ಮಂಡ್ಯ: ‘ದೇವೇಗೌಡರ ಕುಟುಂಬವನ್ನು ಮುಗಿಸಲು ಕಾಂಗ್ರೆಸ್‌ನವರು ಸಂಚು ಮಾಡಿದ್ದರು. ಆಗ ಕಾಂಗ್ರೆಸ್‌ನಲ್ಲಿರುವ ಒಕ್ಕಲಿಗರು ಏಕೆ ಹೋರಾಟ ಮಾಡಲಿಲ್ಲ. ಆಗ ಏಕೆ ಒಕ್ಕಲಿಗತನ ಪ್ರದರ್ಶನ ಮಾಡಲಿಲ್ಲ. ಇದೀಗ ಸಿದ್ದರಾಮಯ್ಯನವರನ್ನು ಬದಲಾವಣೆ ಮಾಡಿ ಒಕ್ಕಲಿಗರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿ. ಪೆನ್ನು, ಪೇಪರ್ ಹಿಡಿದುಕೊಂಡು ಒಬ್ಬರು ಸಿದ್ಧವಾಗಿದ್ದಾರಲ್ಲ’ ಎಂದು ಆರ್. ಅಶೋಕ್ ಅವರು ಡಿ.ಕೆ.ಶಿವಕುಮಾರ್ ಹೆಸರು ಹೇಳದೇ ತಿರುಗೇಟು ನೀಡಿದರು.
ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿ, ‘ಶಾಸಕ ಮುನಿರತ್ನರಿಗೆ ನೋಟಿಸ್ ಕೊಟ್ಟಿದ್ದೇವೆ. ಎಫ್.ಎಸ್.ಎಲ್. ವರದಿ ಬಂದ ನಂತರ ಕ್ರಮ ಜರುಗಿಸುತ್ತೇವೆ. ಉಪ್ಪು ತಿಂದವರು ನೀರು ಕುಡಿಯಲೇಬೇಕು. ತಪ್ಪು ಮಾಡಿದವರು ಶಿಕ್ಷೆ ಅನುಭವಿಸುತ್ತಾರೆ’ ಎಂದು ಈಗಾಗಲೇ ಸ್ಪಷ್ಟವಾಗಿ ಹೇಳಿದ್ದೇನೆ ಎಂದರು.
ಕುಮಾರಸ್ವಾಮಿ ರಾಜೀನಾಮೆಗೆ ಕಾಂಗ್ರೆಸ್ ಒತ್ತಾಯ ವಿಚಾರಕ್ಕೆ ಪ್ರತಿಕ್ರಿಯಿಸಿ, ‘ಸಿಎಂ ಮತ್ತು ಡಿಸಿಎಂ ಮೇಲೆ ಆರೋಪ ಬಂದಿಲ್ಲವಾ? ಇವರು ಸತ್ಯಹರಿಶ್ಚಂದ್ರರಾ? ಕುಮಾರಸ್ವಾಮಿ ಏನು ತಪ್ಪು ಮಾಡಿದ್ದಾರೆ. ಸರ್ಕಾರವನ್ನು ಟೀಕೆ ಮಾಡಿದ್ರೆ, ಹೋರಾಟ ಮಾಡಿದ್ರೆ ಕೇಸ್ ಹಾಕಿಸುತ್ತಾರೆ’ ಎಂದು ಹರಿಹಾಯ್ದರು.