ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಜರಂಗದಳ: ಕಾಂಗ್ರೆಸ್‌ – ಬಿಜೆಪಿ ಮಧ್ಯೆ ಮತ್ತೆ ಜಟಾಪಟಿ

Published 3 ಮೇ 2023, 20:40 IST
Last Updated 3 ಮೇ 2023, 20:40 IST
ಅಕ್ಷರ ಗಾತ್ರ
‘ಸಂವಿಧಾನದ ವಿಧಿಗಳನ್ನು ಉಲ್ಲಂಘಿಸುವ ವ್ಯಕ್ತಿ ಹಾಗೂ ಬಜರಂಗದಳ, ಪಿಎಫ್‌ಐನಂತಹ ಸಂಘಟನೆಗಳ ನಿಷೇಧವೂ ಸೇರಿದಂತೆ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು’ – ಕಾಂಗ್ರೆಸ್ ಪ್ರಣಾಳಿಕೆಯ ಈ ಪ್ರಸ್ತಾವಕ್ಕೆ ಆಕ್ರೋಶ ಬುಧವಾರವೂ ಮುಂದುವರಿದಿದೆ. ‘ವಿಷಯವನ್ನು ತಿರುಚಿರುವ ಬಿಜೆಪಿ ಉದ್ದೇಶಪೂರ್ವಕ ವಿವಾದ ಸೃಷ್ಟಿಸಿದೆ’ ಎಂದು ದೂರಿರುವ ಕಾಂಗ್ರೆಸ್, ತನ್ನ ನಿಲುವಿನಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದೂ ಹೇಳಿದೆ.

‘1,500 ದೇವಾಲಯಗಳನ್ನು ಕೆಡವಿದಾಗ ಪ್ರತಿಭಟಿಸಲಿಲ್ಲ ಏಕೆ: ಸುರ್ಜೇವಾಲಾ

ಬೆಂಗಳೂರು: ‘ನಾನು ಹಿಂದೂ, ನಾನು ಹನುಮ ಭಕ್ತ. ನನ್ನ ಕ್ಷೇತ್ರದಲ್ಲಿ ಹನುಮ ದೇವಾಲಯ ಕಟ್ಟಿದ್ದೇನೆ. ಆದರೂ, ನನಗೆ ಸಂವಿಧಾನವೇ ದೇವರು. ಸಂವಿಧಾನ ನಮ್ಮ ಧಾರ್ಮಿಕ ಹಕ್ಕನ್ನು ರಕ್ಷಿಸುತ್ತದೆ. ಸಮಾಜದಲ್ಲಿ ಯಾರು ಕಾನೂನು ಕೈಗೆತ್ತಿಕೊಳ್ಳುತ್ತಾರೋ ಅಂಥವರ ವಿರುದ್ಧ ಕ್ರಮಕೈಗೊಳ್ಳುವುದಾಗಿ ಪ್ರಣಾಳಿಕೆಯಲ್ಲಿ ಹೇಳಿದ್ದೇವೆ’ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲಾ ಹೇಳಿದರು.

ಪ್ರಣಾಳಿಕೆಯನ್ನು ಸಮರ್ಥಿಸಿದ ಅವರು, ‘ರಾಜ್ಯದಲ್ಲಿ ನಾಲ್ಕು ವರ್ಷಗಳಲ್ಲಿ 1,500 ದೇವಾಲಯಗಳನ್ನು ಬಿಜೆಪಿ ಸರ್ಕಾರ ಕೆಡವಿದೆ. ಅದರ ವಿರುದ್ಧ ಯಾಕೆ ಯಾರೂ ಪ್ರತಿಭಟನೆ ಮಾಡಲಿಲ್ಲ’ ಎಂದು ಪ್ರಶ್ನಿಸಿದರು.

‘ಬಿಜೆಪಿ‌ ನಾಯಕರಿಗೆ ಹನುಮಾನ್ ಚಾಲೀಸ ಓದಲು ಬರುವುದಿಲ್ಲ. ಅವರಿಗೆ ಶೇ 40 ಕಮಿಷನ್ ತೆಗೆದುಕೊಳ್ಳುವುದಷ್ಟೇ ಗೊತ್ತು’ ಎಂದೂ ತಿರುಗೇಟು ನೀಡಿದರು.

‘ನಂಜನಗೂಡಿನಲ್ಲಿ 3 ಸಾವಿರ ಹಳೆಯ ಹನುಮಂತನ ದೇವಾಲಯ ಕೆಡವಿದ್ದರು. ಬೆಂಗಳೂರಿನಲ್ಲಿ ಮೆಟ್ರೊ ನಿರ್ಮಾಣಕ್ಕೆ 150 ವರ್ಷಗಳ ಹಳೆಯ ಹನುಮಂತನ ದೇವಾಲಯವನ್ನು 2020ರ ಜ. 27ರಂದು ಕೆಡವಿದ್ದರು. ಶಿವಮೊಗ್ಗ ನಗರದಲ್ಲಿ 2021ರ ಫೆ.17ರಂದು ಹಳೆಯ ದೇವಾಲಯ ಕೆಡವಲಾಗಿತ್ತು. ಚಿತ್ರದುರ್ಗದ ಹೊಳಲ್ಕೆರೆಯಲ್ಲಿ 2022ರ ಫೆ.28ರಂದು ಹನುಮ ದೇವಾಲಯ ಕೆಡವಲಾಗಿತ್ತು. ಆಗ ಪ್ರತಿಭಟನೆ ನಡೆಸಲಾಗಿತ್ತೇ? ಮೋದಿ ಮಾತನಾಡಿದ್ದಾರಾ? ಈಗ ಚುನಾವಣೆ ಬಂದಿದೆ ಎಂಬ ಕಾರಣಕ್ಕೆ ಈ ವಿಚಾರ ಬಳಸಿಕೊಳ್ಳುತ್ತಿದ್ದಾರೆ‘ ಎಂದರು.

‘ಇದು ಕೋಮು ವಿಚಾರವಲ್ಲ. ಸಂವಿಧಾನ ಉಲ್ಲಂಘನೆ ಮಾಡುವವರು ಹಾಗೂ ಕಾನೂನು ಕೈಗೆತ್ತಿಕೊಳ್ಳುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಣಾಳಿಕೆಯಲ್ಲಿ ಹೇಳಲಾಗಿದೆ. ದಲಿತ ಯುವಕ ದಿನೇಶ್ ಎಂಬಾತನನ್ನು ಬಜರಂಗದಳದವರು ಹಾಡಹಗಲೇ ಹತ್ಯೆ ಮಾಡಿದರೆ ಕಾನೂನು ಉಲ್ಲಂಘನೆ ಆಗುವುದಿಲ್ಲವೇ’ ಎಂದೂ ಪ್ರಶ್ನಿಸಿದರು.

ಬಜರಂಗ ದಳ ನಿಷೇಧಿಸುತ್ತೇವೆ ಎನ್ನುವ ಮೂಲಕ ಕಾಂಗ್ರೆಸ್‌ ತಿರುಕನ ಕನಸು ಕಾಣುತ್ತಿದೆ. ಆ ಪಕ್ಷ ಅಧಿಕಾರಕ್ಕೆ ಬರುವುದಿಲ್ಲ.
ಬಿ.ಎಸ್. ಯಡಿಯೂರಪ್ಪ, ಬಿಜೆಪಿ ಸಂಸದೀಯ ಮಂಡಳಿ ಸದಸ್ಯ

ಮಂದಿರಗಳಲ್ಲಿ ಸಾಮೂಹಿಕ ಹನುಮಾನ್ ಚಾಲೀಸಾ ಪಠಣ ಇಂದು

ಮಂಗಳೂರು: ‘ಬಜರಂಗ ದಳ ನಿಷೇಧಿಸುವ ಪ್ರಸ್ತಾಪ ಮಾಡಿರುವುದನ್ನು ವಿರೋಧಿಸಿ ರಾಜ್ಯದ ಎಲ್ಲ ಮಂದಿರಗಳಲ್ಲಿ ಮೇ 4ರಂದು ಸಂಜೆ 7 ಗಂಟೆಗೆ ಸಾಮೂಹಿಕ ಹನುಮಾನ ಚಾಲೀಸಾ ಪಠಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ’ ಎಂದು ವಿಶ್ವ ಹಿಂದೂ ಪರಿಷತ್, ಬಜರಂಗದಳದ ಕರ್ನಾಟಕ ದಕ್ಷಿಣ ಪ್ರಾಂತದ ಸಹ ಕಾರ್ಯದರ್ಶಿ ಶರಣ್‌ ಪಂಪ್‌ವೆಲ್ ತಿಳಿಸಿದರು.

‘ಎಲ್ಲ ದೇವಸ್ಥಾನ, ದೈವಸ್ಥಾನಗಳಲ್ಲಿ ಸಾಮೂಹಿಕ ಹನುಮಾನ್ ಚಾಲೀಸಾ ಪಠಣಕ್ಕೆ ಕರೆ ನೀಡಲಾಗಿದೆ. ಧರ್ಮಕ್ಕೆ ಸಂಕಟ ಎಸಗಿರುವ ಈ ಸಂದರ್ಭದಲ್ಲಿ ಎಲ್ಲ ಭೇದ ಬದಿಗಿಟ್ಟು ಧರ್ಮ ರಕ್ಷಣೆ ಕಾರ್ಯದಲ್ಲಿ ಹಿಂದೂಗಳು ಭಾಗಿಯಾಗಬೇಕು’ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

‘ಕಾಂಗ್ರೆಸ್ ಪ್ರಣಾಳಿಕೆಯಲ್ಲಿರುವ ಬಜರಂಗ ದಳ ನಿಷೇಧದ ಪ್ರಸ್ತಾಪವನ್ನು ಹಿಂಪಡೆಯಬೇಕು. ಯಾವುದೇ ಕಾರಣಕ್ಕೂ ಹಿಂದೂಗಳನ್ನು ಕೆಣಕಬಾರದು. ಈಗಾಗಲೇ ನಿಷೇಧವಾಗಿರುವ ಪಿಎಫ್‌ಐ ಜತೆಗೆ ಬಜರಂಗ ದಳವನ್ನು ಹೋಲಿಕೆ ಮಾಡುವುದನ್ನು ಒಪ್ಪಲು ಸಾಧ್ಯವಿಲ್ಲ’ ಎಂದು ಮಾಣಿಲ ಶ್ರೀಧಾಮ ‌ಮಹಾಲಕ್ಷ್ಮಿ ಕ್ಷೇತ್ರದ ಮೋಹನದಾಸ ಪರಮಹಂಸ ಸ್ವಾಮೀಜಿ, ಗುರುಪುರ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ಆಗ್ರಹಿಸಿದರು.

ದೇಶದಾದ್ಯಂತ ಇರುವ ಸಂಘಟನೆಯಾದ ಬಜರಂಗದಳ‌ವನ್ನು ನಿಷೇಧಿಸುವ ಅಧಿಕಾರ ರಾಜ್ಯ ಸರ್ಕಾರಕ್ಕಿಲ್ಲ. ಅದು ಕೇಂದ್ರದ ಮಟ್ಟದಲ್ಲಿ ಆಗಬೇಕು. ಅಲ್ಲಿ ಇವರ ಸರ್ಕಾರವಿದೆಯೇ
ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ

ಮತೀಯ ಗೂಂಡಾಗಿರಿ ತಡೆಗೆ ಕ್ರಮ: ಡಿಕೆಶಿ ಸಮರ್ಥನೆ

ಬೆಂಗಳೂರು: ‘ಮತೀಯ ಗೂಂಡಾಗಿರಿಯ ಮೂಲಕ ಬಜರಂಗದಳದವರು ಕಾನೂನು ಉಲ್ಲಂಘನೆ ಮಾಡುತ್ತಿದ್ದರು. ಅವರು ಕಾನೂನು ಸುವ್ಯವಸ್ಥೆಯೊಳಗೆ ಇರಬೇಕು ಎಂಬುದು ನಮ್ಮ ಉದ್ದೇಶ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಸಮರ್ಥಿಸಿದರು.

ಸಿದ್ದರಾಮಯ್ಯ ಮತ್ತು ರಣದೀಪ್‌ ಸಿಂಗ್‌ ಸುರ್ಜೇವಾಲಾ ಜೊತೆ ಸಭೆಯ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ನಾವು ಕೂಡ ಹನುಮನ ಭಕ್ತರೇ. ಮೋದಿ ಅವರು ನಮ್ಮ ವಿರುದ್ಧ ಟೀಕೆ ಮಾಡುವುದು ಬಿಟ್ಟು, ರಾಜ್ಯಕ್ಕೆ ನೀಡಿರುವ ಕೊಡುಗೆ ಏನು’ ಎಂದು ಪ್ರಶ್ನಿಸಿದರು.

‘ಬಿಜೆಪಿಯವರು ನಾನು ಬಜರಂಗಿ ಎಂದು ಆಂದೋಲನ ಮಾಡುವ ಮೊದಲು, ರಾಜ್ಯದ ಜನರ ಹೊಟ್ಟೆಗೆ ಏನು ಕೊಟ್ಟಿದ್ದಾರೆ? ‌ಎಷ್ಟು ಉದ್ಯೋಗ ಕೊಟ್ಟಿದ್ದಾರೆ. ಎಷ್ಟು ಅನುದಾನ ನೀಡಿದ್ದಾರೆ? ಎಷ್ಟು ಬಂಡವಾಳ ಹೂಡಿಕೆ ತಂದಿದ್ದಾರೆ ಎಂದು ಹೇಳಲಿ’ ಎಂದರು.

ಹನುಮಾನ್ ಚಾಲೀಸ ಪಠಣಕ್ಕೆ ಕೆಲವು ಸಂಘಟನೆಗಳ ಕರೆ ನೀಡಿರುವ ಬಗ್ಗೆ ಕೇಳಿದಾಗ, ‘ನಾವು ‌ನಿತ್ಯ ಹನುಮ ಚಾಲೀಸ ಪಠಣ ಮಾಡುತ್ತೇವೆ. ಅವರು ಮಾತ್ರ ಹನುಮನ ಭಕ್ತರೇ? ಯಾವ ಸಂಘಟನೆಗಳು ಸಮಾಜದ ಶಾಂತಿಗೆ ಭಂಗ ಮಾಡುತ್ತವೆಯೋ ಅಂಥ ಸಂಘಟನೆಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಣಾಳಿಕೆಯಲ್ಲಿ ಹೇಳಿದ್ದೇವೆ’ ಎಂದರು.

ಬಜರಂಗದಳ ಸೇರಿ ಯಾವುದೇ ಸಂಘಟನೆಗಳಾಗಲಿ ನಿಷೇಧಿಸುವುದು ಪರಿಹಾರವಲ್ಲ. ಈ ಸಂಘಟನೆಯಲ್ಲಿ ಅಮಾಯಕ ಮಕ್ಕಳನ್ನು ಬಳಸಿಕೊಳ್ಳಲಾಗುತ್ತಿದೆ. ಎಲ್ಲಿ ತಪ್ಪು ಆಗಿದೆ ಎಂಬುದನ್ನು ಸರಿಪಡಿಸುವ ಕೆಲಸವಾಗಬೇಕು.
ಎಚ್.ಡಿ.ಕುಮಾರಸ್ವಾಮಿ, ಜೆಡಿಎಸ್‌ ನಾಯಕ‌
ಸಮಾಜದಲ್ಲಿ ಅಶಾಂತಿ, ಕೋಮುವಾದ ಸೃಷ್ಟಿಸುವವರನ್ನು ಮಾತ್ರ ನಿಷೇಧಿಸುತ್ತೇವೆ ಎಂದು ಪ್ರಣಾಳಿಕೆಯಲ್ಲಿ ತಿಳಿಸಿದ್ದೇವೆ, ಎಲ್ಲರನ್ನೂ ನಿಷೇಧಿಸುತ್ತೇವೆಂದು ಹೇಳಿಲ್ಲ
ಸಿದ್ದರಾಮಯ್ಯ, ವಿಧಾನಸಭೆ ವಿರೋಧ ಪಕ್ಷದ ನಾಯಕ
ಕಾಂಗ್ರೆಸ್‌ ನಾಯಕರು ಅನುಭವಸ್ಥರಾಗಿದ್ದು, ಸೂಕ್ತ ರೀತಿಯಲ್ಲಿ ಆಲೋಚಿಸಿಯೇ ಪ್ರಣಾಳಿಕೆ ಸಿದ್ಧಪಡಿಸಿದ್ದಾರೆ. ಬಜರಂಗದಳ ನಿಷೇಧದ ಕುರಿತು ಬಿಜೆಪಿ ಉದ್ದೇಶಪೂರ್ವಕವಾಗಿ ವಿವಾದ ಮಾಡುತ್ತಿದೆ.
ಮಲ್ಲಿಕಾರ್ಜುನ ಖರ್ಗೆ, ಅಧ್ಯಕ್ಷ, ಎಐಸಿಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT