ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದುಷ್ಟರ ಆಟ ಬಹುಕಾಲ ನಡೆಯದು: ಮುಖ್ಯಮಂತ್ರಿ ಸಿದ್ದರಾಮಯ್ಯ

ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಬಿಜೆಪಿ ವಿರುದ್ಧ ಕಿಡಿ
Published 15 ಆಗಸ್ಟ್ 2023, 15:52 IST
Last Updated 15 ಆಗಸ್ಟ್ 2023, 15:52 IST
ಅಕ್ಷರ ಗಾತ್ರ

ಬೆಂಗಳೂರು: ‘ಕರ್ನಾಟಕದ ಜನರು ಒಡೆದಾಳುವವರ ವಿರುದ್ಧ ನಿಂತಿದ್ದಾರೆ. ಶಾಂತಿಯುತ ಸಮಾಜವಿದ್ದರೆ ಮಾತ್ರ ಅಭಿವೃದ್ಧಿ ಸಾಧ್ಯ ಎಂಬುದು ನಮ್ಮ ಜನರಿಗೆ ಅರ್ಥವಾಗಿದೆ. ದುಷ್ಟರ ಆಟಗಳು ಬಹುಕಾಲ ನಡೆಯುವುದಿಲ್ಲ ಎಂಬುದನ್ನು ಕರ್ನಾಟಕದ ಜನರೇ ಸಾಬೀತು ಮಾಡಿದ್ದಾರೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ನಗರದ ಫೀಲ್ಡ್‌ ಮಾರ್ಷಲ್‌ ಮಾಣೆಕ್‌ ಷಾ ಪರೇಡ್‌ ಮೈದಾನದಲ್ಲಿ ಮಂಗಳವಾರ ನಡೆದ ಸ್ವಾತಂತ್ರ್ಯೋತ್ಸವದಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಭಾಷಣ ಮಾಡಿದ ಅವರು, ಬಿಜೆಪಿ ಮತ್ತು ಕೇಂದ್ರ ಸರ್ಕಾರದ ಧೋರಣೆಗಳ ವಿರುದ್ಧ ಕಿಡಿಕಾರಿದರು.

‘ಅನ್ನಭಾಗ್ಯ ಯೋಜನೆಗೆ ಕೇಂದ್ರ ಸರ್ಕಾರ ಉದ್ದೇಶಪೂರ್ವಕವಾಗಿಯೇ ಸಹಕಾರ ನೀಡುತ್ತಿಲ್ಲ’ ಎಂದು ಟೀಕಿಸಿದರು.

'ಇವನಾರವನೆನ್ನದೆ ಒಳಗೊಳ್ಳುವ ಆಡಳಿತ ನಡೆಸಲು ನಮ್ಮನ್ನು ಆರಿಸಿದ್ದಾರೆ. ಈ ಒಳಗೊಂಡು ಬಾಳುವ, ಎಲ್ಲರ ಅಭಿವೃದ್ಧಿಯನ್ನು ಬಯಸುವ ಕರ್ನಾಟಕದ ಹೊಸ ಮಾದರಿಗಳನ್ನು ಇನ್ನಷ್ಟು ಪ್ರಬಲಗೊಳಿಸಲಾಗುವುದು‘ ಎಂದು ಭರವಸೆ ನೀಡಿದರು.

’ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದು ನಮ್ಮ ಮೊದಲ ಆದ್ಯತೆ. ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳುಸುದ್ದಿ ಹರಡುವ, ಸಾಮರಸ್ಯ ಕದಡುವ ಯತ್ನ ಮತ್ತು ಮತೀಯ ಗೂಂಡಾಗಿರಿ ಹೆಸರಿನಲ್ಲಿ ನಡೆಯುವ ಅನೈತಿಕ ದಬ್ಬಾಳಿಕೆಯನ್ನು ಖಂಡಿತ ಸಹಿಸುವುದಿಲ್ಲ‘ ಎಂದರು.

’ಸರ್ವಜನಾಂಗದ ಶಾಂತಿಯ ತೋಟ ಎಂಬ ಕುವೆಂಪು ಅವರ ಆಶಯವನ್ನು ಈಡೇರಿಸುವುದೇ ಸರ್ಕಾರದ ಪ್ರಧಾನ ಧ್ಯೇಯ. ಹೀಗಾಗಿ, ನಾಗರಿಕರು ವಿಚ್ಛಿದ್ರಕಾರಿ ಶಕ್ತಿಗಳ ಪ್ರಚೋದನೆಗೆ ಒಳಗಾಗದೆ ಸಾಮರಸ್ಯ, ಸಹಬಾಳ್ವೆಯ ಮಹತ್ವ ಎತ್ತಿ ಹಿಡಿಯಬೇಕು‘ ಎಂದು ಕೋರಿದರು.

’ದೇಶದಲ್ಲಿಯೇ ಅತಿ ಹೆಚ್ಚು ತೆರಿಗೆ ಪಾವತಿಸುವ ರಾಜ್ಯಗಳಲ್ಲಿ ಕರ್ನಾಟಕ ಎರಡನೆಯ ಸ್ಥಾನದಲ್ಲಿದ್ದು, ಸುಮಾರು ₹4 ಲಕ್ಷ ಕೋಟಿಗೂ ಹೆಚ್ಚು ಮೊತ್ತವನ್ನು ಕೇಂದ್ರಕ್ಕೆ ಪಾವತಿಸುತ್ತಿದೆ. ಆದರೆ, ನಮಗೆ ವಾಪಸ್‌ ದೊರೆಯುತ್ತಿರುವುದು  ₹50 ಸಾವಿರ ಕೋಟಿ ಮಾತ್ರ. ನ್ಯಾಯಯುತವಾಗಿ ದೊರೆಯುವ ಸಂಪನ್ಮೂಲಗಳು ಕೇಂದ್ರದಿಂದ ಮರಳಿ ಬಂದರೆ ನಮ್ಮದು ಅತ್ಯಂತ ಶ್ರೀಮಂತ ರಾಜ್ಯವಾಗಲಿದೆ‘ ಎಂದು ವಿವರಿಸಿದರು.

ಗ್ಯಾರಂಟಿ ಯೋಜನೆಗಳನ್ನು ಪ್ರಮುಖವಾಗಿ ಪ್ರಸ್ತಾಪಿಸಿದ ಅವರು, ’ಬೆಲೆ ಏರಿಕೆ, ನಿರುದ್ಯೋಗ, ಭ್ರಷ್ಟಾಚಾರ ಮುಂತಾದ ಕಾರಣಗಳಿಗಾಗಿ ನಾಡಿನ ಜನರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದರು. ಹೀಗಾಗಿಯೇ, ಜನರ ಆರ್ಥಿಕ, ಸಾಮಾಜಿಕ ಚೈತನ್ಯವನ್ನು ಹೆಚ್ಚಿಸುವ ಉದ್ದೇಶದಿಂದ ಸಾರ್ವತ್ರಿಕ ಮೂಲ ಆದಾಯ ಎನ್ನುವ ಹೊಸ ಆರ್ಥಿಕ ಪ್ರಮೇಯವನ್ನು ಅಳವಡಿಸಿಕೊಂಡು ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಲಾಗಿದೆ’ ಎಂದು ಪ್ರತಿಪಾದಿಸಿದರು.

ಮುಖ್ಯಮಂತ್ರಿ ಭರವಸೆಗಳು

* ನಗರ ಪ್ರದೇಶದ ಕೆರೆಗಳು ಸಂರಕ್ಷಣೆ ಸೇರಿದಂತೆ ಜನರಿಗೆ ಸ್ವಚ್ಛ ಕುಡಿಯುವ ನೀರು ಒದಗಿಸಲು ₹3400 ಕೋಟಿ ಯೋಜನೆಯನ್ನು ರೂಪಿಸಲಿದೆ

* ಆ.27ಕ್ಕೆ ‘ಗೃಹಲಕ್ಷ್ಮಿ’ ಯೋಜನೆ ಜಾರಿ

* ಸ್ಥಗಿತಗೊಂಡಿರುವ ಕೃಷಿಭಾಗ್ಯ ಅನುಗ್ರಹ ಯೋಜನೆ ವಿದ್ಯಾಸಿರಿ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಸೇರಿದಂತೆ ಹಲವು ಯೋಜನೆಗಳ ಮರುಜಾರಿ

* ಶಾಲೆಗಳಲ್ಲಿ ಕಲಿಯುತ್ತಿರುವ ಮಕ್ಕಳಿಗೆ ವಾರಕ್ಕೆ ಎರಡು ದಿನ ಮೊಟ್ಟೆ

*  ಸರ್ಕಾರಿ ಬಸ್‌ಗಳಲ್ಲಿ ಟ್ರ್ಯಾಕಿಂಗ್  ಮತ್ತು ಪ್ಯಾನಿಕ್ ಬಟನ್ ವ್ಯವಸ್ಥೆ

* ಇಂದಿರಾ ಕ್ಯಾಂಟೀನ್‍ಗಳ ಮರು ಪ್ರಾರಂಭ. ಇದಕ್ಕಾಗಿ ₹100 ಕೋಟಿ ಮೀಸಲು. ಪ್ರತಿ ಪ್ಲೇಟ್‍ಗೆ ₹5 ರಿಂದ ₹10 ಹೆಚ್ಚುವರಿ ಮೊತ್ತ ನೀಡಿ ಜನರಿಗೆ ಹಿಂದಿನ ದರದಲ್ಲಿಯೇ ಉತ್ತಮ ಆಹಾರ

* ದೇವನಹಳ್ಳಿ ನೆಲಮಂಗಲ ಹೊಸಕೋಟೆ ದೊಡ್ಡಬಳ್ಳಾಪುರ ಮಾಗಡಿಗಳಲ್ಲಿ ಉಪನಗರ ಟೌನ್‍ಶಿಪ್‍ಗಳ ಅಭಿವೃದ್ಧಿ

* ಹುಮನಾಬಾದ್ - ಕಲಬುರಗಿ ಮತ್ತು ಚಳ್ಳಕೆರೆ ರಾಷ್ಟ್ರೀಯ ಹೆದ್ದಾರಿ ನಡುವೆ ಖಾಸಗಿ ಸಹಭಾಗಿತ್ವದಲ್ಲಿ ಎಕ್ಸ್‌ಪ್ರೆಸ್‌-ವೇ ನಿರ್ಮಿಸಿ ಕಲ್ಯಾಣ ಕರ್ನಾಟಕ ಮತ್ತು ಬೆಂಗಳೂರು ನಡುವೆ ರಸ್ತೆ ಸಂಪರ್ಕ ಇನ್ನಷ್ಟು ಉತ್ತಮ ಪಡಿಸಲಾಗುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT