ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರೈಸ್ತ ಉದ್ಯಮಿಗಳು, ಶಿಕ್ಷಣ ತಜ್ಞರಿಂದ ರಾಮಮಂದಿರ ನಿರ್ಮಾಣಕ್ಕೆ ₹1 ಕೋಟಿ ದೇಣಿಗೆ

ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ ನೇತೃತ್ವದಲ್ಲಿ ಕ್ರೈಸ್ತ ಸಮುದಾಯದ ಪ್ರಮುಖರ ಸಭೆ
Last Updated 7 ಫೆಬ್ರುವರಿ 2021, 7:46 IST
ಅಕ್ಷರ ಗಾತ್ರ

ಬೆಂಗಳೂರು: ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮ ಮಂದಿರ ನಿರ್ಮಾಣಕ್ಕೆ ರಾಜ್ಯದ ಕ್ರೈಸ್ತ ಸಮುದಾಯದ ಉದ್ಯಮಿಗಳು, ಶಿಕ್ಷಣ ತಜ್ಞರು ₹1 ಕೋಟಿಗೂ ಹೆಚ್ಚು ದೇಣಿಗೆ ನೀಡಿದ್ದಾರೆ.

ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರು ನಗರದಲ್ಲಿ ಭಾನುವಾರ ಆಯೋಜಿಸಿದ್ದ ಸಭೆಯಲ್ಲಿ ಭಾಗವಹಿಸಿದ್ದ ಕ್ರೈಸ್ತ ಸಮುದಾಯದ ಉದ್ಯಮಿಗಳು, ಶಿಕ್ಷಣ ತಜ್ಞರು, ಅನಿವಾಸಿ ಭಾರತೀಯರು, ಸಿಇಒಗಳು, ಮಾರ್ಕೆಟಿಂಗ್ ತಜ್ಞರು, ಸಮಾಜ ಸೇವಕರು, ಸಮುದಾಯದ ಮುಖಂಡರು ಮಂದಿರ ನಿರ್ಮಾಣಕ್ಕೆ ನೆರವು ನೀಡುವ ಭರವಸೆ ನೀಡಿದರು.

ಬಿಜೆಪಿ ಎಲ್ಲರ ಪಕ್ಷ: ‘ಬಿಜೆಪಿ ಅಲ್ಪಸಂಖ್ಯಾತರ ವಿರುದ್ಧವಿರುವ ಪಕ್ಷ ಎಂಬುದು ಅಕ್ಷರಶಃ ಸುಳ್ಳು. ಅನೇಕ ವರ್ಷಗಳಿಂದ ಇಂಥ ಅಪಪ್ರಚಾರವನ್ನು ನಡೆಸಿಕೊಂಡು ಬರಲಾಗಿದೆ. ಬಿಜೆಪಿ ದೇಶದ ಸರ್ವರನ್ನೂ ಒಳಗೊಂಡಿರುವ ಪಕ್ಷ’ ಎಂದು ಉಪ ಮುಖ್ಯಮಂತ್ರಿ ಹೇಳಿದರು.

‘ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿರುವಂತೆ, ಸಬ್‌ ಕಾ ಸಾಥ್‌, ಸಬ್‌ ಕಾ ವಿಕಾಸ್‌ ಮತ್ತು ಸಬ್‌ ಕಾ ವಿಶ್ವಾಸ್‌ ಎಂಬುದು ಬಿಜೆಪಿಯ ಮಂತ್ರವಾಗಿದೆ. ಎಲ್ಲರನ್ನೂ ಒಳಗೊಂಡು ದೇಶವನ್ನು ಮುನ್ನಡೆಸುವುದು ಪಕ್ಷದ ಗುರಿಯಾಗಿದೆ. ಕೇಂದ್ರದಲ್ಲಿರಬಹುದು ಅಥವಾ ರಾಜ್ಯದಲ್ಲಿರಬಹುದು ಈ ತತ್ವದಡಿಯಲ್ಲೇ ಆಡಳಿತ ನಡೆಯುತ್ತಿದೆ’ ಎಂದೂ ಅವರು ಹೇಳಿದರು.

ನಾವೆಲ್ಲರೂ ಒಂದೇ ಎಂದ ಕೊಲಾಸೋ: ಕ್ರೈಸ್ತ ಸಮುದಾಯದ ಗಣ್ಯರ ಪರವಾಗಿ ಮಾತನಾಡಿದ ಉದ್ಯಮಿ ರೊನಾಲ್ಡ್‌ ಕೊಲಾಸೋ ಅವರು; ‘ಕ್ರೈಸ್ತ ಸಮುದಾಯ ದೇಣಿಗೆ ನೀಡುತ್ತಿರುವುದು ಇದೇ ಮೊದಲಲ್ಲ. ಹಿಂದಿನಿಂದಲೂ ರಾಜ್ಯ-ದೇಶದ ಪ್ರತಿ ಆಗುಹೋಗುಗಳಿಗೆ ಈ ಸಮುದಾಯ ಸ್ಪಂದಿಸುತ್ತಲೇ ಬಂದಿದೆ. ಶಿಕ್ಷಣ, ಧಾರ್ಮಿಕ, ಆರೋಗ್ಯ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತ ಸೇವೆಯಲ್ಲಿ ನಿರತವಾಗಿದೆ’ ಎಂದರು.

‘ವೈಯಕ್ತಿಕವಾಗಿ ನಾನು 36 ದೇವಾಲಯಗಳಿಗೆ ಆರ್ಥಿಕ ನೆರವು ನೀಡಿದ್ದೇನೆ. ಶಾಲೆ, ಆಸ್ಪತ್ರೆ ನಿರ್ಮಾಣಕ್ಕೆ ಕೈಜೋಡಿಸಿದ್ದೇನೆ. ದೇಗುಲ ಮಾತ್ರವಲ್ಲದೆ ಚರ್ಚು, ಮಸೀದಿ ನಿರ್ಮಾಣಕ್ಕೂ ಕೈಲಾದ ನೆರವು ನೀಡಿದ್ದೇನೆ. ಇದೆಲ್ಲವನ್ನು ಮಾಡಿದ್ದು ಪರಸ್ಪರ ಸೌಹಾರ್ದತೆಗಾಗಿ ಮತ್ತೂ ನಾವೆಲ್ಲೂ ಒಂದು ಎಂಬ ಕಾರಣಕ್ಕಾಗಿ. ರಾಜ್ಯದಲ್ಲಿ ಕ್ರೈಸ್ತ ಅಭಿವೃದಿ ನಿಗಮ ಸ್ಥಾಪನೆಯಾಗಿದ್ದು, ಅದಕ್ಕೆ ₹ 200 ಕೋಟಿ ಅನುದಾನ ನೀಡಲಾಗಿದೆ. ಇದು ಸಂತಸದ ವಿಷಯ’ ಎಂದು ಕೊಲಾಸೋ ಹೇಳಿದರು.

ಸಂತ ಜೋಸೇಫ್‌ ವಿಶ್ವವಿದ್ಯಾಲಯ ಸ್ಥಾಪನೆಗೆ ವಿಧಾನಮಂಡಲದಲ್ಲಿ ಮಸೂದೆ ಅಂಗೀಕಾರವಾಗಲು ಶ್ರಮಿಸಿದ ಸಚಿವ ಅಶ್ವತ್ಥನಾರಾಯಣ ಅವರನ್ನು ಕ್ರೈಸ್ತ ಮುಖಂಡರು ಅಭಿನಂದಿಸಿದರು.

ಬೆಂಗಳೂರಿನಲ್ಲಿರುವ ಮಾಲ್ಡೀವ್ಸ್‌ ರಾಯಭಾರ ಕಚೇರಿಯ ಕಾನ್ಸುಲ್‌ ಜನರಲ್‌ ಡಾ. ಜೋಸೆಫ್‌ ವಿ.ಜಿ., ಉದ್ಯಮಿಗಳಾದ ಜೋಸೆಫ್‌ ಫ್ರಾನ್ಸಿಸ್‌, ಸಿ.ಜೆ.ಬಾಬು, ಸಿಲ್ವಿಯಾನ್‌ ನರೋನ, ಕ್ಲ್ಯಾಡ್ಯುಯಸ್‌ ಪೆರಾರಿಯ, ಡಾ.ಥಾಮಸ್‌ ಟಿ. ಜಾನ್‌, ಚಾರ್ಲ್ಸ್‌ ಗೋಮೆಸ್‌, ರೋಶನ್‌ ಡಿಸಿಲ್ವ, ನಿಗೆಲ್‌ ಫರ್ನಾಂಡೀಸ್‌, ಸಂತೋಷ್‌ ಸೀಕ್ವೆರಿಯಾ, ಕ್ಲಾರೆನ್ಸ್‌ ಪೆರಾರಿಯಾ, ಪ್ರಮೋದ್‌ ಡಿಸೋಜ, ಎಂ.ಎಕ್ಸ್‌,ರಾಜು, ಡಾ.ಕೆ.ಸಿ.ಸ್ಯಾಮ್ಯುಯಲ್‌, ಅರುಣ್‌ ಫರ್ನಾಂಡೀಸ್‌, ಡಾ.ಸಂತೋಷ್‌ ಕೋಶಿ, ಸಮುದಾಯದ ಹಿರಿಯ ಮುಖಂಡ ಪಿ.ಕೆ. ಚೆರಿಯನ್‌, ಸಿ.ಜಿ.ವರ್ಗೀಸ್‌, ಮನೋಜ್‌ ರಾಜ್‌, ಐವಾನ್‌ ಡಿʼಕೋಸ್ಟಾ ಮುಂತಾದವರು ಸಭೆಯಲ್ಲಿ ಭಾಗಿಯಾಗಿದ್ದರು. ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾದ ಜೆ ಜೋ ಜೋಸೆಫ್ ಅವರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT