ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರದ್ದು ಪ್ರಾಯೋಜಿತ ‍ಪ್ರತಿಭಟನೆ: ಬೊಮ್ಮಾಯಿ

ಬೆಲೆ ಏರಿಕೆ: ಕಾಂಗ್ರೆಸ್‌ ಟೀಕೆಗೆ ಸಿಎಂ ತಿರುಗೇಟು: ರೈತರಿಗೆ ಅವಮಾನ–ಡಿಕೆಶಿ
Last Updated 20 ಸೆಪ್ಟೆಂಬರ್ 2021, 16:44 IST
ಅಕ್ಷರ ಗಾತ್ರ

ಬೆಂಗಳೂರು: ‘ಕೇಂದ್ರ ಸರ್ಕಾರದ ಕೃಷಿ ಕಾಯ್ದೆ ವಿರೋಧಿಸಿ ರೈತರು ವರ್ಷದಿಂದ ನಡೆಸುತ್ತಿರುವ ಪ್ರತಿಭಟನೆ
ಪ್ರಾಯೋಜಿತವಾದುದು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಅಗತ್ಯ ವಸ್ತುಗಳ ಬೆಲೆ ಏರಿಕೆ ಕುರಿತು ನಿಯಮ 69ರಡಿ ವಿಧಾನಸಭೆಯಲ್ಲಿ ನಡೆದ ಚರ್ಚೆಗೆ, ಮುಖ್ಯಮಂತ್ರಿಯಾದ ಬಳಿಕ ಮೊದಲ ಬಾರಿಗೆ ಸರ್ಕಾರದ ಪರವಾಗಿ ಉತ್ತರ ನೀಡಿದ ಅವರು, ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿಅಗತ್ಯ ವಸ್ತುಗಳ ಬೆಲೆ ಎಷ್ಟಿತ್ತು ಎಂಬ ಬಗ್ಗೆ ಅಂಕಿ ಅಂಶಗಳ ಸಮೇತ ಉತ್ತರ ನೀಡಿದರು. ‘ನಮ್ಮ ಸರ್ಕಾರದ ಅವಧಿಯಲ್ಲಿ ಮಾತ್ರ ಬೆಲೆ ಏರಿಕೆಯಾಗಿಲ್ಲ’ ಎಂದೂ ಅವರು ಸಮರ್ಥಿಸಿಕೊಂಡರು.

‘ಹರಿಯಾಣ ಹಾಗೂ ಪಂಜಾಬ್‌ ರೈತರ ಪ್ರತಿಭಟನೆಗೆ ಎಂಎಸ್‌ಪಿ ರಾಜಕಾರಣವೇ ಕಾರಣ. ಕಮಿಷನ್‌ ಕೈತಪ್ಪುತ್ತದೆ ಎಂಬ ಕಾರಣಕ್ಕೆ ರೈತರನ್ನು ಛೂ ಬಿಡಲಾಗಿದೆ’ ಎಂದು ಕಿಡಿಕಾರಿದರು.

ಈ ಮಾತಿಗೆ ಆಕ್ರೋಶ ವ್ಯಕ್ತಪಡಿಸಿದ ಕಾಂಗ್ರೆಸ್‌ನ ಡಿ.ಕೆ.ಶಿವಕುಮಾರ್, ‘ಕೇಂದ್ರದ ಕರಾಳ ನೀತಿಯ ವಿರುದ್ಧ ರೈತರು ವರ್ಷದಿಂದ ಹೋರಾಟ ಮಾಡುತ್ತಿದ್ದಾರೆ. ಪ್ರಾಯೋಜಿತ ಹೋರಾಟ ಎನ್ನುವ ಮೂಲಕ ಮುಖ್ಯಮಂತ್ರಿ ಅವರು ರೈತರಿಗೆ ಅವಮಾನ ಮಾಡುತ್ತಿದ್ದಾರೆ’ ಎಂದರು.

ಆಗ ಮಧ್ಯ‍ಪ್ರವೇಶಿಸಿದ ಕಾಂಗ್ರೆಸ್‌ನ ಕೆ.ಆರ್‌.ರಮೇಶ್‌ ಕುಮಾರ್‌, ‘ಈ ಹಿಂದೆ ವಿದೇಶಿ ಪ್ರಾಯೋಜಿತ ಹಾಗೂ ಬಹುರಾಷ್ಟ್ರೀಯ ಕಂಪನಿಗಳ ಪ್ರಾಯೋಜಿತ ಹೋರಾಟ ಎಂದು ಬಿಂಬಿಸಲಾಗುತ್ತಿತ್ತು. ಇದು ಅಂತಹುದೇ ಪ್ರಾಯೋಜಿತ ಹೋರಾಟವೇ’ ಎಂದು ಮುಖ್ಯಮಂತ್ರಿ ಅವರನ್ನು ಕೆಣಕಿದರು.

ಬಸವರಾಜ ಬೊಮ್ಮಾಯಿ, ‘ವಿದೇಶಿ ಪ್ರಾಯೋಜಿತ ಹೋರಾಟ ಎಂಬ ಆರೋಪ ಇಂದಿರಾ ಗಾಂಧಿ ಕಾಲದಿಂದಲೂ ಇದೆ. ಇದು ನಮ್ಮ ಕಾಲದಲ್ಲಿ ಬಂದಿದ್ದು ಅಲ್ಲ. ರೈತರ ಹೋರಾಟದ ಹಿಂದೆ ವಿದೇಶಿ ಕೈವಾಡವೂ ಸ್ವಲ್ಪ ಮಟ್ಟಿಗೆ ಇರಬಹುದು’ ಎಂದು ಹೇಳಿದರು. ‘ಈ ಮಾತಿಗೆ ಸದನದ ಹೊರಗೆ ಉತ್ತರ ನೀಡುತ್ತೇವೆ’ ಎಂದು ರಮೇಶ್‌ ಕುಮಾರ್‌ ಹೇಳಿದರು.

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ‘ಇಂತಹ ಚಟುವಟಿಕೆಗಳಿಗೆ ಕುಮ್ಮಕ್ಕು ಕೊಡುವವರು ಆಡಳಿತ ಪಕ್ಷದ ಜತೆಗೆ ಇದ್ದಾರೆ’ ಎಂದು ವ್ಯಂಗ್ಯವಾಡಿದರು.

ಲೂಟಿ ಜಟಾಪಟಿ: ಅಗತ್ಯ ವಸ್ತುಗಳ ಬೆಲೆ ಏರಿಕೆ ಮೂಲಕ ಕೇಂದ್ರ ಸರ್ಕಾರವು ಕ್ರಿಮಿನಲ್‌ ಲೂಟಿ ಮಾಡುತ್ತಿದೆ ಎಂಬ ವಿಷಯವು ಕಾಂಗ್ರೆಸ್‌ ಹಾಗೂ ಬಿಜೆಪಿ ನಡುವೆ ವಾಕ್ಸಮರಕ್ಕೆ ಕಾರಣವಾಯಿತು.

‘ಬೆಲೆ ಏರಿಕೆಯನ್ನು ಕ್ರಿಮಿನಲ್‌ ಲೂಟಿ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. 60ರ ದಶಕದಿಂದಲೂ ಬೆಲೆ ಏರಿಕೆ ಪ್ರಕ್ರಿಯೆ ನಿರಂತರವಾಗಿ ನಡೆದಿದೆ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲೂ ಬೆಲೆ ಏರಿಕೆ ಆಗಿದೆ. ಅದನ್ನು ಕಾಂಗ್ರೆಸ್‌ನ ಕ್ರಿಮಿನಲ್‌ ಲೂಟಿ ಎಂದು ಕರೆಯಬಹುದಲ್ಲವೇ’ ಎಂದು ಪ್ರಶ್ನಿಸಿದ ಬೊಮ್ಮಾಯಿ, ಯುಪಿಎ ಸರ್ಕಾರದ ಅವಧಿಯಲ್ಲಿ ಪೆಟ್ರೋಲ್‌ ಬೆಲೆಯನ್ನು ಶೇ 60ರಷ್ಟು ಏರಿಸಲಾಗಿತ್ತು. ನಮ್ಮ ಸರ್ಕಾರದ ಅವಧಿಯಲ್ಲಿ ಶೇ 30ರಷ್ಟು ಮಾತ್ರ ಏರಿಸಲಾಗಿದೆ ಎಂದು ಪ್ರತಿಪಾದಿಸಿದರು.

‘ಶೇಕಡಾವಾರು ಲೆಕ್ಕ ಹಾಕುವುದು ಇದ್ಯಾವ ಪದ್ಧತಿ’ ಎಂದೂ ಕಾಂಗ್ರೆಸ್‌ ಸದಸ್ಯರು ಪ್ರಶ್ನಿಸಿದರು.

‘ನಿಮ್ಮದೇ ಪಕ್ಷದ ಸುಬ್ರಹ್ಮಣ್ಯ ಸ್ವಾಮಿ ಬೆಲೆ ಏರಿಕೆ ಬಗ್ಗೆ ಮಾತನಾಡಿದ್ದಾರಲ್ಲ’ ಎಂದು ಪ್ರಶ್ನಿಸಿದಸಿದ್ದರಾಮಯ್ಯ,ಬಿಜೆಪಿ ಸರ್ಕಾರವೇ ಜನರ ಲೂಟಿ ಮಾಡುತ್ತಿದೆ ಎಂದೂ ಆರೋಪಿಸಿದರು. ‘ನಿಮ್ಮದು ಭೂತದ ಬಾಯಲ್ಲಿ ಭಗವದ್ಗೀತೆ’ ಎಂದು ಮುಖ್ಯಮಂತ್ರಿ ತಿರುಗೇಟು ನೀಡಿದರು. ಈ ವೇಳೆ ಕಾಂಗ್ರೆಸ್‌ ಹಾಗೂ ಬಿಜೆಪಿ ಸದಸ್ಯರ ನಡುವೆ ವಾಕ್ಸಮರ ನಡೆಯಿತು. ಕಾಂಗ್ರೆಸ್‌ನಿಂದ ಕ್ರಿಮಿನಲ್‌ ಲೂಟಿ ಎಂದು ಬಿಜೆಪಿ ಸದಸ್ಯರು ದೂರಿದರೆ, ಬಿಜೆಪಿ ಸರ್ಕಾರ ಲೂಟಿ ಮಾಡುತ್ತಿದೆ ಎಂದೂ ಕಾಂಗ್ರೆಸ್‌ ಸದಸ್ಯರು ಟೀಕಿಸಿದರು.

ಬಸವರಾಜ ಬೊಮ್ಮಾಯಿ, ‘2014–17ರಿಂದ ಪೆಟ್ರೋಲಿಯಂ ಉತ್ಪನ್ನಗಳಿಂದ ₹36 ಲಕ್ಷ ಕೋಟಿ ವರಮಾನ ಬಂದಿದೆ. ಅದರಲ್ಲಿ ಶೇ 40 ಮೊತ್ತವನ್ನು ರಾಜ್ಯಗಳಿಗೆ ನೀಡಲಾಗಿದೆ’ ಎಂದರು. ‘ಕೇಂದ್ರ ಸರ್ಕಾರವು ಕೃಷಿ ಸಮ್ಮಾನ್‌ ಯೋಜನೆ ಜಾರಿ ಮಾಡಿದೆ. ಕೃಷಿ ಉತ್ಪನ್ನಗಳ ಬೆಲೆಯನ್ನೂ ಏರಿಸಲಾಗಿದೆ. ಕೋವಿಡ್‌ ಅವಧಿಯಲ್ಲಿ ಜನರು ಹಸಿವಿನಿಂದ ಸಾಯದಂತೆ ನೋಡಿಕೊಂಡಿದೆ’ ಎಂದೂ ಸಮರ್ಥಿಸಿಕೊಂಡರು.

ಪೆಟ್ರೋಲ್‌, ಡೀಸೆಲ್‌ಗಳ ಮಾರಾಟ ತೆರಿಗೆಯನ್ನು ಇಳಿಸುವಂತೆ ಈ ಹಿಂದಿನ ಸರ್ಕಾರಗಳ ಮೇಲೂ ಒತ್ತಡ ಇತ್ತು. ಆದರೆ, ಯಾವ ಸರ್ಕಾರವೂ ಈ ಕೆಲಸ ಮಾಡಿಲ್ಲ ಎಂದು ಬೊಮ್ಮಾಯಿ ಟೀಕಿಸಿದರು. ಈಗಲೂ ಅಂತಹ ಪ್ರಸ್ತಾವ ನಮ್ಮ ಸರ್ಕಾರದ ಮುಂದಿಲ್ಲ ಎಂದೂ ಹೇಳಿದರು.

ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ, ‘ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಲೀಟರ್‌ಗೆ ₹1.25 ಬೆಲೆ ಏರಿಸಲಾಗಿತ್ತು. ಮತ್ತೆ ₹3 ದರ ಇಳಿಸಿದ್ದೆವು’ ಎಂದು ನೆನಪಿಸಿದರು.

‘ಜನಾರ್ದನ್‌ ಹೋಟೆಲ್‌ ದೋಸೆ ಬೆಲೆ ಏರಿಲ್ಲವೇ?’
‘ನಗರದ ಜನಾರ್ದನ್ ಹೋಟೆಲ್‌ ಮಸಾಲೆ ದೋಸೆ ಬೆಲೆ ಏರಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಕುತೂಹಲದಿಂದ ಅಲ್ಲಿನ ಬೆಲೆ ಪಟ್ಟಿಯನ್ನು ತರಿಸಿಕೊಂಡೆ. ಅವರು ಹೇಳಿದಂತೆ ಇಡ್ಲಿ ಹಾಗೂ ಮಸಾಲೆ ದೋಸೆ ಬೆಲೆ ದುಪ್ಪಟ್ಟು ಆಗಿಲ್ಲ’ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.

‘2019 ಹಾಗೂ 20ರಲ್ಲಿ ಮಸಾಲೆ ದೋಸೆ ಬೆಲೆ ₹80 ಇತ್ತು. ಈ ವರ್ಷ ₹90 ಆಗಿದೆ. ಅದು ಸಹಜ ಬೆಲೆ ಏರಿಕೆ. ಸಿದ್ದರಾಮಯ್ಯ ಅವರಿಗೆ ಯಾರೋ ತಪ್ಪು ಮಾಹಿತಿ ನೀಡಿದ್ದಾರೆ’ ಎಂದೂ ಕುಟುಕಿದರು. ‘ಮಸಾಲೆ ದೋಸೆ ವಿಷಯ ಪಕ್ಕಕ್ಕೆ ಇಡಿ. ಅಡುಗೆ ಎಣ್ಣೆಗಳ ಬೆಲೆ ಹೆಚ್ಚಾದುದರ ಬಗ್ಗೆ ಮಾತನಾಡಿ’ ಎಂದು ಸಿದ್ದರಾಮಯ್ಯ ಕಿವಿಮಾತು ಹೇಳಿದರು.

ಕಾಂಗ್ರೆಸ್‌ ಸಭಾತ್ಯಾಗ
ಬೆಲೆ ಏರಿಕೆ ವಿಚಾರವಾಗಿ ಮುಖ್ಯಮಂತ್ರಿಯವರ ಉತ್ತರದಿಂದ ತೃಪ್ತರಾಗದ ಕಾಂಗ್ರೆಸ್‌ ಸದಸ್ಯರು ಸಭಾತ್ಯಾಗ ಮಾಡಿದರು. ಕಾವೇರಿದ ವಾತಾವರಣದಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ಸದಸ್ಯರು ಪರಸ್ಪರ ವಾಗ್ದಾಳಿ ನಡೆಸಿದ್ದೂ ಅಲ್ಲದೆ, ಧಿಕ್ಕಾರ ಮತ್ತಿತರ ಘೋಷಣೆಗಳನ್ನು ಕೂಗಿದರು.

‘ಭಾರತ ಮಾತ್ರವಲ್ಲ, ಇಡೀ ವಿಶ್ವವೇ ಕೋವಿಡ್‌ ಮತ್ತು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಸರ್ಕಾರ ಜನರಿಂದ ಸಂಗ್ರಹಿಸಿದ ತೆರಿಗೆಯನ್ನು ಬಡ ಜನರ ಕಲ್ಯಾಣಕ್ಕಾಗಿ ನ್ಯಾಯೋಚಿತವಾಗಿ ಬಳಸಲಾಗುತ್ತಿದೆ. ಯುಪಿಎ ಅವಧಿಯಲ್ಲೂ ತೆರಿಗೆ ಹೊರೆ ವಿಧಿಸಲಾಗಿತ್ತು. ಆಗ ನಾವು ಪ್ರತಿಭಟನೆ ನಡೆಸಿದಾಗ ತೆರಿಗೆ ಪ್ರಮಾಣ ಇಳಿಸಿದ್ದೀರಾ? ಆರ್ಥಿಕ ಶಿಸ್ತು ಕಾಪಾಡಲು ಅನಿವಾರ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಮುಂಬರುವ ದಿನಗಳಲ್ಲಿ ತೆರಿಗೆ ಇಳಿಸುವ ವಿಶ್ವಾಸ ಇದೆ’ ಎಂದು ಬೊಮ್ಮಾಯಿ ಸಮರ್ಥಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT