ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಕಪಟ್ಟಿ ಮುದ್ರಿಸಿ ಮಾರಾಟ: ‘ಕೆಐಒಎಸ್’ ಮೇಲೆ ದಾಳಿ

ಎಸ್ಸೆಸ್ಸೆಲ್ಸಿ– ಪಿಯುಸಿ ತತ್ಸಮಾನದ 7,360 ಅಂಕಪಟ್ಟಿ ಜಪ್ತಿ - ಬೆಂಗಳೂರು, ಹುಬ್ಬಳ್ಳಿಯಲ್ಲಿ ಸಿಸಿಬಿ ಕಾರ್ಯಾಚರಣೆ
Published 28 ಏಪ್ರಿಲ್ 2023, 16:18 IST
Last Updated 28 ಏಪ್ರಿಲ್ 2023, 16:18 IST
ಅಕ್ಷರ ಗಾತ್ರ

ಬೆಂಗಳೂರು: ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ತತ್ಸಮಾನ ವಿದ್ಯಾರ್ಹತೆಯ ನಕಲಿ ಅಂಕಪಟ್ಟಿಗಳನ್ನು ಮುದ್ರಿಸಿ ಮಾರುತ್ತಿದ್ದ ಜಾಲ ಭೇದಿಸಿರುವ ಸಿಸಿಬಿ ಪೊಲೀಸರು, ಕರ್ನಾಟಕ ಇನ್‌ಸ್ಟಿಟ್ಯೂಟ್ ಆಫ್ ಒಪನಿಂಗ್ ಸ್ಕೂಲಿಂಗ್ (ಕೆಐಒಎಸ್) ಸಂಸ್ಥೆ ಕಚೇರಿಗಳ ಮೇಲೆ ದಾಳಿ ಮಾಡಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಕೆಐಒಎಸ್ ವ್ಯವಸ್ಥಾಪಕ ನಿರ್ದೇಶಕ ಪ್ರಭುರಾಜ್ ಬಿ. ಹೊರಪೇಟಿ (36), ವೈ.ಇ.ಟಿ ಇನ್‌ಸ್ಟಿಟ್ಯೂಟ್ ಸ್ಥಾಪಕ ಎನ್‌. ಮೈಲಾರಿ ಅಲಿಯಾಸ್ ಪಾಟೀಲ ಹಾಗೂ ಇಗ್ನೈಟ್ ಗ್ರೂಪ್ ಆಫ್ ಇನ್‌ಸ್ಟಿಟ್ಯೂಟ್ ಸ್ಥಾಪಕ ಮೊಹಮ್ಮದ್ ತೈಹೀಬ್ ಅಹಮ್ಮದ್ (31) ಬಂಧಿತರು.

‘ಬೆಂಗಳೂರು ಯಲಚೇನಹಳ್ಳಿಯ ಶಿವಶಕ್ತಿನಗರದಲ್ಲಿರುವ ವೈ.ಇ.ಟಿ ಇನ್‌ಸ್ಟಿಟ್ಯೂಟ್ ಕಚೇರಿ ಹಾಗೂ ಹುಬ್ಬಳ್ಳಿ ವಿದ್ಯಾನಗರದ ಪ್ರಶಾಂತ ಕಾಲೊನಿಯಲ್ಲಿರುವ ಕೆಐಒಎಸ್ ಕಚೇರಿ ಮೇಲೆ ದಾಳಿ ಮಾಡಲಾಗಿದೆ. ‘ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರದಿಂದ ಮಾನ್ಯತೆ ಪಡೆದಿರುವ ಕೆಐಒಎಸ್– ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ತತ್ಸಮಾನ ವಿದ್ಯಾರ್ಹತೆ’ ಎಂಬುದಾಗಿ ನಮೂದಿಸಿರುವ 7,360 ನಕಲಿ ಅಂಕಪಟ್ಟಿಗಳು, ಬಿ.ಎ ಪದವಿಯ 3 ನಕಲಿ ಅಂಕಪಟ್ಟಿಗಳು, ಪರೀಕ್ಷೆ ಬರೆಯಲು ಉಪಯೋಗಿಸುವ 5,500 ಉತ್ತರ ಪತ್ರಿಕೆಗಳು, ವಿದ್ಯಾರ್ಥಿಗಳ ಪ್ರವೇಶಾತಿಯ 25 ಪುಸ್ತಕಗಳು, ಬಣ್ಣದ ಪ್ರಿಂಟರ್‌ ಹಾಗೂ 4 ಲ್ಯಾಪ್‌ಟಾಪ್‌ಗಳನ್ನು ಜಪ್ತಿ ಮಾಡಲಾಗಿದೆ’ ಎಂದು ಸಿಸಿಬಿ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

‘ಹುಬ್ಬಳ್ಳಿ ವಿದ್ಯಾನಗರ ಗುರುದತ್ತ ಕಾಲೊನಿಯ ನಿವಾಸಿ ಪ್ರಭುರಾಜ್, ಜನನಿ ಅಕಾಡೆಮಿ ಇಂಡಿಯಾ ಕಂಪನಿ ಸ್ಥಾಪಿಸಿದ್ದ. ಅದರಡಿ ಕೆಐಒಎಸ್ ಸಂಸ್ಥೆ ತೆರೆದಿದ್ದ. ದೂರಶಿಕ್ಷಣ ಮೂಲಕ ಎಸ್ಸೆಸ್ಸೆಲ್ಸಿ– ಪಿಯುಸಿ ತತ್ಸಮಾನ ವಿದ್ಯಾರ್ಹತೆ ಹಾಗೂ ಶಿಕ್ಷಕರ ತರಬೇತಿ ಕೋರ್ಸ್ ನಡೆಸುತ್ತಿರುವುದಾಗಿ ಹೇಳುತ್ತಿದ್ದ. ವಿದ್ಯಾರ್ಥಿಗಳಿಂದ ₹ 50 ಸಾವಿರದಿಂದ ₹ 1.50 ಲಕ್ಷ ಪಡೆದು, ನಕಲಿ ಅಂಕಪಟ್ಟಿ ನೀಡಿ ವಂಚಿಸುತ್ತಿದ್ದನೆಂಬ ಮಾಹಿತಿ ತನಿಖೆಯಿಂದ ಗೊತ್ತಾಗಿದೆ’ ಎಂದು ತಿಳಿಸಿದರು.

‘ದೂರಶಿಕ್ಷಣ ಮೂಲಕ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಿರುವುದಾಗಿ ಆರೋಪಿ ಹೇಳುತ್ತಿದ್ದ. ಈತನ ಮಾತು ನಂಬಿದ್ದ ಹಲವು ಸಂಸ್ಥೆಗಳು, ಪ್ರಶಸ್ತಿ ಸಹ ನೀಡಿದ್ದವು. ಪ್ರತಿಷ್ಠಿತ ಕಾಲೇಜುಗಳಲ್ಲಿ ಆರೋಪಿ ಉಪನ್ಯಾಸ ನೀಡುತ್ತಿದ್ದ. ನಕಲಿ ಅಂಕಪಟ್ಟಿ ಮಾರಾಟದಿಂದ ಈತ ಆಸ್ತಿ ಸಂಪಾದನೆ ಮಾಡಿರುವ ಸಂಗತಿ ಪತ್ತೆಯಾಗಿದ್ದು, ಆ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ’ ಎಂದು ಹೇಳಿದರು.

ಪ್ರಮುಖ ಆರೋಪಿ ಪ್ರಭುರಾಜ್: ‘ಆರೋಪಿ ಮೈಲಾರಿಯನ್ನು ವಶಕ್ಕೆ ಪಡೆದಾಗ, ‘ಪ್ರಭುರಾಜ್ ಅವರು ನಕಲಿ ಅಂಕಪಟ್ಟಿ ಮುದ್ರಿಸಿ ಮಾರುತ್ತಿದ್ದಾರೆ. ಅವರಿಂದ ಪಡೆದ ಅಂಕಪಟ್ಟಿಯನ್ನೇ ಸಚಿನ್ ಅವರಿಗೆ ನೀಡಿದ್ದೆ’ ಎಂದಿದ್ದ. ಅದರನ್ವಯ ಪ್ರಭುರಾಜ್‌ನನ್ನು ವಶಕ್ಕೆ ಪಡೆದು ವಿಚಾರಿಸಿದಾಗ, ನಕಲಿ ಅಂಕಪಟ್ಟಿ ಜಾಲ ಪತ್ತೆಯಾಯಿತು’ ಎಂದು ಅಧಿಕಾರಿ ಹೇಳಿದರು.

‘ಅರ್ಧಕ್ಕೆ ಶಿಕ್ಷಣ ಮೊಟಕುಗೊಳಿಸಿದ್ದ ಹಾಗೂ ಉನ್ನತ ವ್ಯಾಸಂಗ ಮಾಡಬೇಕೆಂಬ ಆಸೆ ಇಟ್ಟುಕೊಂಡಿದ್ದ ವಿದ್ಯಾರ್ಥಿಗಳನ್ನು ಆರೋಪಿಗಳು ಸಂಪರ್ಕಿಸುತ್ತಿದ್ದರು. ಕರ್ನಾಟಕ ಸರ್ಕಾರ, ಭಾರತ ಸರ್ಕಾರ ಹಾಗೂ ಹಲವು ವಿಶ್ವವಿದ್ಯಾಲಯಗಳಿಂದ ಮಾನ್ಯತೆ ಪಡೆದು ದೂರಶಿಕ್ಷಣದ ಮೂಲಕ ಅಂಕಪಟ್ಟಿ ನೀಡುತ್ತಿರುವುದಾಗಿ ಆರೋಪಿಗಳು ಹೇಳುತ್ತಿದ್ದರು’ ಎಂದು ತಿಳಿಸಿದರು.

‘ಹುಬ್ಬಳ್ಳಿಯ ಕಚೇರಿಯಲ್ಲಿ ನಕಲಿ ಅಂಕಪಟ್ಟಿ ಮುದ್ರಣ ಮಾಡಲಾಗುತ್ತಿತ್ತು. 10 ಸಾವಿರಕ್ಕೂ ವಿದ್ಯಾರ್ಥಿಗಳಿಂದ ಹಣ ಪಡೆದಿರುವ ಆರೋಪಿಗಳು, ಅವರಿಗೆ ನಕಲಿ ಅಂಕಪಟ್ಟಿ ನೀಡಿರುವ ಮಾಹಿತಿ ಇದೆ. ವಿದ್ಯಾರ್ಥಿಗಳ ಮಾಹಿತಿ ಭರ್ತಿ ಮಾಡಿರುವ 70 ಅಂಕಪಟ್ಟಿಗಳು ಹಾಗೂ ಯಾವುದೇ ಮಾಹಿತಿ ದಾಖಲಿಸದೆ ಖಾಲಿ ಇರುವ 7,290 ನಕಲಿ ಅಂಕಪಟ್ಟಿಗಳು ಆರೋಪಿಗಳ ಬಳಿ ಸಿಕ್ಕಿವೆ’ ಎಂದು ಪೊಲೀಸ್ ಅಧಿಕಾರಿ ಹೇಳಿದರು.

‘ನಕಲಿ ಅಂಕಪಟ್ಟಿ ಬಳಸಿಕೊಂಡು ಕೆಲವರು, ಕೆಲಸಕ್ಕೆ ಸೇರಿದ್ದಾರೆ. ಪ್ರಭುರಾಜ್ ಜೊತೆ ಕೃತ್ಯದಲ್ಲಿ ಮತ್ತಷ್ಟು ಮಂದಿ ಶಾಮೀಲಾಗಿರುವ ಮಾಹಿತಿ ಇದ್ದು, ತನಿಖೆ ಮುಂದುವರಿಸಲಾಗಿದೆ’ ಎಂದರು.

ಮೊಹಮ್ಮದ್ ತಹೀಬ್ ಅಹಮ್ಮದ್
ಮೊಹಮ್ಮದ್ ತಹೀಬ್ ಅಹಮ್ಮದ್
ಮೈಲಾರಿ ಪಾಟೀಲ
ಮೈಲಾರಿ ಪಾಟೀಲ
ಹುಬ್ಬಳ್ಳಿಯಲ್ಲಿನ ಕರ್ನಾಟಕ ಇನ್‌ಸ್ಟಿಟ್ಯೂಟ್ ಆಫ್ ಒಪನಿಂಗ್ ಸ್ಕೂಲಿಂಗ್ (ಕೆಐಒಎಸ್) ಸಂಸ್ಥೆ ಕಚೇರಿ
ಹುಬ್ಬಳ್ಳಿಯಲ್ಲಿನ ಕರ್ನಾಟಕ ಇನ್‌ಸ್ಟಿಟ್ಯೂಟ್ ಆಫ್ ಒಪನಿಂಗ್ ಸ್ಕೂಲಿಂಗ್ (ಕೆಐಒಎಸ್) ಸಂಸ್ಥೆ ಕಚೇರಿ

Cut-off box - ₹1.80 ಲಕ್ಷಕ್ಕೆ ಬಿ.ಎ ಅಂಕಪಟ್ಟಿ! ‘ಸಿ. ಸಚಿನ್ ಎಂಬುವರು ದೂರಶಿಕ್ಷಣ ಮೂಲಕ ಬಿ.ಎ ಪದವಿ ಪಡೆಯಲು ಮುಂದಾಗಿದ್ದರು. ವೈ.ಇ.ಟಿ ಇನ್‌ಸ್ಟಿಟ್ಯೂಟ್‌ನ ಮೈಲಾರಿಯನ್ನು ಸಂಪರ್ಕಿಸಿ ₹ 1.80 ಲಕ್ಷ ಪಾವತಿಸಿದ್ದರು. ಕೆಲ ತಿಂಗಳ ನಂತರ ಯಾವುದೇ ಪರೀಕ್ಷೆ ನಡೆಸದೇ ಮಿರತ್‌ನ ಚೌಧರಿ ಚರಣ್ ಸಿಂಗ್ ವಿಶ್ವವಿದ್ಯಾಲಯದ ಅಂಕಪಟ್ಟಿ ನೀಡಲಾಗಿತ್ತು’ ಎಂದು ಸಿಸಿಬಿ ಪೊಲೀಸರು ತಿಳಿಸಿದರು. ‘ಅಂಕಪಟ್ಟಿ ಬಗ್ಗೆ ಅನುಮಾನಗೊಂಡ ಸಚಿನ್ ಪರಿಶೀಲನೆ ನಡೆಸಿದಾಗ ನಕಲಿ ಎಂಬುದು ಗೊತ್ತಾಗಿತ್ತು. ಕೃತ್ಯದ ಬಗ್ಗೆ ಅವರು ಪುಟ್ಟೇನಹಳ್ಳಿ ಠಾಣೆಗೆ ದೂರು ನೀಡಿದ್ದರು. ಅದರನ್ವಯ ದಾಖಲಾದ ಪ್ರಕರಣದ ತನಿಖೆಯನ್ನು ಸಿಸಿಬಿಗೆ ವಹಿಸಲಾಗಿತ್ತು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT