ನುವ ಬಿಜೆಪಿ ಆರೋಪಕ್ಕೆ ಪ್ರತಿಕ್ರಿಯಿಸಿದ ಸಚಿವ ಪಾಟೀಲ, ‘ಕ್ಷುಲ್ಲಕ ರಾಜಕಾರಣ ಮಾಡುವುದನ್ನು ಬಿಜೆಪಿ ಬಿಡಬೇಕು. ಪ್ರಧಾನಿ ನರೇಂದ್ರ ಮೋದಿ ಅವರು ಎರಡೂ ರಾಜ್ಯದ ಮುಖ್ಯಮಂತ್ರಿಗಳ ಜೊತೆ ಮಾತನಾಡಿ ಸಮಸ್ಯೆ ಪರಿಹಾರಕ್ಕೆ ಯತ್ನಿಸಬೇಕು. ಇದು ರಾಜ್ಯಗಳ ನಡುವಿನ ವಿಶ್ವಾಸ ವೃದ್ಧಿಸಲು ಸಹಕಾರಿಯಾಗುತ್ತದೆ’ ಎಂದು ಅಭಿಪ್ರಾಯಪಟ್ಟರು.

‘ಹೆಚ್ಚುವರಿ ಡಿಸಿಎಂ ಕುರಿತು ಮಾತನಾಡಬಾರದು ಎಂದು ಹೈಕಮಾಂಡ್‌ ಎಚ್ಚರಿಕೆ ನೀಡಿದೆ. ಅಂತಹ ಹೇಳಿಕೆ ಪಕ್ಷಕ್ಕೆ ಬಲತರುವಂತಹದ್ದೂ ಅಲ್ಲ’ ಎಂದು ಶಾಸಕ ಬಸವರಾಜ ರಾಯರಡ್ಡಿ ಅವರ ಆರು ಡಿಸಿಎಂ ಹೇಳಿಕೆಗೆ ಸಚಿವ ಪಾಟೀಲ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT