ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ರಜ್ವಲ್‌ರನ್ನು ಸ್ವದೇಶಕ್ಕೆ ಕರೆತರಲು ನೆರವಾಗುವಂತೆ PMಗೆ ಸಿದ್ದರಾಮಯ್ಯ ಪತ್ರ

Published 1 ಮೇ 2024, 11:24 IST
Last Updated 1 ಮೇ 2024, 11:24 IST
ಅಕ್ಷರ ಗಾತ್ರ

ಬೆಂಗಳೂರು: ಅಸಂಖ್ಯಾತ ಮಹಿಳೆಯರನ್ನು ಲೈಂಗಿಕವಾಗಿ ದುರ್ಬಳಕೆ ಮಾಡಿಕೊಂಡ ಆರೋಪದ ಪ್ರಕರಣದಲ್ಲಿ ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಎಸ್‌ಐಟಿ ತನಿಖೆ ಕೈಗೊಂಡಿದ್ದು, ವಿದೇಶಕ್ಕೆ ಪರಾರಿಯಾಗಿರುವ ಇವರನ್ನು ಇಂಟರ್‌ಪೋಲ್ ಬಳಸಿ ಸ್ವದೇಶಕ್ಕೆ ಕರೆತರಲು ನೆರವಾಗಬೇಕು ಎಂದು ಕೋರಿ ಪ್ರಧಾನಿ ನರೇಂದ್ರ ಮೋದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ.

‘ಹಾಲಿ ಸಂಸದ ಹಾಗೂ ಲೋಕಸಭಾ ಚುನಾವಣೆಯ ಹಾಸನದ ಎನ್‌ಡಿಎ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರ ವಿರುದ್ಧ ಲೈಂಗಿಕ ದೌರ್ಜನ್ಯ ಕುರಿತ ಗಂಭೀರ ಆರೋಪಗಳು ಕೇಳಿಬಂದಿವೆ. ಈ ಆರೋಪಗಳು ಗಂಭೀರ ಸ್ವರೂಪದ್ದಾಗಿದ್ದು, ಅವಮಾನಕರವೂ ಆಗಿದೆ. ಜತೆಗೆ ದೇಶದ ಮಾನವನ್ನೇ ಹರಾಜು ಹಾಕಿವೆ. ಈ ಕುರಿತಂತೆ ತನಿಖೆ ನಡೆಸುವಂತೆ ರಾಜ್ಯ ಸರ್ಕಾರವು ಏ. 28ರಂದು ಎಸ್‌ಐಟಿಗೆ ಪ್ರಕರಣವನ್ನು ನೀಡಿದೆ. ತನಿಖೆಯು ಈಗಾಗಲೇ ಆರಂಭಗೊಂಡಿದೆ. ಬಹಳಷ್ಟು ಮಹಿಳೆಯರು ಮುಂದೆ ಬಂದು ತಮ್ಮ ಹೇಳಿಕೆ ದಾಖಲಿಸಿದ್ದಾರೆ. ಈ ಘಟನೆ ಕುರಿತು ಪ್ರಕರಣವೂ ದಾಖಲಾಗಿದೆ’ ಎಂದು ಪತ್ರದಲ್ಲಿ ಹೇಳಿದ್ದಾರೆ.

<div class="paragraphs"><p></p></div>

‘ಪೊಲೀಸ್ ತನಿಖೆ ಹಾಗೂ ಬಂಧನ ಭೀತಿಯಿಂದ ಪ್ರಜ್ವಲ್ ರೇವಣ್ಣ ವಿದೇಶಕ್ಕೆ ಹೋಗಿರುವುದಾಗಿ ವರದಿಯಾಗಿದೆ. ಅವರನ್ನು ದೇಶಕ್ಕೆ ಮರಳಿ ತರುವುದು ಸದ್ಯದ ಅಗತ್ಯವಾಗಿದೆ. ಆ ಮೂಲಕ ಈ ನೆಲದ ಕಾನೂನಿನ್ವಯ ಅವರು ತನಿಖೆ ಎದುರಿಸಬೇಕಿದೆ. ಈ ನಿಟ್ಟಿನಲ್ಲಿ ರಾಜತಾಂತ್ರಿಕ ಹಾಗೂ ಪೊಲೀಸ್ ಮಾರ್ಗದಿಂದ ಅಂತರರಾಷ್ಟ್ರೀಯ ಪೊಲೀಸ್ ನೆರವು ಪಡೆದು ಪ್ರಜ್ವಲ್ ರೇವಣ್ಣ ಅವರ  ಪಾಸ್‌ಪೋರ್ಟ್ ರದ್ದುಪಡಿಸುವಂತೆ ವಿದೇಶಾಂಗ ಸಚಿವಾಲಯ ಮತ್ತು ಕೇಂದ್ರ ಗೃಹ ಇಲಾಖೆಗೆ ಸೂಚಿಸಬೇಕು’ ಎಂದು ಸಿದ್ದರಾಮಯ್ಯ ಮನವಿ ಮಾಡಿದ್ದಾರೆ. 

‘ಇದಕ್ಕಾಗಿ ಪ್ರಕರಣದ ಎಲ್ಲಾ ದಾಖಲೆಗಳನ್ನು ನೀಡಲು ಎಸ್‌ಐಟಿ ಸಿದ್ಧವಿದೆ. ಅಗತ್ಯವಿರುವ ಇತರೆ ಕಾನೂನು ಔಪಚಾರಿಕತೆಯನ್ನು ಪೂರ್ಣಗೊಳಿಸಲು ರಾಜ್ಯ ಸರ್ಕಾರ ಸಿದ್ಧ’ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT