ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಎಸ್‌ಒಯು ಅಕ್ರಮ: ಸಿಬಿಐ ಎಫ್‌ಐಆರ್‌

Published 5 ಅಕ್ಟೋಬರ್ 2023, 15:40 IST
Last Updated 5 ಅಕ್ಟೋಬರ್ 2023, 15:40 IST
ಅಕ್ಷರ ಗಾತ್ರ

ನವದೆಹಲಿ: ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ 2009–10ನೇ ಸಾಲಿನಿಂದ 2015–16ರವರೆಗೆ ನಡೆದಿದೆ ಎನ್ನಲಾದ ಹಣ ದುರ್ಬಳಕೆ ಹಗರಣದ ಸಂಬಂಧ ಸಿಬಿಐ ಎಫ್‌ಐಆರ್ ದಾಖಲಿಸಿದೆ. 

ವಿ.ವಿಯ ಸಹಯೋಗ ಸಂಸ್ಥೆಯ ಕಾರ್ಯಕ್ರಮದಲ್ಲಿ ₹300 ಕೋಟಿಗೂ ಹೆಚ್ಚು ದುರುಪಯೋಗ ನಡೆದಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಅಪರಿಚಿತ ಅಧಿಕಾರಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ತನಿಖಾ ಸಂಸ್ಥೆಯ ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ. 

ವಿ.ವಿಯು ದೇಶದಾದ್ಯಂತ ಹಾಗೂ ವಿದೇಶಗಳಲ್ಲಿ ಸಹ ಸಹಯೋಗ ಸಂಸ್ಥೆಗಳನ್ನು ತೆರೆದಿತ್ತು. ಈ ಸಂಸ್ಥೆಗಳಿಗೆ ದಾಖಲಾಗುವ ವಿದ್ಯಾರ್ಥಿಗಳ ದಾಖಲಾತಿ ಶುಲ್ಕ, ಪರೀಕ್ಷಾ ಶುಲ್ಕ ಹಾಗೂ ಇತರ ಶುಲ್ಕಗಳನ್ನು ವಿವಿಗೆ ವರ್ಗಾಯಿಸಬೇಕಿತ್ತು. ಆದರೆ, 2013–14 ಹಾಗೂ 2014–15ರ ಆರ್ಥಿಕ ವರ್ಷದ ಲೆಕ್ಕಪರಿಶೋಧನೆಯಲ್ಲಿ ವಿವಿಧ ಸಹಯೋಗ ಸಂಸ್ಥೆಗಳಿಂದ ₹50 ಕೋಟಿಗೂ ಹೆಚ್ಚಿನ ಮೊತ್ತದ ಲೆಕ್ಕಾಚಾರ ನಾಪತ್ತೆಯಾಗಿರುವುದು ಕಂಡು ಬಂದಿತ್ತು ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ. 

ಜತೆಗೆ, 2009–10ರಿಂದ 2012–13ರ ಆರ್ಥಿಕ ವರ್ಷಗಳಲ್ಲಿ ಕೂಡಾ ಸುಮಾರು ₹250 ಕೋಟಿಗಳ ಲೆಕ್ಕಾಚಾರ ನಾಪತ್ತೆಯಾಗಿದೆ ಎಂದು ಎಫ್‌ಐಆರ್‌ನಲ್ಲಿ ತಿಳಿಸಲಾಗಿದೆ. 

ವಿ.ವಿಯ ಅಧ್ಯಯನ ಕೇಂದ್ರಗಳ ಸ್ಥಾಪನೆ, ಪರೀಕ್ಷೆ, ವಿದ್ಯಾರ್ಥಿಗಳಿಂದ ಶುಲ್ಕ ಸಂಗ್ರಹ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಈ ಅವಧಿಯಲ್ಲಿ ₹300 ಕೋಟಿಯಷ್ಟು ಹಣ ದುರ್ಬಳಕೆ ಆಗಿರುವುದು ಕಂಡುಬಂದಿತ್ತು. ಈ ಕುರಿತು 2022ರ ಫೆಬ್ರುವರಿಯಲ್ಲಿ ವಿಶ್ವವಿದ್ಯಾಲಯದ ಕುಲಸಚಿವರ ಪತ್ರ ಹಾಗೂ ವಿ.ವಿಯ ಆಡಳಿತ ಮಂಡಳಿಯ ಸಭೆಯ ನಿರ್ಣಯ ಆಧರಿಸಿ ರಾಜ್ಯಪಾಲರು ಪ್ರಕರಣದ ತನಿಖೆಗೆ ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಿದ್ದರು.

ಅದರಂತೆ ರಾಜ್ಯ ಸರ್ಕಾರವು ಈ ವರ್ಷ ಮಾರ್ಚ್‌ 13ರಂದು ಸಿಬಿಐ ತನಿಖೆಗೆ ಒಪ್ಪಿಗೆ ಕೊಟ್ಟಿತ್ತು. ಸಂಬಂಧಿಸಿದ ಅಧಿಕಾರಿಗಳು, ಲೆಕ್ಕಪರಿಶೋಧಕರು, ಬ್ಯಾಂಕುಗಳು ಸಿಬಿಐಗೆ ಅಗತ್ಯ ಮಾಹಿತಿ ಒದಗಿಸುವಂತೆ ಸೂಚಿಸಿತ್ತು. 

ಈ ಅವಧಿಯಲ್ಲಿ ರಂಗಪ್ಪ ಮತ್ತು ಎಂ.ಜಿ. ಕೃಷ್ಣನ್‌ ಕುಲಪತಿಗಳಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT