ಸೋಮವಾರ, 7 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಿಪಿಎಲ್‌ ಮಾನದಂಡ ಪರಿಶೀಲನೆಗೆ ಸಮಿತಿ: ದೇಶಪಾಂಡೆ

Published : 30 ಸೆಪ್ಟೆಂಬರ್ 2024, 15:43 IST
Last Updated : 30 ಸೆಪ್ಟೆಂಬರ್ 2024, 15:43 IST
ಫಾಲೋ ಮಾಡಿ
Comments

ಬೆಂಗಳೂರು: ‘ಬಿಪಿಎಲ್‌ (ಬಡತನ ರೇಖೆಗಿಂತ ಕೆಳಗಿನ) ಮಾನದಂಡಗಳ ಪರಿಶೀಲನೆಗೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯೂ ಆಗಿರುವ ಅಭಿವೃದ್ಧಿ ಆಯುಕ್ತರ ಅಧ್ಯಕ್ಷತೆಯಲ್ಲಿ ಉಪ ಸಮಿತಿ ರಚಿಸಲಾಗಿದೆ’ ಎಂದು ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ. ದೇಶಪಾಂಡೆ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು, ‘ಆದಾಯ ತೆರಿಗೆ ಪಾವತಿದಾರರು, ಸರ್ಕಾರಿ ನೌಕರರು ಬಿಪಿಎಲ್ ಪಡಿತರ ಚೀಟಿ ಹೊಂದಿರುವ ದೂರುಗಳು ಇವೆ. ಬಿಪಿಎಲ್ ಪಡಿತರ ಚೀಟಿ ಮಾನದಂಡಗಳ ಜೊತೆಗೆ, ಸರ್ಕಾರದ ಪ್ರಾಯೋಜಿತ ಯೋಜನೆಗಳನ್ನೂ ಈ ಸಮಿತಿ ಪರಿಶೀಲಿಸಿ ಸಲಹೆಗಳನ್ನು ನೀಡಲಿದೆ’ ಎಂದರು.

‘ಆಡಳಿತದಲ್ಲಿ ಸುಧಾರಣೆ, ಸರಳೀಕರಣ, ನಾಗರಿಕ ಸೇವೆಗಳ ತ್ವರಿತ ವಿಲೇವಾರಿ ದೃಷ್ಟಿಯಿಂದ ಮುಖ್ಯಮಂತ್ರಿ, ಸಚಿವರು ಮತ್ತು ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳ ಜತೆಗೆ ಚರ್ಚೆ ನಡೆಸಲಾಗಿದೆ. ಉತ್ತರ ಕನ್ನಡ, ಬೆಳಗಾವಿ, ಧಾರವಾಡ ಜಿಲ್ಲೆಗಳಿಗೆ ಭೇಟಿ ನೀಡಿ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳೊಂದಿಗೆ ಸಭೆ, ಸಾರ್ವಜನಿಕರಿಂದಲೂ ಅಭಿಪ್ರಾಯ ಸಂಗ್ರಹಿಸಲಾಗಿದೆ’ ಎಂದರು.

‘ಪ್ರಮುಖ ಇಲಾಖೆಗಳ ಕೆಳಹಂತದಲ್ಲಿ ಖಾಲಿಯಿರುವ ಹುದ್ದೆಗಳ ಭರ್ತಿ, ಕೆಲಸದ ಹೊರೆ ಹೆಚ್ಚಿರುವ ಜಿಲ್ಲೆಗಳಿಗೆ ಮರು ನಿಯೋಜನೆ, ಅನಗತ್ಯವೆಂದು ಪರಿಗಣಿಸಲಾಗಿರುವ ಲಿಪಿಕ ಹುದ್ದೆಗಳನ್ನು ತಾಂತ್ರಿಕ ಹುದ್ದೆಗಳಾಗಿ ಪರಿವರ್ತಿಸಲು ಸಲಹೆ ನೀಡಲಾಗಿದೆ. ಸಿಬ್ಬಂದಿಯ ಮೇಲಿನ ಕೆಲಸದ ಹೊರೆಯನ್ನು ಕಡಿಮೆ ಮಾಡಲು ಇ-ಆಫೀಸ್‌‍, ಎಂಡ್‌- ಟು- ಎಂಡ್‌ ಆನ್‌ಲೈನ್‌ ಸೇವೆಗಳು ಮತ್ತು ತಂತ್ರಜ್ಞಾನವನ್ನು ಬಳಸಿಕೊಳ್ಳಲು ಸಲಹೆ ನೀಡಲಾಗಿದೆ. ತ್ವರಿತ ಕಡತ ವಿಲೇವಾರಿಗೆ ಅನುಕೂಲ ಆಗುವಂತೆ, ಕಡತ ಚಲನವಲನದ ಹಂತಗಳನ್ನು 3- 4 ಹಂತಗಳಿಗೆ ಇಳಿಸಲಾಗುವುದು’ ಎಂದು ವಿವರಿಸಿದರು.

‘ಕಚೇರಿಗಳಿಗೆ ಜನರ ಅಲೆದಾಟ ತಪ್ಪಿಸಲು ಮತ್ತು ದಕ್ಷತೆ ಹೆಚ್ಚಿಸಲು 19 ಇಲಾಖೆಗಳಿಗೆ ಸಂಬಂಧಿಸಿದ 2,871 ಶಿಫಾರಸುಗಳನ್ನು ಆಯೋಗ ಮಾಡಿದೆ. ಅವುಗಳಲ್ಲಿ 853 ಶಿಫಾರಸುಗಳನ್ನು ಸರ್ಕಾರ ಅನುಷ್ಠಾನಕ್ಕೆ ತಂದಿದೆ. 592 ಶಿಫಾರಸುಗಳನ್ನು ತಿಂಗಳೊಳಗೆ ಅನುಷ್ಠಾನಕ್ಕೆ ತರಲು ನಿರ್ದೇಶನ ನೀಡಲಾಗಿದೆ’ ಎಂದೂ ದೇಶಪಾಂಡೆ ಹೇಳಿದರು.

‘ನಿಗಮ– ಮಂಡಳಿಗಳಿಗೆ ಬಲ’ ‘ಕೆಲವು ಇಲಾಖೆಗಳು ನಿಗಮ– ಮಂಡಳಿಗಳನ್ನು ವಿಲೀನಗೊಳಿಸುವ ಸಾಧ್ಯತೆಯನ್ನು ಪರಿಶೀಲಿಸಲಾಗುತ್ತಿದೆ. 160 ನಿಗಮ-ಮಂಡಳಿಗಳ ಪೈಕಿ 53 ಮಾತ್ರ ಆರ್ಥಿಕವಾಗಿ ಲಾಭದಲ್ಲಿವೆ. ಉಳಿದ 107 ನಿಗಮ-ಮಂಡಳಿಗಳಿಗೆ ಬಲವರ್ಧನೆ ಅಥವಾ ವಿಲೀನದಂತಹ ಕ್ರಮದ ಅಗತ್ಯವಿದೆ. ಆರ್ಥಿಕವಾಗಿ ಬಲಪಡಿಸಿ ಲಾಭದ ಹಳಿಗೆ ತರಬಹುದಾದ ನಿಗಮ– ಮಂಡಳಿಗಳನ್ನು ಗುರುತಿಸಿ ಬಲವರ್ಧನೆಗೆ ಕೈಗೊಳ್ಳಬೇಕಾದ ಕ್ರಮಗಳು ಬೊಕ್ಕಸಕ್ಕೆ ಹೊರೆಯಾದ ನಿಗಮ-ಮಂಡಳಿಗಳ ವಿಲೀನದ ಕುರಿತು ಸಲಹೆ ನೀಡಲು ಚಿಂತನೆ ನಡೆದಿದೆ’ ಎಂದು ದೇಶಪಾಂಡೆ ಹೇಳಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT