ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

175 ಪುಟದ ಬಜೆಟ್‌ ಓದಿ ಬಳಲಿದ ಸಿಎಂ ಸಿದ್ದರಾಮಯ್ಯ

Published 16 ಫೆಬ್ರುವರಿ 2024, 15:26 IST
Last Updated 16 ಫೆಬ್ರುವರಿ 2024, 15:26 IST
ಅಕ್ಷರ ಗಾತ್ರ

ಬೆಂಗಳೂರು: 175 ಪುಟಗಳಷ್ಟು ಮಾಹಿತಿಯುಳ್ಳ ಬಜೆಟ್‌ ಪುಸ್ತಕವನ್ನು 3 ಗಂಟೆ 10 ನಿಮಿಷಗಳ ಕಾಲ ಓದಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೊನೆಯಲ್ಲಿ ತುಸು ಬಳಲಿದಂತೆ ಕಂಡರು.

ಬೆಳಿಗ್ಗೆ 10.14ಕ್ಕೆ ವಿಧಾನಸಭೆ ಪ್ರವೇಶಿಸಿದ ಅವರು, 10.20ರಿಂದ ಬಜೆಟ್‌ ಮಂಡನೆ ಆರಂಭಿಸಿದರು. ಮಧ್ಯಾಹ್ನ 1.30ಕ್ಕೆ 2024–25ನೇ ಆರ್ಥಿಕ ವರ್ಷದ ಬಜೆಟ್‌ ಪೂರ್ಣ ಲೇಖಾನುದಾನ ಕೋರುವುದರೊಂದಿಗೆ ಮುಗಿಸಿದರು. ಆ ಬಳಿಕ ಕುರ್ಚಿಯಲ್ಲಿ ಕುಳಿತು ನೀರು ಕುಡಿದು ಸುಧಾರಿಸಿಕೊಂಡರು.

ಮುಖ್ಯಮಂತ್ರಿಯವರು ಬಜೆಟ್‌ ಓದಲು ಎದ್ದು ನಿಲ್ಲುತ್ತಿದ್ದಂತೆಯೇ ಬಿಜೆಪಿಯ ವಿ. ಸುನಿಲ್‌ ಕುಮಾರ್‌, ‘ಏನಿಲ್ಲಾ, ಏನಿಲ್ಲಾ...’ ಎಂದು ಛೇಡಿಸಿದರು. ತುಸು ವಿಚಲಿತರಾದ ಸಿದ್ದರಾಮಯ್ಯ, ಒಂದೆರಡು ನಿಮಿಷ ಸುಮ್ಮನಾದರು. ಬಳಿಕ ಎದ್ದು ನಿಂತು ಬಜೆಟ್‌ ಓದಲು ಆರಂಭಿಸಿದರು.

ಬಜೆಟ್‌ನ ಆರಂಭದಲ್ಲೇ ‘ಆಗದು ಎಂದು, ಕೈಲಾಗದು ಎಂದು ಕೈಕಟ್ಟಿ ಕುಳಿತರೆ...’ ಎಂಬ ‘ಬಂಗಾರದ ಮನುಷ್ಯ’ ಸಿನಿಮಾ ಹಾಡನ್ನು ಉಲ್ಲೇಖಿಸಿದ ಮುಖ್ಯಮಂತ್ರಿ, ಕುವೆಂಪು, ವಚನಕಾರ್ತಿ ಆಯ್ದಕ್ಕಿ ಲಕ್ಕಮ್ಮ ಸೇರಿದಂತೆ ಹಲವು ಕವಿಗಳು, ವಚನಕಾರರ ರಚನೆಗಳನ್ನು ಉಲ್ಲೇಖಿಸಿದರು. ಕರ್ಪೂರಿ ಠಾಕೂರ್‌, ಜವಾಹರಲಾಲ್‌ ನೆಹರೂ ಸೇರಿದಂತೆ ಹಲವರ ಮಾತುಗಳನ್ನೂ ತಮ್ಮ ಘೋಷಣೆಗಳಿಗೆ ಪೂರಕವಾಗಿ ಪ್ರಸ್ತಾಪಿಸಿದರು.

ಬಜೆಟ್‌ ಓದುವಾಗ ಮುಖ್ಯಮಂತ್ರಿಯವರು ಹಲವು ಬಾರಿ ತಡವರಿಸಿದರು. ಅಂಕಿಅಂಶ, ಪದಗಳನ್ನೂ ತಪ್ಪಾಗಿ ಉಚ್ಚರಿಸಿದರು.‘₹ 15,000’ದ ಬದಲಿಗೆ ‘₹ 1,500’ ಎಂದರೆ, ‘ಆಶ್ರಮ ಶಾಲೆ’ ಎಂಬುದನ್ನು ‘ಅಕ್ರಮ ಶಾಲೆ’ ಎಂದು ಓದಿದರು.

ಶಾಸಕರ ಕೊರಳಲ್ಲಿ ಶಲ್ಯ: ಮುಖ್ಯಮಂತ್ರಿಯೂ ಸೇರಿದಂತೆ ಕಾಂಗ್ರೆಸ್‌ನ ಎಲ್ಲ ಸದಸ್ಯರು ಶಲ್ಯ ಧರಿಸಿ ಸದನಕ್ಕೆ ಬಂದಿದ್ದರು.

ಸಿದ್ದರಾಮಯ್ಯ ಅವರು ಬಜೆಟ್‌ ಮಂಡಿಸಿದ ಬಳಿಕ ಹಲವು ಮಂದಿ ಸಚಿವರು, ಶಾಸಕರು ಅವರಿದ್ದ ಸ್ಥಳಕ್ಕೆ ಹೋಗಿ ಅಭಿನಂದಿಸಿದರು. ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಜಿ. ಜನಾರ್ದನ ರೆಡ್ಡಿ ಕೂಡ ಅಭಿನಂದನೆ ಸಲ್ಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT