ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಹುಲ್ ಗಾಂಧಿ ಸಂಸತ್ ಸದಸ್ಯತ್ವ ರದ್ದತಿ ಹಿಂದೆ ಬಿಜೆಪಿ ಪಿತೂರಿ: ‘ಕೈ’ ನಾಯಕರ ಕಿಡಿ

Published 7 ಜುಲೈ 2023, 18:07 IST
Last Updated 7 ಜುಲೈ 2023, 18:07 IST
ಅಕ್ಷರ ಗಾತ್ರ

ಬೆಂಗಳೂರು: ‘ರಾಹುಲ್ ಗಾಂಧಿ ಅವರ ಸಂಸತ್ ಸದಸ್ಯತ್ವ ರದ್ದತಿಯ ಹಿಂದೆ ಬಿಜೆಪಿ ಪಿತೂರಿಯಿದೆ’ ಎಂದು ಆರೋಪಿಸಿ ವಿಧಾನಸೌಧ ಆವರಣದಲ್ಲಿರುವ ಗಾಂಧಿ ಪ್ರತಿಮೆ ಮುಂಭಾಗದಲ್ಲಿ ಉಪ ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಸಚಿವರು, ಕಾಂಗ್ರೆಸ್ ಶಾಸಕರು ಶುಕ್ರವಾರ ಪ್ರತಿಭಟನೆ ನಡೆಸಿದರು.

ಸುದ್ದಿಗಾರರ ಜೊತೆ ಮಾತನಾಡಿದ ಶಿವಕುಮಾರ್‌, ‘ನಮ್ಮ ನಾಯಕ ರಾಹುಲ್ ಗಾಂಧಿ ಅವರ ಮೇಲೆ ಮಾನನಷ್ಟ ಮೊಕದ್ದಮೆ ದಾಖಲು ಮಾಡಿ, ಅದರ ತೀರ್ಪಿನ ಅನ್ವಯ ಅವರನ್ನು ಸಂಸತ್ ಸದಸ್ಯ ಸ್ಥಾನದಿಂದ ಅನರ್ಹಗೊಳಿಸಿದ್ದಾರೆ. ರಾಹುಲ್ ಗಾಂಧಿ ಅವರ ರಾಜಕೀಯ ಬೆಳವಣಿಗೆ ತಡೆಯಲು ಬಿಜೆಪಿ ಈ ಕುತಂತ್ರ ನಡೆಸಿದೆ’ ಎಂದು ಆರೋಪಿಸಿದರು.

‘ರಾಹುಲ್ ಗಾಂಧಿ ಅವರು ದೇಶದ ಬಡವರ ಧ್ವನಿಯಾಗಿ, ಬೆಲೆ ಏರಿಕೆ ಮತ್ತು ನಿರುದ್ಯೋಗದ ವಿರುದ್ಧ ಹೋರಾಟ ಮಾಡುತ್ತಿದ್ದು, ಈ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನಕ್ಕೆ ಬಿಜೆಪಿಯವರು ಮುಂದಾಗಿದ್ದಾರೆ. ದೇಶದ ಐಕ್ಯತೆ, ಸಮಗ್ರತೆ ಹಾಗೂ ಶಾಂತಿ ಸ್ಥಾಪನೆಗೆ ಭಾರತ ಒಗ್ಗೂಡಿಸಲು ಮುಂದಾಗಿರುವ ನಮ್ಮ ನಾಯಕನ ವಿರುದ್ಧ ಬಿಜೆಪಿ ಸಂಚು ರೂಪಿಸುತ್ತಿದೆ. ಆದರೆ, ರಾಹುಲ್ ಗಾಂಧಿ ಅವರ ಹೋರಾಟವನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಜನ ಸೂಕ್ತ ಉತ್ತರ ನೀಡುತ್ತಾರೆ. ಮೈಸೂರು, ಬೆಳಗಾವಿ, ಧಾರವಾಡ ಸೇರಿದಂತೆ ವಿಭಾಗೀಯ ಕೇಂದ್ರಗಳಲ್ಲಿಯೂ ಪ್ರತಿಭಟನೆ ನಡೆಸುವಂತೆ ಪಕ್ಷದ ಕಾರ್ಯಕರ್ತರಿಗೆ ತಿಳಿಸಿದ್ದೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT