ಭಾನುವಾರ, 15 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಒಳಮೀಸಲಾತಿ ನೀಡಲು ಬದ್ಧ: ಸಿಎಂ ಸಿದ್ದರಾಮಯ್ಯ

Published : 28 ಆಗಸ್ಟ್ 2024, 23:30 IST
Last Updated : 28 ಆಗಸ್ಟ್ 2024, 23:30 IST
ಫಾಲೋ ಮಾಡಿ
Comments

ಬೆಂಗಳೂರು: ‘ಪರಿಶಿಷ್ಟ ಜಾತಿ ಸಮುದಾಯಕ್ಕೆ ಒಳಮೀಸಲಾತಿ ನೀಡಲು ನಾನು ಬದ್ಧನಾಗಿದ್ದೇನೆ. ಇದರ ಬಗ್ಗೆ ಯಾವುದೇ ಅನುಮಾನ, ಅಪನಂಬಿಕೆ ಬೇಡ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಸಚಿವರಾದ ಕೆ.ಎಚ್‌.ಮುನಿಯಪ್ಪ, ಆರ್‌.ಬಿ.ತಿಮ್ಮಾಪುರ, ಮಾಜಿ ಸಚಿವ ಎಚ್‌.ಆಂಜನೇಯ ಮತ್ತು ಕಾಂಗ್ರೆಸ್‌ ಮುಖಂಡ ಎಲ್‌.ಹನುಮಂತಯ್ಯ ಮತ್ತು ಇತರರನ್ನು ಒಳಗೊಂಡ ನಿಯೋಗದ ಜತೆ ಬುಧವಾರ ಚರ್ಚೆ ನಡೆಸಿ ಮಾತನಾಡಿದರು.

‘ಸುಪ್ರೀಂ ಕೋರ್ಟ್‌ ತೀರ್ಪಿನ ಬಗ್ಗೆ ಕಾನೂನು ತಜ್ಞರು ಮತ್ತು ದಲಿತ ಸಮುದಾಯದ ನಾಯಕರ ಜತೆ ಚರ್ಚೆ ನಡೆಸಿ ತೀರ್ಮಾನ ತೆಗೆದುಕೊಳ್ಳುತ್ತೇನೆ. ಒಳ ಮೀಸಲಾತಿಯನ್ನು ದಲಿತ ಸಮುದಾಯ ಒಮ್ಮತದಿಂದ ಒಪ್ಪಿಕೊಂಡು ಅನುಷ್ಠಾನಕ್ಕೆ ಬೆಂಬಲ ನೀಡಿರುವುದು ಸಂತೋಷದ ವಿಷಯ. ಒಳಮೀಸಲಾತಿ ಜಾರಿಗೆ ಬದ್ಧನಾಗಿದ್ದೇನೆ’ ಎಂದು ಭರವಸೆ ನೀಡಿದರು.

‘ಸುಪ್ರೀಂ ಕೋರ್ಟ್‌ ತೀರ್ಪಿನಲ್ಲಿ ಕೆನೆಪದರದ ವಿಚಾರ ಪ್ರಸ್ತಾಪವಾಗಿರುವುದು ಕೆಲವರಲ್ಲಿ ಗೊಂದಲ ಉಂಟು ಮಾಡಿದೆ. ನ್ಯಾಯಾಲಯದ ತೀರ್ಪಿನ ವಿಶ್ಲೇಷಣೆಗೆ ನಾನು ಹೋಗುವುದಿಲ್ಲ. ನಾನು ಅರ್ಥ ಮಾಡಿಕೊಂಡಂತೆ ಒಳ ಮೀಸಲಾತಿ ಜಾರಿಗೊಳಿಸಲು ಕೆನೆ ಪದರದ ವಿಚಾರ ಅಡ್ಡಿಯಾಗಲಾರದು. ಕೆನೆಪದರದ ಬಗ್ಗೆ ದಲಿತ ಸಮುದಾಯದ ನಿಲುವೇ ನನ್ನ ನಿಲುವೂ ಆಗಿದೆ’ ಎಂದರು.

‘ನಾನು, ನಮ್ಮ ಪಕ್ಷ ಮತ್ತು ನಮ್ಮ ಸರ್ಕಾರಕ್ಕೆ ಸಾಮಾಜಿಕ ನ್ಯಾಯದ ಪರವಾದ ಖಚಿತ ಮತ್ತು ದೃಢ ನಿಲುವು ಇದೆ. ಇದರಲ್ಲಿ ಗೊಂದಲ ಇಲ್ಲವೇ ಇಲ್ಲ. ಮೀಸಲಾತಿಯ ಸೌಲಭ್ಯದ ನ್ಯಾಯಯುತ ಹಂಚಿಕೆಗೆ ಒಳ ಮೀಸಲಾತಿ ಅಗತ್ಯ ಎನ್ನುವುದು ಇತ್ತೀಚಿನ ದಿನಗಳಲ್ಲಿ ಎಲ್ಲರಿಗೂ ಅರಿವಾಗಿದೆ. ಸುಪ್ರೀಂ ಕೋರ್ಟ್‌ ತೀರ್ಪು ಕೂಡಾ ಇದೇಅಭಿಪ್ರಾಯವನ್ನು ಹೊಂದಿದೆ’ ಎಂದರು.

‘ಬಿಜೆಪಿ ನಾಯಕರು ಅನಗತ್ಯ ಊಹಾಪೋಹಗಳ ಮೂಲಕ ಒಳಮೀಸಲಾತಿ ವಿಷಯವನ್ನು ಮುಂದಿಟ್ಟುಕೊಂಡು ನಮ್ಮ ಸರ್ಕಾರದ ವಿರುದ್ಧ ದಲಿತರನ್ನು ಎತ್ತಿಕಟ್ಟುವ ಕುಟಿಲ ಪ್ರಯತ್ನ
ನಡೆಸುತ್ತಿದ್ದಾರೆ. ಸಾಮಾಜಿಕ ನ್ಯಾಯದ ವಿರೋಧಿಗಳಾದ ಬಿಜೆಪಿ ನಾಯಕರ ಕುಟಿಲತನವನ್ನು ಅರ್ಥ ಮಾಡಿಕೊಳ್ಳುವ ಸಾಮರ್ಥ್ಯ ದಲಿತ ಸಮುದಾಯಕ್ಕೆ ಇದೆ’ ಎಂದು ಸಿದ್ದರಾಮಯ್ಯ
ಹೇಳಿದರು.

‘ಒಳ ಮೀಸಲಾತಿ: ಪರಿಶಿಷ್ಟರಲ್ಲಿ ಒಮ್ಮತ ಯತ್ನ’

ಬೆಂಗಳೂರು: ಎಲ್ಲ ಪರಿಶಿಷ್ಟ ಸಮುದಾಯಗಳನ್ನು ಒಂದೇ ಸೂರಿನಡಿ ತಂದು ಒಳ ಮೀಸಲಾತಿ ಜಾರಿಗೊಳಿಸುವಂತೆ ಒಮ್ಮತದಿಂದ ರಾಜ್ಯ ಸರ್ಕಾರದ ಮುಂದೆ ಹಕ್ಕೊತ್ತಾಯ ಮಂಡಿಸಲು ಕಾಂಗ್ರೆಸ್‌ ಶಾಸಕ ಪಿ.ಎಂ. ನರೇಂದ್ರಸ್ವಾಮಿ ನೇತೃತ್ವದ ‘ಪರಿಶಿಷ್ಟ ಜಾತಿ ಒಳಮೀಸಲಾತಿ ಅನುಷ್ಠಾನ ಸಮಿತಿ’ ಯತ್ನ ಮುಂದುವರಿಸಿದೆ.

ಪರಿಶಿಷ್ಟರಲ್ಲಿ ಅತಿಹಿಂದುಳಿದವರನ್ನು ಗುರುತಿಸಿ ಒಳಮೀಸಲಾತಿ ನೀಡುವ ರಾಜ್ಯ ಸರ್ಕಾರಗಳ ಅಧಿಕಾರವನ್ನು ಎತ್ತಿಹಿಡಿದು ಸುಪ್ರೀಂ ಕೋರ್ಟ್ ಇತ್ತೀಚೆಗೆ ನೀಡಿರುವ ತೀರ್ಪಿನ ಕಾರಣ ಸಮುದಾಯದ ಪ್ರಮುಖರನ್ನು ಒಗ್ಗೂಡಿಸಲು ಸಮಿತಿ ಸಭೆಗಳನ್ನು ನಡೆಸುತ್ತಿದೆ.

ಪರಿಶಿಷ್ಟ ಸಮುದಾಯದ ಸ್ವಾಮೀಜಿಗಳು ಮತ್ತು ವಿವಿಧ ಸಂಘಟನೆಗಳ ಪ್ರಮುಖರ ಜೊತೆ ಶಾಸಕರ ಭವನದಲ್ಲಿ ನರೇಂದ್ರಸ್ವಾಮಿ ಅವರು ಬುಧವಾರ ಚರ್ಚೆ ನಡೆಸಿದರು. ಒಳ ಮೀಸಲಾತಿ ಜಾರಿಗೆ ಅಡ್ಡಿಯಾಗಿರುವ ಸಮುದಾಯಗಳ ನಡುವಿನ ಆಂತರಿಕ ತಿಕ್ಕಾಟವನ್ನು ಮಾತುಕತೆ– ಸಮಾಲೋಚನೆ ಮೂಲಕ ಪರಿಹರಿಸಿಕೊಳ್ಳುವ ತುರ್ತು ಅಗತ್ಯದ ಬಗ್ಗೆ ಸಭೆಯಲ್ಲಿ ವಿಚಾರ ವಿನಿಮಯ ನಡೆಯಿತು.

ರಾಜ್ಯದಲ್ಲಿ ಪರಿಶಿಷ್ಟರಲ್ಲಿ ಒಳ ಮೀಸಲಾತಿ ಜಾರಿಗೆ ಸಂಬಂಧಿಸಿದಂತೆ ಈಗಾಗಲೇ ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗ ವರದಿ ನೀಡಿದೆ. ಆದರೆ, ರಾಜಕೀಯವೂ ಸೇರಿದಂತೆ ನಾನಾ ಕಾರಣಗಳಿಗೆ ಈ ವರದಿ ಬಹಿರಂಗ ಆಗಿಲ್ಲ. ವರದಿಯಲ್ಲಿ ಒಳ ಮೀಸಲಾತಿ ವರ್ಗೀಕರಣದ ಪ್ರಸ್ತಾವ ಇದ್ದರೂ ಹೆಚ್ಚಳಗೊಂಡ ಮೀಸಲಾತಿ ಪ್ರಮಾಣ, ಜನಸಂಖ್ಯೆ, ಸಮುದಾಯಗಳ ಸದ್ಯದ ಸ್ಥಿತಿಗತಿಯನ್ನು ಪರಿಗಣಿಸಿ, ಎಲ್ಲ ಭಿನ್ನಾಭಿಪ್ರಾಯಗಳಿಗೆ ಸೌಹಾರ್ದಯುತ ಚರ್ಚೆಯ ಮೂಲಕ ಪರಿಹಾರ ಕಂಡು ಕೊಳ್ಳಬೇಕು. ನಂತರ ಒಳ ಮೀಸಲಾತಿ ಜಾರಿಗೆ ಸರ್ಕಾರದ ಮೇಲೆ ಒತ್ತಡ ಹೇರಲು ಸಭೆಯಲ್ಲಿದ್ದ ಪ್ರಮುಖರು ಅಭಿಪ್ರಾಯ ವ್ಯಕ್ತಪಡಿಸಿದರು.

ಬಳಿಕ ಮಾತನಾಡಿದ ನರೇಂದ್ರಸ್ವಾಮಿ, ‘ಸುಪ್ರೀಂ ಕೋರ್ಟ್‌ ತೀರ್ಪು ಬಳಿಕ ಮೊದಲ ಸಭೆ ನಡೆಸಿದ್ದೇವೆ. ಇಂದಿನ ಸಭೆಗೆ ಶಾಸಕರು, ಸ್ವಾಮೀಜಿಗಳನ್ನು ಆಹ್ವಾನಿಸಿದ್ದೆವು. ರುದ್ರಪ್ಪ ಲಮಾಣಿ, ಶಿವರಾಜ ತಂಗಡಗಿಯವರು ಅನಿವಾರ್ಯ ಕಾರಣಗಳಿಂದ ಹಾಜರಾಗಲಾಗದು ಎಂದು ತಿಳಿಸಿದ್ದರು. ಒಳ ಮೀಸಲಾತಿ ಜಾರಿಗೆ ಮುಂದಿನ ದಿನಗಳಲ್ಲಿ ತೆಗೆದುಕೊಳ್ಳಬೇಕಾದ ಹೆಜ್ಜೆಗಳ ಬಗ್ಗೆ ಕೆಲವು ಮಹತ್ವದ ತೀರ್ಮಾನಗಳನ್ನು ತೆಗೆದುಕೊಂಡಿದ್ದೇವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT