ಭಾನುವಾರ, 23 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಿದ್ದರಾಮಯ್ಯ ವಿರುದ್ಧ ಬಿ.ಕೆ. ಹರಿಪ್ರಸಾದ್ ವಾಗ್ದಾಳಿ: ‘ಕೈ’ ಪಾಳಯದಲ್ಲಿ ಚರ್ಚೆ

Published 11 ಸೆಪ್ಟೆಂಬರ್ 2023, 23:30 IST
Last Updated 11 ಸೆಪ್ಟೆಂಬರ್ 2023, 23:30 IST
ಅಕ್ಷರ ಗಾತ್ರ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವಿಧಾನ ಪರಿಷತ್‌ನ ಕಾಂಗ್ರೆಸ್‌ ಸದಸ್ಯ ಬಿ.ಕೆ. ಹರಿಪ್ರಸಾದ್ ನಡೆಸುತ್ತಿರುವ ಪರೋಕ್ಷ ವಾಗ್ದಾಳಿ ‘ಕೈ’ ಪಾಳಯದಲ್ಲಿ ಚರ್ಚೆಗೆ ಕಾರಣವಾಗಿದ್ದು, ಕೆಲವು ಸಚಿವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

‘ತಮ್ಮನ್ನು ಕೀಳಾಗಿ ಟೀಕಿಸುತ್ತಿರುವ ಹರಿಪ್ರಸಾದ್‌ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ಹೈಕಮಾಂಡ್‌ಗೆ ದೂರು ಸಲ್ಲಿಸಿದ್ದಾರೆ. ಟೀಕೆಗಳನ್ನು ಮುಂದುವರಿಸದಂತೆ ಪಕ್ಷದ ನಾಯಕರು ಹರಿಪ್ರಸಾದ್‌ಗೆ ಸೂಚಿಸಿದ್ದಾರೆ’ ಎಂದು ‍ಪಕ್ಷದ ಮೂಲಗಳು ಹೇಳಿವೆ. 

ಹೈಕಮಾಂಡ್ ಮಧ್ಯ ಪ್ರವೇಶಿಸಿರುವ ಬೆನ್ನಲ್ಲೇ, ಐವರು ಸಚಿವರು ಹರಿಪ್ರಸಾದ್‌ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದಾರೆ. ಆದರೆ, ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡದೇ ಇರುವುದು ಪಕ್ಷದೊಳಗೆ ಚರ್ಚೆಯನ್ನು ಹುಟ್ಟುಹಾಕಿದೆ.

ಪಕ್ಷದಲ್ಲಿ ಹಿರಿಯನಾಗಿದ್ದರೂ ಸರ್ಕಾರದಲ್ಲಿ ಸೂಕ್ತ ಸ್ಥಾನಮಾನ ಸಿಕ್ಕಿಲ್ಲವೆಂಬ ಕೋಪ ಹರಿಪ್ರಸಾದ್‌ ಅವರದ್ದಾಗಿದೆ. ಹಿಂದುಳಿದ ಸಮುದಾಯದಿಂದ ಬಂದ ತಮ್ಮನ್ನು ಸಚಿವ ಸ್ಥಾನಕ್ಕೆ ಪರಿಗಣಿಸದಿರಲು ಸಿದ್ದರಾಮಯ್ಯ ಕಾರಣ ಎಂದು ಮುನಿಸಿಕೊಂಡಿರುವ ಅವರು, ಸಂದರ್ಭ ಸಿಕ್ಕಾಗಲೆಲ್ಲ ಬಹಿರಂಗವಾಗಿ ಅಸಮಾಧಾನ ಹೊರಹಾಕುತ್ತಿದ್ದಾರೆ. 

ತಿಂಗಳ ಹಿಂದೆ ನಡೆದಿದ್ದ ಈಡಿಗ ಸಮುದಾಯದ ಮುಖಂಡರ ಸಭೆಯಲ್ಲಿ ಮಾತನಾಡಿದ್ದ ಹರಿಪ್ರಸಾದ್, ‘ನನಗೆ ಸಿ.ಎಂ ಮಾಡುವುದೂ ಗೊತ್ತು; ಅಧಿಕಾರದಿಂದ ಇಳಿಸುವುದೂ ಗೊತ್ತು’ ಎಂದಿದ್ದರು. ಶನಿವಾರ (ಸೆ. 9) ನಡೆದ ಈಡಿಗ ಮತ್ತು ಅತಿ ಹಿಂದುಳಿದ ವರ್ಗಗಳ ಸಮಾನ ಮನಸ್ಕರ ಪೂರ್ವಭಾವಿ ಸಭೆಯಲ್ಲಿ, ಸಿದ್ದರಾಮಯ್ಯ ಅವರ ಹೆಸರು ಹೇಳದೆಯೇ ಮಾತಿನುದ್ದಕ್ಕೂ ಟೀಕಾಪ್ರಹಾರ ನಡೆಸಿದ್ದ ಹರಿಪ್ರಸಾದ್‌, ‘ಹ್ಯೂಬ್ಲೋ ವಾಚ್‌ ಕಟ್ಟಿಕೊಂಡು, ಪಂಚೆ ಉಟ್ಟುಕೊಂಡು ಒಳಗೆ ಖಾಕಿ ಚಡ್ಡಿ ಧರಿಸುವುದು ಸಮಾಜವಾದವಲ್ಲ. ಅರಸು ಅವರ ಕಾರಿನಲ್ಲಿ ಕುಳಿತ ಮಾತ್ರಕ್ಕೆ ಅರಸು ಆಗಲು ಸಾಧ್ಯವಿಲ್ಲ’ ಎಂದು ಕಟುವಾಗಿಯೇ ಟೀಕಿಸಿದ್ದರು.

ಸಿದ್ದರಾಮಯ್ಯ ವಿರುದ್ಧ ಪರೋಕ್ಷ ವಾಗ್ದಾಳಿಗೆ ಸಂಬಂಧಿಸಿದಂತೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಹೊಸಪೇಟೆಯಲ್ಲಿ ಭಾನುವಾರ ಪ್ರತಿಕ್ರಿಯಿಸಿದ್ದ ಹರಿಪ್ರಸಾದ್‌, ‘ಏನೂ ಕೇಳಬೇಡಿ, ಏನೂ ಮಾತನಾಡಬಾರದೆಂದು ಮೇಲಿನವರು ಹೇಳಿದ್ದಾರಪ್ಪ’ ಎಂದಿದ್ದರು. ಈ ಮೂಲಕ, ತಮ್ಮ ಹೇಳಿಕೆ ಹೈಕಮಾಂಡ್‌ಗೆ ತಲುಪಿದ್ದು, ಹೇಳಿಕೆ ನೀಡಬಾರದು ಎಂದು ಸೂಚಿದ್ದಾರೆ ಎನ್ನುವುದನ್ನು ಸೂಚ್ಯವಾಗಿ ಹೇಳಿದ್ದರು. ಆದರೆ, ಸೋಮವಾರ ಮತ್ತೆ ‘ಹಗರಣ’ಗಳನ್ನು ಪ್ರಸ್ತಾಪಿಸಿ, ತಾವಿನ್ನೂ ಸುಮ್ಮನಾಗಿಲ್ಲ ಎಂದು ತೋರಿಸಿದ್ದಾರೆ.

ಸಿದ್ದರಾಮಯ್ಯ ಬೆನ್ನಿಗೆ ಸಚಿವರು?: ಹರಿಪ್ರಸಾದ್‌ ಹೇಳಿಕೆಗೆ ಪ್ರತಿಕ್ರಿಯಿಸಿರುವ ಬೃಹತ್‌ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ, ‘ಹರಿಪ್ರಸಾದ್ ಪಕ್ಷದ ಹಿರಿಯ ನಾಯಕರಲ್ಲಿ ಒಬ್ಬರು. ಎಲ್ಲ ವಿಚಾರಗಳನ್ನೂ ಅವರು ಪಕ್ಷದ ಒಳಗೇ ಮಾತನಾಡಬೇಕಿತ್ತು. ಆದರೆ, ಅವರು ಬೀದಿಗೆ ಹೋಗಿದ್ದಾರೆ. ಇದು ಸರಿಯಲ್ಲ. ಅವರಿಂದ ಇಂತಹ ಮಾತು ಬರಬಾರದಿತ್ತು. ಅವರ ಮಾತುಗಳನ್ನು ಕೇಳಿಸಿಕೊಂಡು ಪಕ್ಷದ ರಾಷ್ಟ್ರೀಯ ನಾಯಕರು ಸುಮ್ಮನೆ ಕೂರುವುದಿಲ್ಲ. ಇದರ ಪರಿಣಾಮಗಳನ್ನು ಅವರು ಎದುರಿಸಬೇಕಾಗುತ್ತದೆ’ ಎಂದು ಹೇಳಿದ್ದಾರೆ.

ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ, ‘ಸಿದ್ದರಾಮಯ್ಯನವರು ತಾವು ದೇವರಾಜ ಅರಸು ಎಂದು ಎಲ್ಲಿಯೂ ಯಾರ ಮುಂದೆಯೂ ಹೇಳಿಲ್ಲ. ಜನರು ಅವರನ್ನು ದೇವರಾಜ ಅರಸರಂತೆ ಕಾಣಲು ಯತ್ನಿಸುತ್ತಿದ್ದಾರೆ. ಅವರಿಗೆ ತಮ್ಮದೇ ಆದ ಗತ್ತು, ಆಡಳಿತದ ಗಾಂಭೀರ್ಯ ಇದೆ. ಅವರು ಎಲ್ಲ ಸಮಾಜದವರನ್ನು ಜತೆಗೆ ಕರೆದುಕೊಂಡು ಹೋಗುತ್ತಿದ್ದಾರೆ. ಹರಿಪ್ರಸಾದ್, ಪ್ರಣವಾನಂದ ಸ್ವಾಮೀಜಿ ಈಡಿಗ ಸಮುದಾಯಕ್ಕೆ ಆದ್ಯತೆ ನೀಡುತ್ತಿಲ್ಲ ಎನ್ನುತ್ತಾರಲ್ಲ? ಈಗಾಗಲೇ ಈಡಿಗ ಸಮಾಜದಿಂದ ಮಧು ಬಂಗಾರಪ್ಪ ಸಚಿವರಾಗಿದ್ದಾರೆ. ಹೈಕಮಾಂಡ್ ಎಲ್ಲವನ್ನೂ ಗಮನಿಸುತ್ತಿದೆ’ ಎಂದಿದ್ದಾರೆ.

‘ಹರಿಪ್ರಸಾದ್ ಅವರು ಯಾವ ಉದ್ದೇಶದಿಂದ ಆ ರೀತಿ ಮಾತನಾಡಿದ್ದಾರೋ ಗೊತ್ತಿಲ್ಲ. ಆದರೆ, ಸಾರ್ವಜನಿಕ ಸಮಾರಂಭದಲ್ಲಿ ಆ ರೀತಿ ಮಾತನಾಡಬಾರದಿತ್ತು. ಪಕ್ಷಕ್ಕೆ ಮುಜುಗರ ತರುವ ರೀತಿ ನಡೆದುಕೊಳ್ಳಬಾರದಿತ್ತು. ಅವರ ಹೇಳಿಕೆಯಿಂದ ಬೇರೆ ಯಾರಿಗೂ ಹಾನಿ ಉಂಟಾಗುವುದಿಲ್ಲ. ಇದರಿಂದ ಅವರಿಗೇ ಹಾನಿ’ ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಹೇಳಿದ್ದಾರೆ.

ಪಕ್ಷ ವಿರೋಧಿ ಚಟುವಟಿಕೆ ಹೇಗಾಗುತ್ತದೆ: ಪ್ರಿಯಾಂಕ್

‘ಹರಿಪ್ರಸಾದ್ ಪಕ್ಷದ ಒಬ್ಬ ಹಿರಿಯ, ಅನುಭವಿ ನಾಯಕ. ಅವರಿಗೆ ತಮ್ಮ ಜವಾಬ್ದಾರಿ ಗೊತ್ತಿದೆ. ರಾಜ್ಯಮಟ್ಟದಲ್ಲಿ ಮಾತ್ರವಲ್ಲ ರಾಷ್ಟ್ರಮಟ್ಟದಲ್ಲೂ ಹಿರಿಯ ನಾಯಕರೆಲ್ಲ ಅವರಿಗೆ ಗೊತ್ತು. ಅವರು ತಮ್ಮ ಸಮಾಜದ ಬಗ್ಗೆ ಮಾತನಾಡಿದರೆ ಅದು ಪಕ್ಷ ವಿರೋಧಿ ಚಟುವಟಿಕೆ ಹೇಗಾಗುತ್ತದೆ’ ಎಂದು ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.

‘ತಮ್ಮ ಮಾತುಗಳಲ್ಲಿ ಅವರು ಎಲ್ಲೂ ಮುಖ್ಯಮಂತ್ರಿಯವರ ಹೆಸರನ್ನು ಪ್ರಸ್ತಾಪಿಸಿಲ್ಲ. ಸಿದ್ದರಾಮಯ್ಯನವರೂ ಅದನ್ನೇ ಹೇಳಿದ್ದಾರೆ. ಇನ್ನು ನಾನು ಏನು ಹೇಳಲು ಸಾಧ್ಯ’ ಎಂದು ಪ್ರತಿಕ್ರಿಯಿಸಿದ್ದಾರೆ.

ನಮ್ಮ ಪಕ್ಷದಲ್ಲಿ ಕಿತ್ತಾಟ ಇಲ್ಲ. ಆಂತರಿಕ ಪ್ರಜಾಪ್ರಭುತ್ವ ಇದೆ. ಅದರಂತೆ ಮುಕ್ತವಾಗಿ ಮಾತನಾಡುತ್ತೇನೆ. ಬಿಜೆಪಿ ನಾಯಕರ ಹಾಗೆ ನಾಗ್ಪುರದಿಂದ ನಿರ್ದೇಶನ ತೆಗೆದುಕೊಂಡು ಮಾತನಾಡುವುದಿಲ್ಲ
-ಬಿ.ಕೆ. ಹರಿಪ್ರಸಾದ್‌, ವಿಧಾನ ಪರಿಷತ್‌ ಕಾಂಗ್ರೆಸ್‌ ಸದಸ್ಯ
ಹರಿಪ್ರಸಾದ್‌ ತಮ್ಮ ವೈಯಕ್ತಿಕ ಅಭಿಪ್ರಾಯವನ್ನು ಹೇಳಿದ್ದಾರೆ. ಅವರ ಹೇಳಿಕೆಯನ್ನು ಹೈಕಮಾಂಡ್ ಕೂಡ ಗಮನಿಸಿದೆ.
-ಜಿ. ಪರಮೇಶ್ವರ, ಗೃಹ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT