ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರಾಜ್ಯಪಾಲ ಗೆಹಲೋತ್ ದಲಿತರಾಗಿದ್ದಕ್ಕೆ ಕಾಂಗ್ರೆಸ್‌ ಗುರಿ: ಬಿಜೆಪಿ

Published : 19 ಆಗಸ್ಟ್ 2024, 16:04 IST
Last Updated : 19 ಆಗಸ್ಟ್ 2024, 16:04 IST
ಫಾಲೋ ಮಾಡಿ
Comments

ಬೆಂಗಳೂರು: 'ರಾಜ್ಯಪಾಲ ಥಾವರಚಂದ್ ಗೆಹಲೋತ್ ದಲಿತ ಸಮುದಾಯಕ್ಕೆ ಸೇರಿದವರು ಎಂಬ ಕಾರಣಕ್ಕೇ ಕಾಂಗ್ರೆಸ್‌ ಪಕ್ಷ ಅವರನ್ನು ಗುರಿ ಮಾಡಿದೆ. ಇದು ಕಾಂಗ್ರೆಸ್‌ ದಲಿತ ವಿರೋಧಿ ನೀತಿಗೆ ಸ್ಪಷ್ಟ ಉದಾಹರಣೆ’ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿ.ಸುನಿಲ್‌ಕುಮಾರ್‌ ಆರೋಪಿಸಿದರು.

ಸೋಮವಾರ ಸಂಜೆ ನಡೆದ ಪಕ್ಷದ ನಾಯಕರ ಸಭೆಯ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಬಾಂಗ್ಲಾ ದೇಶದ ಮಾದರಿಯಲ್ಲಿ ರಾಜಭವನಕ್ಕೆ ನುಗ್ಗಿ ರಾಜ್ಯಪಾಲರನ್ನು ಕೆಳಗಿಳಿಸುತ್ತೇವೆ ಎಂದು ಕಾಂಗ್ರೆಸ್‌ ನಾಯಕರು ಬೆದರಿಕೆ ಒಡ್ಡಿದ್ದಾರೆ. ಇದರ ಅರ್ಥ ಬಾಂಗ್ಲಾದೇಶ ಮತ್ತು ಶ್ರೀಲಂಕಾ ಮಾದರಿಯಲ್ಲಿ ಕರ್ನಾಟಕದಲ್ಲೂ ಗಲಭೆ ಮತ್ತು ಅರಾಜಕತೆ ಸೃಷ್ಟಿಸಲು ಕಾಂಗ್ರೆಸ್‌ ಸಂಚು ರೂಪಿಸಿದೆ. ಮುಖ್ಯಮಂತ್ರಿ ರಾಜೀನಾಮೆಗೆ ಆಗ್ರಹಿಸಿ ಇದೇ 22ರಂದು ಎಲ್ಲ ಜಿಲ್ಲೆಗಳಲ್ಲಿ ಪ್ರತಿಭಟನೆ ನಡೆಸಲಾಗುವುದು’ ಎಂದರು.

‘ಪ್ರತಿಭಟನೆಯ ವೇಳೆ ರಾಜ್ಯಪಾಲರ ಪ್ರತಿಕೃತಿಯನ್ನು ಕಾಂಗ್ರೆಸ್‌ನವರು ಸುಟ್ಟು ಹಾಕಿದ್ದಾರೆ. ಅವಾಚ್ಯ ಪದಗಳಿಂದ ಬೆದರಿಕೆ ಹಾಕಿದ್ದಾರೆ. ಹಂಸರಾಜ್‌ ಭಾರದ್ವಾಜ್‌ ರಾಜ್ಯಪಾಲರಾಗಿದ್ದಾಗ ಅಂದಿನ ಸಿಎಂ ಯಡಿಯೂರಪ್ಪ ವಿರುದ್ಧ ಇದೇ ರೀತಿ ಅನುಮತಿ ನೀಡಿದ್ದರು. ಆಗ ಕಾಂಗ್ರೆಸ್‌ನವರು ರಾಜ್ಯಪಾಲರನ್ನು ಹಾಡಿ ಹೊಗಳಿದ್ದರು. ಭಾರದ್ವಾಜ್‌ಗೊಂದು ನೀತಿ, ದಲಿತ ಗೆಹಲೋತ್ ಅವರಿಗೆ ಮತ್ತೊಂದು ನೀತಿಯೇ’ ಎಂದು ಅವರು ಪ್ರಶ್ನಿಸಿದರು.

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ರಾಜಭವನಕ್ಕೆ ನುಗ್ಗಿ ರಾಜ್ಯಪಾಲರನ್ನು ಕೆಳಗಿಳಿಸುವುದಾಗಿ ಬೆದರಿಕೆ ಒಡ್ಡಿರುವುದನ್ನು ವಿರೋಧಿಸಿ ಪೊಲೀಸ್‌ ಠಾಣೆಗಳಲ್ಲಿ ದೂರು ದಾಖಲಿಸಲಾವುದು. ವಿಧಾನಪರಿಷತ್‌ನ ಕಾಂಗ್ರೆಸ್‌ ಸದಸ್ಯ ಐವನ್ ಡಿಸೋಜ ವಿರುದ್ಧ ಮಂಗಳೂರಿನಲ್ಲಿ ದಾಖಲಿಸಿರುವ ದೂರನ್ನು ಆಧರಿಸಿ, ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.

ಕರ್ನಾಟಕದ ಕಾಂಗ್ರೆಸ್ಸಿಗರಿಗೆ ಪಶ್ಚಿಮಬಂಗಾಳ, ಬಾಂಗ್ಲಾದೇಶ ಮಾದರಿಯಾಗಿರುವುದು ನೋಡಿದರೆ ‘ಕರುನಾಡು’ ಇವರ ಕೈಲಿರುವುದು ಎಷ್ಟು ಅಪಾಯಕಾರಿ ಎಂಬುದನ್ನು ಸೂಚಿಸುತ್ತಿದೆ ಎಂದೂ ಹೇಳಿದರು.

ಸಭೆಯಲ್ಲಿ ವಿರೋಧಪಕ್ಷದ ನಾಯಕರಾದ ಆರ್.ಅಶೋಕ, ಛಲವಾದಿ ನಾರಾಯಣಸ್ವಾಮಿ ಮಾಜಿ ಸಚಿವ ಗೋವಿಂದ ಕಾರಜೋಳ ಮೊದಲಾದ ನಾಯಕರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT