ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಲ್ಲಿನ ‘ಸ್ವಚ್ಛತಾ ಅಭಿಯಾನ’ಕ್ಕೆ 12 ವರ್ಷ

ಪ್ರತಿ ವಾರವೂ ತಪ್ಪದೇ ನಡೆಯುವ ಶ್ರಮದಾನ; ಯುವಜನರು ಭಾಗಿ
Last Updated 28 ಅಕ್ಟೋಬರ್ 2018, 20:28 IST
ಅಕ್ಷರ ಗಾತ್ರ

ಬೆಳಗಾವಿ: ಪ್ರಧಾನಿ ನರೇಂದ್ರ ಮೋದಿ ಅವರು ಸ್ವಚ್ಛತಾ ಅಭಿಯಾನಕ್ಕೆ ಕರೆ ನೀಡುವುದಕ್ಕಿಂತ ಬಹಳ ಹಿಂದಿನಿಂದಲೂ ಇಲ್ಲಿನ ಯುವಜನರ ತಂಡವೊಂದು ಪ್ರತಿ ವಾರ ಸ್ವಚ್ಛತಾ ‌ಕಾರ್ಯದಲ್ಲಿ ತೊಡಗುತ್ತಿದೆ. ಈ ಶ್ರಮದಾನ ಅಭಿಯಾನಕ್ಕೀಗ ಬರೋಬ್ಬರಿ 12 ವರ್ಷ ತುಂಬಿದೆ.

ಬೆಳಗಾವಿ ದಕ್ಷಿಣ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಅಭಯ ಪಾಟೀಲ ನೇತೃತ್ವದ ‘ಸ್ವಚ್ಛ ಬೆಳಗಾವಿ–ಸುಂದರ ಬೆಳಗಾವಿ’ ಹೆಸರಿನ ಈ ತಂಡ ವಾರಾಂತ್ಯದಲ್ಲಿ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಾ ಗಮನಸೆಳೆಯುತ್ತಿದೆ.

ಸ್ವಚ್ಛತೆ, ಸಸಿಗಳನ್ನು ನೆಡುವುದು, ನೀರು ಹಾಕುವುದು, ಟ್ರಿಮ್‌ ಮಾಡುವುದು, ಗುಂಡಿಗಳನ್ನು ಮುಚ್ಚುವುದು, ಸೊಳ್ಳೆಗಳ ನಿವಾರಣೆಗೆ ಫಾಗಿಂಗ್, ಸ್ಮಶಾನಗಳಲ್ಲಿ ಸ್ವಚ್ಛತೆ ಮತ್ತಿತರ ಕೆಲಸಗಳಲ್ಲಿ ಪಾಲ್ಗೊಳ್ಳುತ್ತಾರೆ.

ಶಾಲಾ–ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಸ್ಪರ್ಧೆಗಳನ್ನು ಆಯೋಜಿಸಿ ಅರಿವು ಮೂಡಿಸುತ್ತಿದ್ದಾರೆ. 2008ರಿಂದಲೂ ತಂಡದ ಸದಸ್ಯರು ‘ಚಲೋ ಸ್ವಚ್ಛತಾ ಲಾಯೆ’ ಎನ್ನುವ ಬೀದಿನಾಟಕವನ್ನು (ಹಿಂದಿಯಲ್ಲಿ) ಸಾರ್ವಜನಿಕ ಸ್ಥಳಗಳಲ್ಲಿ ಪ್ರದರ್ಶಿಸುತ್ತಾ ಜಾಗೃತಿಗೆ ಯತ್ನಿಸುತ್ತಿದ್ದಾರೆ. ಈವರೆಗೆ 99 ಕಡೆಗಳಲ್ಲಿ ಪ್ರದರ್ಶನ ನೀಡಲಾಗಿದೆ.

ಸ್ವಚ್ಛತೆಯೇ ಸೇವೆ: ಜಯಂತಿಗಳು, ಪರಿಸರ ದಿನಾಚರಣೆ, ವಿಶ್ವ ಭೂಮಿ ದಿನ ಮೊದಲಾದ ಕಾರ್ಯಕ್ರಮಗಳ ಸಂದರ್ಭದಲ್ಲಿ ಪೊರಕೆ ಹಿಡಿದು ‘ಪೋಸು’ ಕೊಟ್ಟು ಪ್ರಚಾರ ಪಡೆಯುವವರ ನಡುವೆ ಈ ತಂಡ ವಿಭಿನ್ನವಾಗಿದೆ. ‘ಸ್ವಚ್ಛತೆಯೇ ಸೇವೆ’ ಎನ್ನುವುದನ್ನು ಹಿಂದಿನಿಂದಲೂ ಶ್ರದ್ಧೆಯಿಂದ ಪಾಲಿಸುತ್ತಿದೆ. ಬಿಜೆಪಿ ಕಾರ್ಯಕರ್ತರು ಮಾತ್ರವಲ್ಲದೇ, ಬೇರೆಯವರೂ ತಂಡದಲ್ಲಿರುವುದು ವಿಶೇಷ ಎನ್ನುತ್ತಾರೆ ಇಲ್ಲಿನ ಜನರು.

‘ಈ ತಂಡದ ಸೇವಾ ಕಾರ್ಯಗಳನ್ನು ಹಿಂದಿನಿಂದಲೂ ಗಮನಿಸುತ್ತಿದ್ದೇನೆ. ಸಾರಥ್ಯ ವಹಿಸಿರುವ ಅಭಯ ಪಾಟೀಲರ ಸೋಲು, ಗೆಲುವು ಈ ಕಾಯಕದ ಮೇಲೆ ಪರಿಣಾಮ ಬೀರಿಲ್ಲ. ಪ್ರತಿ ಭಾನುವಾರ ಅವರೊಂದಿಗಿನ ಯುವ ಪಡೆಯ ಕರಸೇವೆ ನಿಂತಿಲ್ಲ. ಹಳದಿ ಟೀ ಶರ್ಟ್‌ ತೊಟ್ಟು ಸ್ವಚ್ಛತಾ ಕಾರ್ಯಕ್ಕೆ ಮುಂದಾಗುತ್ತಾರೆ. ಮಹಿಳೆಯರು ಕೂಡ ಪಾಲ್ಗೊಳ್ಳುವುದು ವಿಶೇಷ. ಸಸಿಗಳನ್ನೂ ನೆಟ್ಟು. ಮಾದರಿಯಾಗಿದ್ದಾರೆ’ ಎನ್ನುತ್ತಾರೆ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾಸಮಿತಿ ಅಧ್ಯಕ್ಷ ಅಶೋಕ ಚಂದರಗಿ.

ಸ್ವಚ್ಛ ಪರಿಸರಕ್ಕಾಗಿ: ಜಿಲ್ಲೆಯ ಸ್ವಾತಂತ್ರ್ಯ ಹೋರಾಟಗಾರರ ಹೆಸರಲ್ಲಿ ವಿವಿಧ ಜಾತಿಯ ಸಸಿಗಳನ್ನು ನೆಟ್ಟು ಪೋಷಿಸುತ್ತಿದ್ದಾರೆ. ಖಾನಾಪುರ ರಸ್ತೆಯಲ್ಲಿ ಮರಾಠ ಮಂದಿರದಿಂದ 3ನೇ ರೈಲು ಗೇಟ್‌ವರೆಗೆ 400ಕ್ಕೂ ಹೆಚ್ಚಿನ ಸಸಿಗಳು ನಳನಳಿಸುತ್ತಿವೆ. ವಾರಕ್ಕೊಮ್ಮೆ ನೀರುಣಿಸಿ, ಆಗಾಗ ಗೊಬ್ಬರ ಹಾಕಿ ಪೋಷಿಸುತ್ತಿದ್ದಾರೆ. ಪ್ರತಿ ಸಸಿಗಳಿಗೂ ‘ಟ್ರೀ ಗಾರ್ಡ್‌’ಗಳನ್ನು ಕಟ್ಟಿ ಜೋಪಾನ ಮಾಡುತ್ತಿದ್ದಾರೆ.

ಕಾರ್ಗಿಲ್‌ ಯುದ್ಧದಲ್ಲಿ ಹೋರಾಡಿದವರು, ಮಡಿದವರ ಸ್ಮರಣಾರ್ಥ, ವ್ಯಾಕ್ಸಿನ್‌ ಡಿಪೊದ ವಿವಿಧೆಡೆ 680 ಸಸಿಗಳನ್ನು ನೆಟ್ಟಿದ್ದರು. ಇವುಗಳಲ್ಲಿ 500ಕ್ಕೂ ಹೆಚ್ಚಿನವು ಉಳಿದಿವೆ.

‘ಪ್ರಧಾನಿ ಕರೆ ಕೊಡುವುದಕ್ಕಿಂತಲೂ ಮೊದಲಿನಿಂದಲೂ, ಅಂದರೆ 2006ರಿಂದ ಈ ಅಭಿಯಾನ ನಡೆಯುತ್ತಿದೆ. 300ಕ್ಕೂ ಹೆಚ್ಚು ಮಂದಿ ಇದ್ದಾರೆ. ಅವರಲ್ಲಿ ಪ್ರತಿವಾರ ಸರಾಸರಿ 90ರಿಂದ 100 ಮಂದಿ ಸ್ವಚ್ಛತಾ ಕಾರ್ಯದಲ್ಲಿ ಭಾಗಿಯಾಗುತ್ತಾರೆ. ಬಿಜೆಪಿ ಕಾರ್ಯಕರ್ತರಿಗಿಂತ ಬೇರೆಯವರೂ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಸ್ವಚ್ಛ ಬೆಳಗಾವಿ ನಿರ್ಮಾಣಕ್ಕಾಗಿ ಶ್ರಮಿಸುತ್ತಿದ್ದೇವೆ’ ಎಂದು ಅಭಯ ಪಾಟೀಲ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

*ಯುವಕ, ಯುವತಿಯರು ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಳ್ಳುತ್ತಿರುವುದು ಸಂತೋಷ. ಮುಂದೆ ಮತ್ತಷ್ಟು ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ.

-ಅಭಯ ಪಾಟೀಲ, ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT