ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮೈಸೂರು–ಚೆನ್ನೈ ಬುಲೆಟ್‌ ರೈಲು| ಡಿಪಿಆರ್‌ ಸಲ್ಲಿಸಲು ಕೇಂದ್ರ ನಿರ್ದೇಶನ: ಸೋಮಣ್ಣ

ಡಿಪಿಆರ್‌ ಸಲ್ಲಿಸಲು ಕೇಂದ್ರ ಸರ್ಕಾರದ ನಿರ್ದೇಶನ– ಸೋಮಣ್ಣ
Published : 29 ಜುಲೈ 2022, 16:01 IST
ಫಾಲೋ ಮಾಡಿ
Comments

ಬೆಂಗಳೂರು: ‘ಮೈಸೂರು– ಚೆನ್ನೈ ನಡುವೆ ಸಂಚರಿಸಲಿರುವ ರಾಜ್ಯದ ಮೊಟ್ಟಮೊದಲ ಬುಲೆಟ್‌ ರೈಲು ಯೋಜನೆ ಕುರಿತು ವಿಸ್ತೃತ ಯೋಜನಾ ವರದಿ ಸಲ್ಲಿಸುವಂತೆ ನ್ಯಾಷನಲ್‌ ಹೈಸ್ಪೀಡ್‌ ರೈಲ್ವೆ ನಿಗಮಕ್ಕೆ ಕೇಂದ್ರ ಸರ್ಕಾರ ನಿರ್ದೇಶನ ನೀಡಿದೆ’ ಎಂದು ಮೂಲಸೌಲಭ್ಯ ಅಭಿವೃದ್ಧಿ ಸಚಿವ ವಿ. ಸೋಮಣ್ಣ ತಿಳಿಸಿದರು.

ಸುದ್ದಿಗಾರರ ಜತೆ ಶುಕ್ರವಾರ ಮಾತನಾಡಿದ ಅವರು, ‘ಮೈಸೂರು– ಬೆಂಗಳೂರು– ಚೆನ್ನೈ ಮಧ್ಯದ ಮಾರ್ಗವನ್ನು ಮೂರು ಗಂಟೆಗಳಲ್ಲಿ ಕ್ರಮಿಸಲು ಅನುಕೂಲವಾಗುವಂತೆ ಬುಲೆಟ್‌ ರೈಲು ಯೋಜನೆ ಸಿದ್ಧವಾಗುತ್ತಿದೆ. ₹ 1.15 ಲಕ್ಷ ಕೋಟಿ ವೆಚ್ಚದ ಈ ಯೋಜನೆಗೆ ಸಂಪೂರ್ಣ ಅನುದಾನವನ್ನು ಕೇಂದ್ರ ಸರ್ಕಾರ ಒದಗಿಸಲಿದೆ. ರಾಜ್ಯ ಸರ್ಕಾರ ಅಗತ್ಯ ಜಮೀನು ಒದಗಿಸಲಿದೆ’ ಎಂದರು.

ಬುಲೆಟ್‌ ರೈಲು ಸಂಚಾರ ಆರಂಭವಾದರೆ ಮೈಸೂರಿನಿಂದ ಬೆಂಗಳೂರಿಗೆ 45 ನಿಮಿಷಗಳಲ್ಲಿ ತಲುಪಬಹುದು. ಬೆಂಗಳೂರು– ಮೈಸೂರು ಮಾರ್ಗದಲ್ಲಿ ಹತ್ತು ಪಥಗಳ ರಸ್ತೆಯ ಪಕ್ಕದಲ್ಲೇ ಬುಲೆಟ್‌ ರೈಲು ಮಾರ್ಗಕ್ಕೆ ಜಮೀನು ಒದಗಿಸುವ ಚಿಂತನೆ ನಡೆದಿದೆ. ಶೀಘ್ರದಲ್ಲಿ ಈ ಸಂಬಂಧ ಉನ್ನತಮಟ್ಟದ ಸಭೆ ನಡೆಸಲಾಗುವುದು ಎಂದು ಹೇಳಿದರು.

ರಾಜ್ಯದಲ್ಲಿ ಒಂಬತ್ತು ರೈಲ್ವೆ ಮಾರ್ಗಗಳ ಕಾಮಗಾರಿಗಳು ಪ್ರಗತಿಯಲ್ಲಿವೆ. ಈ ಯೋಜನೆಗಳಿಗೆ ಅಗತ್ಯವಿರುವ ಜಮೀನುಗಳನ್ನು ರಾಜ್ಯ ಸರ್ಕಾರವೇ ಸ್ವಾಧೀನಪಡಿಸಿಕೊಂಡು, ಒದಗಿಸುತ್ತಿದೆ. ಇದಕ್ಕಾಗಿ ₹ 1,666 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ. ಈ ಮಾರ್ಗಗಳಲ್ಲಿ ರೈಲ್ವೆ ಮೇಲು ಸೇತುವೆ ಹಾಗೂ ಕೆಳ ಸೇತುವೆಗಳ ನಿರ್ಮಾಣಕ್ಕೆ ₹ 191.98 ಕೋಟಿ ಒದಗಿಸಲಾಗಿದೆ ಎಂದರು.

ಬೆಂಗಳೂರಿನ ಯಶವಂತಪುರ– ಚನ್ನಸಂದ್ರ ಮತ್ತು ಬೈಯಪ್ಪನಹಳ್ಳಿ– ಹೊಸೂರು ರೈಲ್ವೆ ಮಾರ್ಗಗಳನ್ನು ಜೋಡಿ ಮಾರ್ಗಗಳಾಗಿ ವಿಸ್ತರಿಸಲಾಗುತ್ತಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತಲಾ ಶೇಕಡ 50ರಷ್ಟು ವೆಚ್ಚ ಭರಿಸುತ್ತಿವೆ. ಯಶವಂತಪುರ-ಚನ್ನಸಂದ್ರ ನಡುವೆ ಜೋಡಿ ಮಾರ್ಗ ನಿರ್ಮಾಣಕ್ಕೆ ₹ 315 ಕೋಟಿ ವೆಚ್ಚವಾಗಲಿದ್ದು, ರಾಜ್ಯ ಸರ್ಕಾರ ₹ 165 ಕೋಟಿ ಭರಿಸಲಿದೆ. ಬೈಯಪ್ಪನಹಳ್ಳಿ-ಹೊಸೂರು ಜೋಡಿಮಾರ್ಗ ನಿರ್ಮಾಣಕ್ಕೆ ₹ 499 ಕೋಟಿ ವೆಚ್ಚವಾಗಲಿದೆ. ರಾಜ್ಯ ಸರ್ಕಾರ ₹ 250 ಕೋಟಿ ಒದಗಿಸಬೇಕಿದ್ದು, ₹ 65 ಕೋಟಿ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT