ಶುಕ್ರವಾರ, 13 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಡಿಕೆ ಶಿವಕುಮಾರ್ ವಿರುದ್ಧದ CBI ತನಿಖೆ ಪ್ರಕರಣ: ತೀರ್ಪು ಕಾಯ್ದಿರಿಸಿದ ಹೈಕೋರ್ಟ್

Published : 12 ಆಗಸ್ಟ್ 2024, 15:25 IST
Last Updated : 12 ಆಗಸ್ಟ್ 2024, 15:25 IST
ಫಾಲೋ ಮಾಡಿ
Comments

ಬೆಂಗಳೂರು: ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧದ ಆದಾಯ ಮೀರಿದ ಆಸ್ತಿ ಗಳಿಕೆ ಪ್ರಕರಣದ ತನಿಖೆ ನಡೆಸಲು ಈ ಹಿಂದಿನ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರವು ಸಿಬಿಐಗೆ ಅನುಮತಿ ನೀಡಿದ್ದ ಆದೇಶವನ್ನು ಈಗಿನ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಹಿಂಪಡೆದಿರುವುದನ್ನು ಪ್ರಶ್ನಿಸಿರುವುದಕ್ಕೆ ಸಂಬಂಧಿಸಿದಂತೆ ದಾಖಲಾಗಿರುವ ಎರಡು ಪ್ರತ್ಯೇಕ ಅರ್ಜಿಗಳ ವಿಚಾರಣೆ ಮುಕ್ತಾಯಗೊಳಿಸಿದ ಹೈಕೋರ್ಟ್‌, ತೀರ್ಪು ಕಾಯ್ದಿರಿಸಿದೆ.

ಈ ಕುರಿತಂತೆ ಸಿಬಿಐ ಮತ್ತು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಸಲ್ಲಿಸಿರುವ ಅರ್ಜಿಗಳನ್ನು ನ್ಯಾಯಮೂರ್ತಿ ಕೆ.ಸೋಮಶೇಖರ್ ಮತ್ತು ಉಮೇಶ್‌ ಎಂ.ಅಡಿಗ ಅವರಿದ್ದ ವಿಭಾಗೀಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.

ಸಿಬಿಐ ಪರ ವಾದ ಮಂಡಿಸಿದ ಪಿ.ಪ್ರಸನ್ನಕುಮಾರ್, ‘ಈಗಿನ ರಾಜ್ಯ ಸರ್ಕಾರ ಸಿಬಿಐಗೆ ನೀಡಿರುವ ಅನುಮತಿ ಹಿಂಪಡೆದರೂ ಸಿಬಿಐ ದಾಖಲಿಸಿರುವ ಎಫ್ಐಆರ್ ತನ್ನ ಅಸ್ತಿತ್ವ ಉಳಿಸಿಕೊಳ್ಳಲಿದೆ’ ಎಂದರು.

ರಾಜ್ಯ ಸರ್ಕಾರದ ಪರ ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲ ಕಪಿಲ್‌ ಸಿಬಲ್‌ ಸುದೀರ್ಘ ವಾದ ಮಂಡಿಸಿ, ‘ಸಿಬಿಐ ಒಪ್ಪಿಗೆ ನೀಡುವ ವಿಚಾರದಲ್ಲಿ ನ್ಯಾಯಾಲಯಕ್ಕೆ ಸರ್ಕಾರ ವಂಚಿಸಿದೆ. ಇಲ್ಲಿ ಅನುಮತಿ ಪಡೆದಿರುವುದು ಪ್ರಶ್ನೆಯಲ್ಲ. ಒಪ್ಪಿಗೆಯನ್ನು ಕಾನೂನುಬಾಹಿರವಾಗಿ ನೀಡಲಾಗಿದೆ. ನಾವು ಒಕ್ಕೂಟ ವ್ಯವಸ್ಥೆಯಲ್ಲಿದ್ದು, ಸರ್ಕಾರವು ಕಾನೂನನ್ನು ತನಗಿಷ್ಟ ಬಂದ ಹಾಗೆ ಬಳಕೆ ಮಾಡಲಾಗದು. ಶಿವಕುಮಾರ್ ವಿರುದ್ಧದ ಆದಾಯ ತೆರಿಗೆ ಪ್ರಕರಣವನ್ನು ಸುಪ್ರೀಂ ಕೋರ್ಟ್ ಈಗಾಗಲೇ ವಜಾ ಮಾಡಿದೆ’ ಎಂದರು. ಅಂತೆಯೇ, ಡಿ.ಕೆ.ಶಿವಕುಮಾರ್ ಪರ ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲ ಅಭಿಷೇಕ್‌ ಮನು ಸಿಂಘ್ವಿ ವಾದ ಮಂಡಿಸಿದರು. 

ಶಾಸಕ ಬಸನಗೌಡ ಪಾಟೀಲ ಯತ್ನಾಳ ಪರ ಹೈಕೋರ್ಟ್ ವಕೀಲ ವೆಂಕಟಶ್ ಪಿ.ದಳವಾಯಿ, ‘ಭ್ರಷ್ಟಾಚಾರ ನಿಗ್ರಹ ಕಾಯ್ದೆ ಅಡಿ ಅಪರಾಧದ ತನಿಖೆ ನಡೆಸಲು ಸಿಬಿಐ ಸಂಪೂರ್ಣ ಸ್ವತಂತ್ರವಾಗಿರುತ್ತದೆ. ಇಲ್ಲಿ ಅರ್ಜಿದಾರರಿಗೆ ಸಂವಿಧಾನದ 131ನೇ ವಿಧಿ ಅನ್ವಯ ಊರ್ಜಿತವಾಗುವುದಿಲ್ಲ. ಒಮ್ಮೆ ಸಿಬಿಐ ಪ್ರಕರಣ ದಾಖಲಿಸಿದ ಮೇಲೆ ಅದು ತಾರ್ಕಿಕ ಅಂತ್ಯ ಕಾಣಬೇಕು. ಇದರಲ್ಲಿ ಕೇಂದ್ರ ಅಥವಾ ರಾಜ್ಯ ಸರ್ಕಾರದ ಯಾವುದೇ ಪಾತ್ರ ಇರುವುದಿಲ್ಲ’ ಎಂದರು. ವಾದ–ಪ್ರತಿವಾದ ಆಲಿಸಿದ ನ್ಯಾಯಪೀಠ, ವಿಚಾರಣೆ ಮುಕ್ತಾಯಗೊಳಿಸಿ ತೀರ್ಪು ಕಾಯ್ದಿರಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT