ಶುಕ್ರವಾರ, 22 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾನ್‌ಸ್ಟೆಬಲ್‌ ಹತ್ಯೆ ಪ್ರಕರಣ: ನ್ಯಾಯಾಂಗ ತನಿಖೆಗೆ ಬಿಜೆಪಿ ಪಟ್ಟು

Published 17 ಜುಲೈ 2023, 17:12 IST
Last Updated 17 ಜುಲೈ 2023, 17:12 IST
ಅಕ್ಷರ ಗಾತ್ರ

ಬೆಂಗಳೂರು: ಕಲಬುರಗಿ ಜಿಲ್ಲೆ, ಜೀವರ್ಗಿ ತಾಲ್ಲೂಕಿನ ನಾರಾಯಣಪುರದಲ್ಲಿ ಮರಳು ತುಂಬಿದ ಟ್ರ್ಯಾಕ್ಟರ್‌ ಹರಿಸಿ ಪೊಲೀಸ್‌ ಮುಖ್ಯ ಕಾನ್‌ಸ್ಟೆಬಲ್‌ ಹತ್ಯೆ ಮಾಡಿದ ಪ್ರಕರಣದಲ್ಲಿ ಆರೋಪಿಯಲ್ಲದವರನ್ನು ಸಿಲುಕಿಸುವ ಪ್ರಯತ್ನ ನಡೆದಿದ್ದು, ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು ಎಂದು ಆಗ್ರಹಿಸಿ ಬಿಜೆಪಿ ಸದಸ್ಯರು ವಿಧಾನ ಪರಿಷತ್‌ನಲ್ಲಿ ಸೋಮವಾರ ಧರಣಿ ನಡೆಸಿದರು.

ಪ್ರಕರಣ ಕುರಿತು ಮಾತನಾಡಿದ ಕಾಂಗ್ರೆಸ್‌ನ ತಿಪ್ಪಣ್ಣಪ್ಪ ಕಮಕನೂರ, ಬಿಜೆಪಿಯ ಶಶಿಲ್‌ ಜಿ. ನಮೋಶಿ, ಎನ್‌.ರವಿಕುಮಾರ್, ತಳವಾರ್ ಸಾಬಣ್ಣ, ಪ್ರಕರಣದಲ್ಲಿ ಸಾಕಷ್ಟು ಗೊಂದಲಗಳಿವೆ. ಆರೋಪಿಯಾಗಿರುವ ಸಾಯಬಣ್ಣ ರೇವಣಸಿದ್ದಪ್ಪ ಕರ್ಜಗಿ ಪ್ರಕರಣ ನಡೆದಾಗ ಸ್ಥಳದಲ್ಲೇ ಇರಲಿಲ್ಲ. ಟ್ರ್ಯಾಕ್ಟರ್‌ ಅವರ ಹೆಸರಿಗೆ ಇದ್ದು, ಸಹೋದರ ಸಿದ್ದಪ್ಪ ಅವರಿಗೆ ನೀಡಿದ್ದಾರೆ. ಆದರೆ, ವಿಚಾರಣೆ ನೆಪದಲ್ಲಿ ಸಾಯಬಣ್ಣ ಅವರನ್ನು ವಶಕ್ಕೆ ಪಡೆದ ಪೊಲೀಸರು ಅವರ ಕಾಲಿಗೆ ಗುಂಡು ಹೊಡೆದಿದ್ದಾರೆ.  ಅವರು ನೀಡಿದ ಕಾರಣಗಳ ಬಗ್ಗೆಯೂ ಅನುಮಾನಗಳಿವೆ ಎಂದರು.

ಏಳೆಂಟು ಜನ ಪೊಲೀಸ್‌ ಅಧಿಕಾರಿಗಳು ಸೇರಿ ಅವರನ್ನ ವಶಕ್ಕೆ ಪಡೆದಾಗಲೇ ಮಾರಕಾಸ್ತ್ರಗಳಿಲ್ಲ ಎನ್ನುವುದನ್ನು ಖಚಿತಪಡಿಸಿಕೊಂಡಿರುತ್ತಾರೆ. ಪೊಲೀಸ್‌ ಜೀಪಿನಲ್ಲಿ ಕರೆದುಕೊಂಡು ಹೋಗುವಾಗ ಆತ ಹೇಗೆ ಚಾಕು ಹಾಕಲು ಸಾಧ್ಯ? ಇದೆಲ್ಲ ಪೊಲೀಸರ ಕಟ್ಟು ಕಥೆ. ಮೃತ ಪೊಲೀಸ್‌ ಕುಟುಂಬಕ್ಕೆ ಹಾಗೂ ಸಾಯಬಣ್ಣ ಅವರಿಗೆ ನ್ಯಾಯ ಸಿಗಬೇಕಾದರೆ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ವಹಿಸಬೇಕು ಎಂದು ಒತ್ತಾಯಿಸಿದರು.

ಸದಸ್ಯರ ಪ್ರಶ್ನೆಗಳಿಗೆ ಉತ್ತರ ನೀಡಿದ ಗೃಹ ಸಚಿವ ಜಿ. ಪರಮೇಶ್ವರ, ಪೊಲೀಸರು ಕಾನೂನು ಪ್ರಕಾರವೇ ಕ್ರಮ ಕೈಗೊಂಡಿದ್ದಾರೆ. ಸರ್ಕಾರ ಪ್ರಕರಣದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ. ಮೃತ ಪೊಲೀಸ್ ಸಾವಿಗೆ ನ್ಯಾಯ ಸಿಗಬೇಕಿದೆ. ಪೊಲೀಸ್‌ ಅಧಿಕಾರಿಗಳೇ ತನಿಖೆ ಮಾಡಲಿದ್ದಾರೆ ಎಂದರು.

ಬಿಜೆಪಿ ಸದಸ್ಯರು ಸಭಾಪತಿ ಪೀಠದ ಮುಂದೆ ನಿಂತು ಧರಣಿ ಮುಂದುವರಿಸಿದರು. ಸಭಾಪತಿ ಬಸವರಾಜ ಹೊರಟ್ಟಿ ಕಲಾಪವನ್ನು ಮಂಗಳವಾರಕ್ಕೆ ಮುಂದೂಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT