ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಅವಿತಿರುವ ಶಂಕಿತ ಉಗ್ರರಿಗೆ ಸಿಸಿಬಿ ಪೊಲೀಸರ ಜಂಟಿ ಶೋಧ

ಕೇಂದ್ರ ತನಿಖಾ ಸಂಸ್ಥೆಗಳ ಜೊತೆ ಮಾಹಿತಿ ಹಂಚಿಕೆ
Published 23 ಜುಲೈ 2023, 0:22 IST
Last Updated 23 ಜುಲೈ 2023, 0:22 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಜನದಟ್ಟಣೆ ಸ್ಥಳಗಳಲ್ಲಿ ಸ್ಫೋಟಕ್ಕೆ ಸಂಚು ರೂಪಿಸಿದ್ದ ಪ್ರಕರಣದಲ್ಲಿ ಐವರು ಶಂಕಿತರನ್ನು ಬಂಧಿಸಿರುವ ಸಿಸಿಬಿ ಪೊಲೀಸರಿಗೆ, ರಾಜ್ಯದಲ್ಲಿ ಮತ್ತಷ್ಟು ಶಂಕಿತರು ಅಡಗಿರಬಹುದು ಎಂಬ ಸಂಶಯ ಶುರುವಾಗಿದೆ.

ಶಂಕಿತರ ಪತ್ತೆಗಾಗಿ ರಾಷ್ಟ್ರೀಯ ತನಿಖಾ ದಳ (ಎನ್‌ಐಎ), ಕೇಂದ್ರ ಗುಪ್ತದಳ ಹಾಗೂ ಇತರೆ ತನಿಖಾ ಸಂಸ್ಥೆಗಳ ಜೊತೆ ಸಿಸಿಬಿ ಪೊಲೀಸರು ಜಂಟಿ ಶೋಧ ಆರಂಭಿಸಿದ್ದಾರೆ. ಕೇಂದ್ರ ಗೃಹ ಇಲಾಖೆಗೂ ವರದಿ ಕಳುಹಿಸಿರುವ ಪೊಲೀಸರು, ‘ಮತ್ತಷ್ಟು ಶಂಕಿತರು ಇರುವ ಅನುಮಾನವಿದ್ದು, ತನಿಖೆ ಮುಂದುವರಿಸಲಾಗಿದೆ’ ಎಂದು ಹೇಳಿರುವುದಾಗಿ ಗೊತ್ತಾಗಿದೆ.

‘2008ರಲ್ಲಿ ಬೆಂಗಳೂರಿನಲ್ಲಿ ನಡೆದಿದ್ದ ಬಾಂಬ್‌ ಸ್ಫೋಟದ ಆರೋಪಿ ಟಿ. ನಾಸೀರ್‌, ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿದ್ದುಕೊಂಡೇ ಭಯೋತ್ಪಾದನಾ ಕೃತ್ಯಕ್ಕೆ ಸಂಚು ರೂಪಿಸಿದ್ದ. ಜೈಲಿನಲ್ಲಿ ಈತನ ಸಂಪರ್ಕಕ್ಕೆ ಬಂದಿದ್ದ ಹಲವರು, ಕಾನೂನುಬಾಹಿರ ಚಟುವಟಿಕೆ ನಡೆಸಲು ಒಪ್ಪಿಕೊಂಡಿದ್ದರು ಎಂಬ ಬಗ್ಗೆ ಮಾಹಿತಿ ಇದೆ. ಹೀಗಾಗಿ, ನಾಸೀರ್ ಸಂಪರ್ಕದಲ್ಲಿದ್ದ ಎಲ್ಲರನ್ನೂ ವಿಚಾರಣೆ ನಡೆಸಬೇಕಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಆರ್‌.ಟಿ.ನಗರದಲ್ಲಿ 2017ರಲ್ಲಿ ನಡೆದಿದ್ದ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ ಜುನೇದ್ ಅಹಮ್ಮದ್ ಹಾಗೂ ಇತರರು, ನಾಸೀರ್ ಜೊತೆ ಒಡನಾಟ ಬೆಳೆಸಿಕೊಂಡಿದ್ದರು. ಜುನೇದ್ ಹಾಗೂ ಇತರರು, ಯುವಕರಾಗಿದ್ದರಿಂದ ಅವರನ್ನೇ ಬಳಸಿಕೊಂಡು ಬಾಂಬ್ ಸ್ಫೋಟಿಸಲು ಮುಂದಾಗಿದ್ದ. ನಾಸೀರ್ ಮಾತು ಕೇಳಿ ಭಯೋತ್ಪಾದನಾ ಕೃತ್ಯಕ್ಕೆ ಸಂಚು ರೂಪಿಸಿದ್ದ ಸೈಯದ್ ಸುಹೇಲ್ ಖಾನ್ (24), ಜಾಹೀದ್ ತಬ್ರೇಜ್ (25), ಸೈಯದ್ ಮುದಾಸೀರ್ ಪಾಷಾ (28), ಮಹಮ್ಮದ್ ಫೈಜಲ್ ರಬ್ಬಾನಿ (30) ಹಾಗೂ ಮೊಹಮ್ಮದ್ ಉಮರ್‌ನನ್ನು (29) ಈಗಾಗಲೇ ಬಂಧಿಸಲಾಗಿದೆ. ಜುನೇದ್ ವಿದೇಶದಲ್ಲಿದ್ದು, ಬಂಧನಕ್ಕೆ ಕ್ರಮ ಕೈಗೊಳ್ಳಲಾಗಿದೆ’ ಎಂದು ತಿಳಿಸಿವೆ.

‘ಜುನೇದ್ ಹಾಗೂ ಐವರಲ್ಲದೇ ಮತ್ತಷ್ಟು ಮಂದಿ ನಾಸೀರ್ ಜೊತೆ ಸಂಪರ್ಕದಲ್ಲಿದ್ದಾರೆ. ಅವರೆಲ್ಲರೂ ಸ್ಥಳೀಯರೆಂಬ ಮಾಹಿತಿ ಇದೆ. ಮನೆ, ಸಂಬಂಧಿಕರ ಮನೆ ಹಾಗೂ ಸ್ನೇಹಿತರ ಮನೆಗಳಲ್ಲಿ ಶೋಧ ನಡೆಸಲಾಗುತ್ತಿದೆ. ಕೆಲವರು ನಾಪತ್ತೆಯಾಗಿದ್ದಾರೆ’ ಎಂದು ಹೇಳಿವೆ.

ಹಂಚಿಕೆ ಆಗಿರುವ ಸ್ಫೋಟಕ: ‘ಭಯೋತ್ಪಾದನಾ ಕೃತ್ಯಗಳನ್ನು ತಡೆಯಲು ಕೇಂದ್ರ ಹಾಗೂ ರಾಜ್ಯಗಳ ತನಿಖಾ ಸಂಸ್ಥೆಗಳು ಚುರುಕಿನಿಂದ ಕೆಲಸ ಮಾಡುತ್ತಿವೆ. ಸಣ್ಣದೊಂದು ಸುಳಿವು ಸಿಕ್ಕರೂ ಆರೋಪಿಗಳನ್ನು ಬಂಧಿಸುತ್ತಿವೆ. ಈ ಸಂಗತಿ ತಿಳಿದಿದ್ದ ನಾಸೀರ್, ಯಾರಿಗೂ ಸುಳಿವು ಸಿಗಬಾರದೆಂದು ಸ್ಫೋಟಕಗಳನ್ನು ಬೇರೆ ಬೇರೆ ಕಡೆ ಹಂಚಿಕೆ ಮಾಡಿರುವ ಮಾಹಿತಿ ತನಿಖೆಯಿಂದ ಪತ್ತೆಯಾಗಿದೆ’ ಎಂದು ಮೂಲಗಳು ತಿಳಿಸಿವೆ.

‘ಯಾರ ಬಳಿ ಯಾವ ಸ್ಫೋಟಕ ಇರಬೇಕು? ಅದನ್ನು ಎಲ್ಲಿಂದ ತರಬೇಕು? ಯಾರಿಗೂ ಕೊಡಬೇಕು? ಅದಕ್ಕೆ ಹಣ ನೀಡುವವರು ಯಾರು? ಎಂಬಿತ್ಯಾದಿ ಮಾಹಿತಿ ನಾಸೀರ್‌ಗೆ ಗೊತ್ತಿತ್ತು. ಆತನೇ, ಸ್ಫೋಟಕಗಳನ್ನು ತರಿಸಿ ಶಂಕಿತರ ಬಳಿ ಇರಿಸಿದ್ದ. ರಾಜ್ಯದಲ್ಲಿ ಇದ್ದಾರೆ ಎನ್ನಲಾದ ಮತ್ತಷ್ಟು ಶಂಕಿತರ ಬಳಿ ಸ್ಫೋಟಕಗಳು ಇರುವ ಮಾಹಿತಿಯೂ ಇದೆ’ ಎಂದು ಹೇಳಿವೆ.

ನಾಸೀರ್ ಕಸ್ಟಡಿಗೆ ಪ್ರಕ್ರಿಯೆ: ‘ಸ್ಫೋಟಕ್ಕೆ ಸಂಚು ರೂಪಿಸಿದ್ದ ಪ್ರಕರಣದಲ್ಲಿ ಟಿ. ನಾಸೀರ್‌, ಪ್ರಮುಖ ಆರೋಪಿ. ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿರುವ ಈತನನ್ನು ಹೆಚ್ಚಿನ ವಿಚಾರಣೆಗಾಗಿ ಕಸ್ಟಡಿಗೆ ಪಡೆಯಲು ಪ್ರಕ್ರಿಯೆ ಆರಂಭಿಸಲಾಗಿದೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT