ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಲುಮೆ ಸಂಸ್ಥೆ ಗೊತ್ತು, ಅವರನ್ನು ದುರ್ಬಳಕೆ ಮಾಡಿಕೊಂಡಿಲ್ಲ: ಅಶ್ವತ್ಥನಾರಾಯಣ

Last Updated 19 ನವೆಂಬರ್ 2022, 11:28 IST
ಅಕ್ಷರ ಗಾತ್ರ

ಮಂಗಳೂರು: ‘ಚಿಲುಮೆ ಸಂಸ್ಥೆಯ ಪರಿಚಯ ನನಗೆ ಇಲ್ಲ ಎನ್ನುವುದಿಲ್ಲ. ಅವರು ನನಗೆ ಗೊತ್ತಿರುವವರೇ. ಆದರೆ, ನಾನು ಯಾವುದಕ್ಕೂ ಅವರನ್ನು ಬಳಸಿಕೊಂಡಿಲ್ಲ. ನನಗೆ ಅಂತಹ ಉದ್ದೇಶವೂ ಇಲ್ಲ’ಎಂದು ಉನ್ನತ ಶಿಕ್ಷಣ ಸಚಿವ ಅಶ್ವತ್ಥನಾರಾಯಣ ಸ್ಪಷ್ಟಪಡಿಸಿದರು.

ಇಲ್ಲಿ ಸುದ್ದಿಗಾರರೊಂದಿಗೆ ಶನಿವಾರ ಮಾತನಾಡಿದ ಅವರು, 'ಈ ಬಗ್ಗೆ ಬಿಬಿಎಂಪಿ ಈಗಾಗಲೇ ದೂರು ದಾಖಲಿಸಿದೆ. ಚಿಲುಮೆ ಸಂಸ್ಥೆಯಿಂದ ಬಿಬಿಎಂಪಿ ಏನೆಲ್ಲ ಚಟುವಟಿಕೆಗಳನ್ನು ಬಯಸಿತ್ತು, ಏನೆಲ್ಲ ಕೆಲಸಗಳಿಗೆ ಅವರ ಅವಶ್ಯಕತೆ ಇತ್ತು, ಅವರಿಗೆ ಏನು ಷರತ್ತು ಹಾಕಿತ್ತು ಎಂದು ನನಗೆ ಗೊತ್ತಿಲ್ಲ.

ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡಲು ಹಾಗೂ ಹೆಸರು ತೆಗೆದುಹಾಕಲು ಇಂತಹದ್ದೆಲ್ಲ ಮಾಡಬೇಕಾದ ಅಗತ್ಯ ಇಲ್ಲ. ಇಂತಹ ಚುನಾವಣಾ ಅಕ್ರಮ ನಡೆಸುವುದೇನಿದ್ದರೂ ಕಾಂಗ್ರೆಸ್ ಪಕ್ಷ. ಕಾರ್ಯಕರ್ತರೇ ಇಲ್ಲದಂತಹ , ಸಿದ್ಧಾಂತವೇ ಇಲ್ಲದ, ಅವಕಾಶಗಳೂ ಇಲ್ಲದ ಪಕ್ಷ ಕಾಂಗ್ರೆಸ್' ಎಂದರು.

'ಈಗ ನಡೆಯುತ್ತಿರುವುದು ಆಧಾರ್ ಅನ್ನು ಮತದಾರರ ಗುರುತಿನ ಚೀಟಿ ಜೊತೆಜೋಡಿಸುವ ಪ್ರಕ್ರಿಯೆ' ಎಂದರು.

'2018ರಲ್ಲಿ ಅಧಿಕಾರದಲ್ಲಿ ಇದ್ದದ್ದು ಯಾರು. ಇವರಿಗೆ ಏನೂ ಉದ್ದ-ಅಳತೆ ಗೊತ್ತಿಲ್ಲಾ. ಸುಮ್ನೆ ಏನೇನೋ ಹೇಳುತ್ತಿದ್ದಾರೆ. ಪೊಲೀಸರು ತನಿಖೆ ಮಾಡುತ್ತಿದ್ದಾರೆ. ನಿಜಾಂಶ ಏನೆಂಬುದು ಅದರಲ್ಲೇ ತಿಳಿಯಲಿದೆ' ಎಂದರು.

'ಹಲವಾರು ರೀತಿಯ ಸರ್ವೇ ಪ್ರಕ್ರಿಯೆಯಲ್ಲಿ ಭಾಗವಹಿಸಲು ಅವಕಾಶ ಇದೆ. ರಾಜಕೀಯ ಅಭಿಪ್ರಾಯ ಸಂಗ್ರಹ ಮಾಡುವುದು ಒಂದು ಸರ್ವೇ. ಪ್ರತಿಕ್ರಿಯೆಗಳನ್ನು ಪಡೆಯುವುದೂ ಕೂಡ ಸರ್ವೇ. ಚುನಾವಣಾ ನಿರ್ವಹಣೆ, ಮತದಾರರ ಪಟ್ಟಿ ತಯಾರಿ... ಬೇರೆಯದ್ದೇ ವಿಷಯ' ಎಂದರು.

'ನಾನಂತು ಚಿಲುಮೆ ಸಂಸ್ಥೆಯನ್ನು ಅವರನ್ನು ನೇಮಿಸಿಕೊಂಡಿಲ್ಲ, ಅವರನ್ನು ಬಳಕೆ ಮಾಡಿಕೊಂಡಿಲ್ಲ. ನಾನು ಜನರ ಆಶೀರ್ವಾದದಿಂದ ಬೆಳೆದಿರುವವನು. 2018ರ ಚುನಾವಣೆಯಲ್ಲಿ ಬಿಜೆಪಿಯಲ್ಲೇ ಅತಿಹೆಚ್ಚು ಅಂತರದಿಂದ ಗೆದ್ದವನು ನಾನು. ನನ್ನ ಗೆಲುವಿನ ಅಂತರ ಭವಿಷ್ಯದಲ್ಲಿ ಮತ್ತಷ್ಟು ಹೆಚ್ಚಲಿದೆ' ಎಂದರು.

'ನನ್ನ ಹೆಸರಿನ ಪ್ರತಿಷ್ಠಾನವು ಪ್ರತಿ ವರ್ಷ 5 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ದೇಣಿಗೆ ನೀಡುತ್ತದೆ. ಇದರಲ್ಲಿ ಮುಚ್ಚಿಡುವಂತಹದ್ದು ಏನೂ ಇಲ್ಲ. ಸತ್ಯಾಸತ್ಯ ಬಹಿರಂಗ ಮಾಡಲು ತನಿಖೆ ನಡೆಸಲಾಗುತ್ತಿದೆ. ಆರೋಪ ಮಾಡುವವರ ಹಿನ್ನೆಲೆ ಏನು, ಯಾವ ವಿಷಯಕ್ಕಾಗಿ ಬಂದಿದ್ದಾರೆ ಎಂಬುದು ಎಲ್ಲಾ ಗೊತ್ತು. ನಾನೇನು ಹೇಳಬೇಕಾಗಿಲ್ಲ. ಪಾರದರ್ಶಕತೆ ಬಗ್ಗೆ, ನ್ಯಾಯಸಮ್ಮತ ವಿಚಾರದ ಬಗ್ಗೆ ಮಾತನಾಡುವುದಕ್ಕೆ ಇವರಿಗೆ ಮೌಲ್ಯವೂ ಇಲ್ಲ ಅರ್ಹತೆಯೂ ಇಲ್ಲ' ಎಂದರು.

'ನಮ್ಮಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದವರು ಮತದಾರರ ಮಾಹಿತಿ ಸಂಗ್ರಹಿಸಿದ ಬಗ್ಗೆ ನಾಲ್ಕೈದು ಸಲ ದೂರು ನೀಡಲಾಗಿದೆ. ಈ ಬಗ್ಗೆಯೂ ತನಿಖೆ ಆಗಲಿ' ಎಂದರು.

ಬಿಜೆಪಿ ಮುಖಂಡ ಬಿ.ಎಲ್.ಸಂತೋಷ್ ಅವರಿಗೆ ತೆಲಂಗಾಣ ಪೋಲೀಸರಿಂದ ಸಮನ್ಸ್ ಜಾರಿ ಆದ ಕುರಿತು ಪ್ರತಿಕ್ರಿಯಿಸಿರುವ ಅಶ್ವತ್ಥನಾರಾಯಣ, 'ಯಾವುದೇ ಸರ್ಕಾರವೂ ಈ ರೀತಿ ಅಧಿಕಾರ ದುರ್ಬಳಕೆ ಮಾಡಿಕೊಂಡು ಆಪಾದನೆ ಮಾಡುವುದು ಸರಿಯಲ್ಲ. ಇಂಥ ಆಧಾರರಹಿತವಾದ ಹಾಗೂ ತಿರುಚಿದ ತನಿಖೆಯು ಅವರಿಗೇ ತಿರುಗು ಬಾಣ ಆಗಲಿದೆ' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT