ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಂಗಾ ಕಲ್ಯಾಣ | ‌‌2 ತಿಂಗಳಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸಿ: ಸಿದ್ದರಾಮಯ್ಯ ಸೂಚನೆ

Published 13 ಸೆಪ್ಟೆಂಬರ್ 2023, 15:36 IST
Last Updated 13 ಸೆಪ್ಟೆಂಬರ್ 2023, 15:36 IST
ಅಕ್ಷರ ಗಾತ್ರ

ಬೆಂಗಳೂರು: ‘ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆ ಬಾವಿಗಳಿಗೆ ವಿದ್ಯುತ್‌ ಸಂಪರ್ಕ ಕಲ್ಪಿಸಲು ಬಾಕಿ ಇರುವ ಎಲ್ಲ 1,948 ಅರ್ಜಿಗಳನ್ನು ಎರಡು ತಿಂಗಳಲ್ಲಿ ಇತ್ಯರ್ಥಪಡಿಸಬೇಕು’ ಎಂದು ಇಂಧನ ಇಲಾಖೆಯ ಅಧಿಕಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಜೊತೆ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಬುಧವಾರ ಕೂಡಾ ಮುಖ್ಯಮಂತ್ರಿ ಸಭೆ ನಡೆಸಿದರು.

ವಿದ್ಯುದೀಕರಣಕ್ಕೆ ಅರ್ಜಿಗಳು ಬಾಕಿ ಉಳಿದಿರುವ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಮುಖ್ಯಮಂತ್ರಿ, ‘ವಿದ್ಯುತ್ ಸಂಪರ್ಕ ಒದಗಿಸಲು ಎಸ್ಕಾಂಗಳು ಅನಗತ್ಯ ವಿಳಂಬ ಮಾಡಬಾರದು. ಶುಲ್ಕ ಪಾವತಿಸಿಲ್ಲ ಎಂದು ಅರ್ಜಿಗಳನ್ನು ಬಾಕಿ ಉಳಿಸಿಕೊಳ್ಳಬಾರದು. ಟ್ರಾನ್ಸ್‌ಫಾರ್ಮರ್‌ಗಳಿಲ್ಲ, ಕಂಬಗಳಿಲ್ಲ ಎಂಬ ನೆಪಗಳನ್ನೂ ಹೇಳಬಾರದು’ ಎಂದೂ ಅಧಿಕಾರಿಗಳಿಗೆ ಸೂಚಿಸಿದರು.

‘ಅನಗತ್ಯವಾಗಿ ವಿಳಂಬ ಮಾಡುವುದು ಅಪರಾಧ’ ಎಂದು ಎಚ್ಚರಿಕೆ ನೀಡಿದ ಅವರು, ಜೆಸ್ಕಾಂ ಮತ್ತು ಹೆಸ್ಕಾಂಗಳಲ್ಲಿ ಬಾಕಿ ಅರ್ಜಿಗಳ ಸಂಖ್ಯೆ ಹೆಚ್ಚಿರುವುದನ್ನು ಪರಿಶೀಲಿಸಿದ ಮುಖ್ಯಮಂತ್ರಿ, ಅಭಿಯಾನ ಕೈಗೆತ್ತಿಕೊಂಡು ವಿದ್ಯುದೀಕರಣ ಕೈಗೊಳ್ಳಲು ಸೂಚಿಸಿದರು.

ಜೇಬಿನಲ್ಲಿ ಅರ್ಜಿ ಇಟ್ಟುಕೊಂಡು ಏನು ಮಾಡುತ್ತೀರಿ?: ‘ವಿದ್ಯುತ್ ಉಪಕೇಂದ್ರ ಆರಂಭಿಸಲು ಮತ್ತು ಟ್ರಾನ್ಸ್ ಫಾರ್ಮರ್ ಲೈನ್‌ಗೆ ಭೂಮಿ ನೀಡುವಂತೆ ಎಷ್ಟು ಅರ್ಜಿಗಳು ಬಂದಿವೆ’ ಎಂದು ಮುಖ್ಯಮಂತ್ರಿ ಪ್ರಶ್ನಿಸಿದರು.

ಅದಕ್ಕೆ ಅಧಿಕಾರಿಯೊಬ್ಬರ ಉತ್ತರದಿಂದ ಅಸಮಾಧಾನಗೊಂಡ ಮುಖ್ಯಮಂತ್ರಿ, ‘ಅರ್ಜಿಗಳನ್ನೆಲ್ಲ ಜೇಬಿನಲ್ಲಿ ಇಟ್ಟುಕೊಂಡು ಏನು ಮಾಡುತ್ತೀರಿ? ಮೊದಲು ಎಲ್ಲ ಅರ್ಜಿಗಳನ್ನು ಇತ್ಯರ್ಥಪಡಿಸಿ’ ಎಂದು ಸೂಚಿಸಿದರು.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿಗಳ ಜೊತೆ ಸಭೆ ನಡೆಸಿದ ಮುಖ್ಯಮಂತ್ರಿ, 2,443 ಹಿಂದುಳಿದ ವರ್ಗಗಳ ಹಾಸ್ಟೆಲ್‌ಗಳಲ್ಲಿ ಕೇವಲ 981 ಹಾಸ್ಟೆಲುಗಳಿಗೆ ಮಾತ್ರ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲಾಗಿದ್ದು, ಉಳಿದ 1,462 ಹಾಸ್ಟೆಲುಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು. ಪ್ರತಿ ತಿಂಗಳು ಹಾಸ್ಟೆಲುಗಳಿಗೆ ದಿಢೀರ್‌ ಭೇಟಿ ನೀಡಬೇಕು. ಹಾಸ್ಟೆಲುಗಳ ತ್ಯಾಜ್ಯ ನಿರ್ವಹಣೆಗೆ ಕ್ರಮ ಕೈಗೊಳ್ಳಬೇಕು. ನಗರ ಸ್ಥಳೀಯ ಸಂಸ್ಥೆಗಳು ಬಾಲಕಿಯರ ವಿದ್ಯಾರ್ಥಿನಿಲಯಗಳಿಗೆ ಹೀಟ್‌ ಪಂಪ್‌ಗಳನ್ನು ಒದಗಿಸಬೇಕು. ಹಾಸ್ಟೆಲುಗಳ ಕಟ್ಟಡ ನಿರ್ಮಾಣಕ್ಕಾಗಿ 120 ನಿವೇಶನಗಳನ್ನು ಒದಗಿಸಲು ತಕ್ಷಣ ಕ್ರಮ ವಹಿಸಬೇಕು ಎಂದು ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT