ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

136 ಶಾಸಕರು, 50 ಗಂಟೆ ಚರ್ಚೆ: ಅಹವಾಲು ಆಲಿಸಿದ ಸಿಎಂ, ಡಿಸಿಎಂ

Published 17 ಆಗಸ್ಟ್ 2023, 22:23 IST
Last Updated 17 ಆಗಸ್ಟ್ 2023, 22:23 IST
ಅಕ್ಷರ ಗಾತ್ರ

ಬೆಂಗಳೂರು: ಜಿಲ್ಲಾ ಉಸ್ತುವಾರಿ ಸಚಿವರ ಸಮ್ಮುಖದಲ್ಲಿ ಕ್ಷೇತ್ರಗಳ ಅಭಿವೃದ್ಧಿ ಮತ್ತು ಲೋಕಸಭಾ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುವ ಉದ್ದೇಶದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ನಡೆಸಿದ ಜಿಲ್ಲಾವಾರು ಕಾಂಗ್ರೆಸ್‌ ಶಾಸಕರ ಸಭೆ ಗುರುವಾರ ಅಂತ್ಯವಾಗಿದೆ.

ಐದು ದಿನ 31 ಜಿಲ್ಲೆಗಳ 136 ಶಾಸಕರ ಜೊತೆ 50 ಗಂಟೆ ಸಭೆ ನಡೆಸಿದ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ, ಶಾಸಕರ ಅಹವಾಲುಗಳನ್ನು ಆಲಿಸಿ‌ ಬೇಡಿಕೆಗಳಿಗೆ ಸ್ಪಂದಿಸುವ ಭರವಸೆ ನೀಡಿದರು. ಚರ್ಚೆಯಲ್ಲಿ ‌ತಮ್ಮ ಕ್ಷೇತ್ರಗಳಿಗೆ ಆಗಬೇಕಾದ ಅಗತ್ಯ ಕೆಲಸಗಳ ಬೇಡಿಕೆಯನ್ನು ಮತ್ತು ತಮ್ಮ ಅಸಮಾಧಾನಗಳನ್ನು ಶಾಸಕರು ಮುಕ್ತವಾಗಿ ಹೇಳಿಕೊಂಡರು ಎಂದು ಮುಖ್ಯಮಂತ್ರಿ ಕಚೇರಿಯ ಮೂಲಗಳು ತಿಳಿಸಿವೆ.

ಶಾಸಕರ ಮಾತಿಗೆ ಪ್ರಥಮ ಪ್ರಾಶಸ್ತ್ಯ ನೀಡಲಾಗಿತ್ತು. ಜಿಲ್ಲಾ ಉಸ್ತುವಾರಿ ಸಚಿವರು ಎಲ್ಲ ಶಾಸಕರ ಅಭಿಪ್ರಾಯಗಳನ್ನು ಸಂಪೂರ್ಣವಾಗಿ ಕೇಳಿಸಿಕೊಂಡು ಸಕಾರಾತ್ಮಕವಾಗಿ ಸ್ಪಂದಿಸಿದರು. ಅಗತ್ಯವೆಂದಾಗ ಶಾಸಕರು ಮತ್ತು ಉಸ್ತುವಾರಿ ಸಚಿವರಿಗೆ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ಸೂಚನೆ, ಸಲಹೆಗಳನ್ನು ನೀಡಿದರು.

ಶಾಸಕರು ಮತ್ತು ಜಿಲ್ಲಾ ಸಚಿವರ ನಡುವೆ ಸಮನ್ವಯ, ಸರ್ಕಾರ ಮತ್ತು ಪಕ್ಷದ ಜತೆ ಸಮನ್ವಯ, ಐದು ಗ್ಯಾರಂಟಿ ಯೋಜನೆಗಳನ್ನು ಮಧ್ಯಮ ಮತ್ತು ಬಡವರ್ಗದ ಎಲ್ಲ ಜಾತಿ ಸಮುದಾಯಗಳ ಮನೆ ಬಾಗಿಲಿಗೆ ತಲುಪಿಸುವುದು, ಸ್ಥಳೀಯ ಸಂಸ್ಥೆಗಳು ಮತ್ತು ಲೋಕಸಭಾ ಚುನಾವಣೆಯಲ್ಲಿ ಗೆಲುವಿಗೆ ಶ್ರಮಿಸುವುದು ಸೇರಿದಂತೆ ಹಲವು ವಿಷಯಗಳ ಕುರಿತು ಸಭೆಯಲ್ಲಿ ಚರ್ಚೆ ನಡೆದಿದೆ ಎಂದೂ ಮೂಲಗಳು ಹೇಳಿವೆ.

ಶಾಸಕರ ಅಭಿಪ್ರಾಯ ಮತ್ತು ಬೇಡಿಕೆಗಳನ್ನು ದಾಖಲಿಸಿಕೊಳ್ಳಲು ಮುಖ್ಯಮಂತ್ರಿ ಸಚಿವಾಲಯದ ಅಧಿಕಾರಿ ಮತ್ತು ಸಿಬ್ಬಂದಿ ತಂಡ ರಚಿಸಲಾಗಿತ್ತು. ಈ ತಂಡ ಜಿಲ್ಲಾವಾರು ಪ್ರತ್ಯೇಕ ಬೇಡಿಕೆಗಳು ಮತ್ತು ಪ್ರಗತಿಯ ಪಟ್ಟಿಗಳನ್ನು ಸಿದ್ಧಪಡಿಸಿ ಸಂಬಂಧಪಟ್ಟ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಿಗೆ ನೀಡಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT