ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೆಂಪಣ್ಣನ ಮೇಲೆ ಸಿದ್ದರಾಮಯ್ಯ ಸರ್ಕಾರದ ಒತ್ತಡ ಇದೆ: ಬಸವರಾಜ ಬೊಮ್ಮಾಯಿ

Published 14 ಫೆಬ್ರುವರಿ 2024, 12:32 IST
Last Updated 14 ಫೆಬ್ರುವರಿ 2024, 12:32 IST
ಅಕ್ಷರ ಗಾತ್ರ

ಹಾವೇರಿ: ‘ಶೇ. 40ರಷ್ಟು ಕಮಿಷನ್ ಆರೋಪದ ತನಿಖೆ ವಿಚಾರದಲ್ಲಿ ಸರ್ಕಾರ ಕಾಲಹರಣ ಮಾಡುತ್ತಿರುವುದನ್ನು ಕೋರ್ಟ್ ಗಮನಿಸಿದ್ದು, ಸರಕಾರದ ಬೊಕ್ಕಸ ಖಾಲಿಯಾಗಿದೆ ಎನ್ನುವುದು ಸ್ಪಷ್ಟವಾಗಿದೆ. ನ್ಯಾಯಾಲಯವು ಸಹ ಇದನ್ನು ಹೇಳಲು ಶುರು ಮಾಡಿದೆ’ ಎಂದು ಶಾಸಕ ಬಸವರಾಜ ಬೊಮ್ಮಾಯಿ ಹೇಳಿದರು.

ಹಾವೇರಿಯಲ್ಲಿ ಬುಧವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 'ಹಿಂದಿನ ಸರ್ಕಾರದ ಅವಧಿಯಲ್ಲಿ ಕೇಳಿ ಬಂದಿದ್ದ ಶೇ. 40 ಕಮಿಷನ್ ಕುರಿತ ತನಿಖೆಯನ್ನು ಅನಗತ್ಯ ವಿಳಂಬ ಮಾಡುತ್ತಿರುವ ಬಗ್ಗೆ ಹೈಕೋರ್ಟ್ ಗಮನಿಸಿ ಆರು ವಾರದಲ್ಲಿ ವರದಿ ಸಲ್ಲಿಸುವಂತೆ ಸರ್ಕಾರಕ್ಕೆ ಸೂಚಿಸಿದೆ’ ಎಂದರು.

‘‘ಸರ್ಕಾರದಲ್ಲಿ ಹಣ ಇಲ್ಲದಿರುವುದಕ್ಕೆ ಈ ರೀತಿಯ ಕಮಿಷನ್ ಮಾಡಿಕೊಂಡು ಕುಳಿತಿದ್ದೀರಿ, ಆರು ವಾರದಲ್ಲಿ ವರದಿ ನೀಡದಿದ್ದರೆ, ಹಣ ಬಿಡುಗಡೆಗೆ ನಾವೇ ನಿರ್ದೇಶನ ನೀಡಬೇಕಾಗುತ್ತದೆ’ ಎಂದು ಕೋರ್ಟ್ ಹೇಳಿದೆ. ಸರಕಾರ ಈಗಲಾದರೂ ನಾಚಿಕೆ ಬಿಟ್ಟು ಎಚ್ಚೆತ್ತುಕೊಳ್ಳಬೇಕು’ ಎಂದು ಹೇಳಿದರು.

‘ಕೆಂಪಣ್ಣನ ಮೇಲೆ ಒತ್ತಡ’

ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರ ಮೇಲೆ ಒತ್ತಡ ಇದ್ದು, ಅವರ ಮೇಲೆ ಸರ್ಕಾರ ಒತ್ತಡ ಹೇರುತ್ತಿದೆ. ಹೀಗಾಗಿ ಅವರು ಸರ್ಕಾರದ ಪರವಾಗಿ ಮಾತನಾಡುತ್ತಿದ್ದಾರೆ. ಆ ರೀತಿ ಮಾತನಾಡುವಂತೆ ಅವರ ಮೇಲೆ ಒತ್ತಡ ಹೇರಲಾಗುತ್ತಿದೆ. ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಸಂಪೂರ್ಣವಾಗಿ ನಿಲ್ಲಿಸಿಬಿಟ್ಟಿದ್ದಾರೆ ಎಂದು ಆರೋಪಿಸಿದರು.

ಜಂಟಿ ಅಧಿವೇಶನದಲ್ಲಿ ರಾಜ್ಯಪಾಲರ ಬಾಯಲ್ಲಿ ಹಸಿ ಸುಳ್ಳನ್ನು ಹೇಳಿಸಿದ್ದಾರೆ. ಹಿಂದಿನ ಸರ್ಕಾರದ ಸಾಧನೆಗಳನ್ನು ತನ್ನ ಸಾಧನೆ ಎಂದು ಸರ್ಕಾರ ಹೇಳಿಕೊಂಡಿದೆ. ಈ ಸರ್ಕಾರ ಯಾವುದೇ ಸಾಧನೆ ಮಾಡಿಲ್ಲ ಎನ್ನುವುದು ಸ್ಪಷ್ಟವಾಗುತ್ತಿದೆ ಎಂದರು.

ಹಾನಗಲ್ ಗ್ಯಾಂಗ್ ರೇಪ್ ಪ್ರಕರಣ ಸೇರಿದಂತೆ ಕಾನೂನು ಸುವ್ಯವಸ್ಥೆ ಬಗ್ಗೆ ಸದನದಲ್ಲಿ ಚರ್ಚೆ ಮಾಡುತ್ತೇವೆ ಎಂದರು.

ಟಿಕೆಟ್ ಹಂಚಿಕೆ: ಇದೇ ವೇಳೆ, ಲೋಕಸಭೆ ಟಿಕೆಟ್ ಹಂಚಿಕೆ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಫೆ. 17, 18ರಂದು ದೆಹಲಿಯಲ್ಲಿ ರಾಷ್ಟ್ರೀಯ ಕೌನ್ಸಿಲ್ ಸಭೆ ನಡೆಯಲಿದೆ. ಆ ಸಭೆಯ ಬಳಿಕ ಟಿಕೆಟ್ ಹಂಚಿಕೆ ಪ್ರಕ್ರಿಯೆ ಪ್ರಾರಂಭವಾಗುತ್ತದೆ. ಜೆಡಿಎಸ್ ಜೊತೆಗೆ ಟಿಕೆಟ್ ಹಂಚಿಕೆ ವಿಚಾರವು ಅಂದು ಚರ್ಚೆ ಆಗಲಿದೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT