ಪ್ರಾಣೇಶ್ ಆಯ್ಕೆ ಪ್ರಶ್ನಿಸಿದ ಅರ್ಜಿ: ತೀರ್ಪು ಬಾಕಿ
ಚಿಕ್ಕಮಗಳೂರು ಕ್ಷೇತ್ರದಿಂದ ವಿಧಾನಪರಿಷತ್ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಸ್ಥಳೀಯ ಸಂಸ್ಥೆಗಳ ನಾಮನಿರ್ದೇಶಿತ ಸದಸ್ಯರ ಮತಗಳನ್ನು ಬಳಸಿಕೊಂಡು ಪ್ರಾಣೇಶ್ ಅವರು ಗೆಲುವು ಸಾಧಿಸಿದ್ದಾರೆ ಎಂದು ಕಾಂಗ್ರೆಸ್‌ನ ಎ.ವಿ.ಗಾಯತ್ರಿ ಶಾಂತೇಗೌಡ ಕೋರ್ಟ್ ಮೆಟ್ಟಿಲೇರಿದ್ದರು. ಮತ ಎಣಿಕೆ 2021ರ ಡಿಸೆಂಬರ್ 14ರಂದು ನಡೆದಿತ್ತು. ಬಿಜೆಪಿಯ ಪ್ರಾಣೇಶ್ 1188 ಮತಗಳನ್ನು ಗಾಯತ್ರಿ ಶಾಂತೇಗೌಡ ಅವರು 1182 ಮತಗಳನ್ನು ಗಳಿಸಿದ್ದರು. ಪ್ರಾಣೇಶ್ ಆರು ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದರು. ‘ನಗರ ಸ್ಥಳೀಯ ಸಂಸ್ಥೆಗಳ ಕ್ಷೇತ್ರಗಳಿಂದ ವಿಧಾನಪರಿಷತ್ತಿಗೆ ನಡೆಯವ ಚುನಾವಣೆಯಲ್ಲಿ ಸ್ಥಳೀಯ ಸಂಸ್ಥೆಗಳ 12 ನಾಮನಿರ್ದೇಶಿತ ಸದಸ್ಯರಿಗೆ ಮತದಾನದ ಹಕ್ಕು ಇರಲಿಲ್ಲ’ ಎಂದು ಹೈಕೋರ್ಟ್ 2022ರಲ್ಲಿ ತೀರ್ಪು ನೀಡಿತ್ತು. ಸುಪ್ರೀಂಕೋರ್ಟ್ ಸಹ 12 ಮತಗಳನ್ನು ಪ್ರತ್ಯೇಕವಾಗಿ ಇರಿಸಿ ಮರು ಎಣಿಕೆ ಮಾಡಿ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿಗೆ ನಿರ್ದೇಶನ ನೀಡಿತ್ತು. ಮರು ಮತ ಎಣಿಕೆಯ ವರದಿಯನ್ನು ಜಿಲ್ಲಾಧಿಕಾರಿ 2025ರ ಮಾರ್ಚ್‌ನಲ್ಲೇ ಸಲ್ಲಿಸಿದ್ದರು. ಸುಪ್ರೀಂಕೋರ್ಟ್ ತೀರ್ಪು ಇನ್ನಷ್ಟೇ ಪ್ರಕಟವಾಗಬೇಕಿದೆ.