ಬೆಂಗಳೂರು: ‘ಬಿಟ್ ಕಾಯಿನ್, ವಾಲ್ಮೀಕಿ ಅಭಿವೃದ್ಧಿ ನಿಗಮ, ಕೋವಿಡ್ ನಿರ್ವಹಣೆ ಹಗರಣ ಸೇರಿದಂತೆ ಎಲ್ಲ ಪ್ರಕರಣಗಳನ್ನು ಪರಿಶೀಲಿಸಲು ಸಮಿತಿ ರಚಿಸಲು ನಿರ್ಧರಿಸಲಾಗಿದೆ’ ಎಂದು ಗೃಹ ಸಚಿವ ಜಿ. ಪರಮೇಶ್ವರ ತಿಳಿಸಿದರು.
ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಈಗಾಗಲೇ ಎಸ್‌ಐಟಿ ಮತ್ತು ಸಿಐಡಿಗೆ ವಹಿಸಿರುವ ಹಗರಣಗಳ ತನಿಖೆ ಯಾವ ಹಂತದಲ್ಲಿವೆ ಎಂಬುದನ್ನು ಪರಿಶೀಲಿಸುತ್ತಿದ್ದೇನೆ. ಮುಂದಿನ ದಿನಗಳಲ್ಲಿ ಸಮಿತಿ ರಚಿಸಲಾಗುವುದು’ ಎಂದರು.
ಅನವಶ್ಯಕ ಆಪಾದನೆ ಸಲ್ಲ: ‘ಖರ್ಗೆ ಕುಟುಂಬದ ಸಿದ್ಧಾರ್ಥ ಟ್ರಸ್ಟ್‌ಗೆ ಕಾನೂನು ಬಾಹಿರವಾಗಿ ಕೆಐಎಡಿಬಿ ನಿವೇಶನ ಹಂಚಿಕೆ ಮಾಡಿಲ್ಲ ಎಂದು ಸಚಿವ ಎಂ.ಬಿ. ಪಾಟೀಲ ಈಗಾಗಲೇ ಸ್ಪಷ್ಟನೆ ನೀಡಿದ್ದಾರೆ. ದೂರು ಬಂದರೆ ಪರಿಶೀಲಿಸಿ ತೀರ್ಮಾನ ತೆಗೆದುಕೊಳ್ಳಬೇಕಾದವರು ರಾಜ್ಯಪಾಲರು. ಅನವಶ್ಯಕವಾಗಿ ಆಪಾದನೆ ಮಾಡುವುದು ಸರಿಯಲ್ಲ’ ಎಂದರು.
‘ರಾಜಕೀಯ ಉದ್ದೇಶ ಇಟ್ಟುಕೊಂಡು ಬಿಜೆಪಿಯವರು ಆರೋಪಗಳನ್ನು ಮಾಡುತ್ತಿದ್ದಾರೆ. ನಾವು ಸತ್ಯಾಸತ್ಯತೆ ಜನರ ಮುಂದಿಡುತ್ತೇವೆ. ಯಾವುದನ್ನೂ ನಾವು ಕಾನೂನು ಬಾಹಿರವಾಗಿ ಮಾಡಿಲ್ಲ ಎಂಬುದನ್ನು ಈಗಾಗಲೇ ನ್ಯಾಯಾಲಯಕ್ಕೂ ತಿಳಿಸಿದ್ದೇವೆ’ ಎಂದರು.