ಭಾನುವಾರ, 3 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಲಬ್ರೂಯಿ ಇನ್ನು ‘ಕಾನ್‌ಸ್ಟಿಟ್ಯೂಷನ್‌ ಕ್ಲಬ್‌’

ಶಂಕು ಸ್ಥಾಪನೆ ನೇರವೇರಿಸಿದ ಸಿದ್ದರಾಮಯ್ಯ
Published 12 ಫೆಬ್ರುವರಿ 2024, 16:38 IST
Last Updated 12 ಫೆಬ್ರುವರಿ 2024, 16:38 IST
ಅಕ್ಷರ ಗಾತ್ರ

ಬೆಂಗಳೂರು: ‘ರಾಜ್ಯದಲ್ಲೂ ‘ಕಾನ್‌ಸ್ಟಿಟ್ಯೂಷನ್‌ ಕ್ಲಬ್‌’ (ಶಾಸಕರ ಮತ್ತು ಮಾಜಿ ಶಾಸಕರ ಮನರಂಜನಾ ಕ್ಲಬ್‌) ನಿರ್ಮಿಸುವಂತೆ ಬಹಳ ದಿನಗಳಿಂದ ಸಚಿವರು, ಶಾಸಕರು, ಮಾಜಿ ಶಾಸಕರಿಂದ ಬೇಡಿಕೆ ಇತ್ತು. ಹೀಗಾಗಿ, ಸರ್ಕಾರದ ವಶದಲ್ಲಿದ್ದ ಬಾಲಬ್ರೂಯಿ ಕಟ್ಟಡವನ್ನು ವಿಧಾನ ಮಂಡಲ ಸಂಸ್ಥೆಗೆ ವರ್ಗಾಯಿಸಿ ಕ್ಲಬ್‌ ಮಾಡಲಾಗುತ್ತಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಕರ್ನಾಟಕ ವಿಧಾನ ಮಂಡಲ ಸಂಸ್ಥೆಯ ಉದ್ಘಾಟನೆ ಹಾಗೂ ಬಾಲಬ್ರೂಯಿ ಕಟ್ಟಡವನ್ನು ಪಾರಂಪರಿಕ ವಿನ್ಯಾಸಕ್ಕೆ ಒಳಪಟ್ಟು ನವೀಕರಿಸುವ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಸೋಮವಾರ ಅವರು ಮಾತನಾಡಿದರು.

‘ಸಂಜೆ ವೇಳೆಯಲ್ಲಿ ಸಮಯ ಕಳೆಯಲು, ಚರ್ಚೆ ನಡೆಸಲು, ಪತ್ರಿಕೆ ಓದಲು ಶಾಸಕರಿಗೆ ಪ್ರತ್ಯೇಕ ಜಾಗ ಇರಲಿಲ್ಲ. ಬಾಲಬ್ರೂಯಿ ಇದಕ್ಕೆ ಸೂಕ್ತ ಜಾಗ ಅನಿಸಿದೆ. ಮುಖ್ಯಮಂತ್ರಿ ಆಗಿರುವ ಕಾರಣಕ್ಕೆ ನನ್ನನ್ನು ವಿಧಾನ ಮಂಡಲ ಸಂಸ್ಥೆಗೆ ಗೌರವ ಅಧ್ಯಕ್ಷರನ್ನಾಗಿ ಮಾಡಿದ್ದಾರೆ’ ಎಂದರು.

ವಸ್ತ್ರಸಂಹಿತೆ ಸರಿಯಲ್ಲ: ‘ನಾನು, ಉಗ್ರಪ್ಪ, ಬಿ.ಆರ್. ಪಾಟೀಲ ಹೀಗೆ ಕೆಲವರು ಕ್ಲಬ್ ಒಂದಕ್ಕೆ ಒಮ್ಮೆ ಹೋಗಿದ್ದೆವು. ನಾನು ಪಂಚೆ ಧರಿಸಿದ್ದೆ. ಅಲ್ಲಿ ವಸ್ತ್ರ ಸಂಹಿತೆ ಇದ್ದುದರಿಂದ‌ ಒಳಗೆ ಬಿಡಲಿಲ್ಲ. ಕೇರಳ,‌ ತಮಿಳುನಾಡಿನಲ್ಲಿ ಪಂಚೆ ಧರಿಸುವುದು ಸಾಮಾನ್ಯ. ನಮ್ಮಲ್ಲಿ‌ ಕಡಿಮೆ. ಬ್ರಿಟಿಷ್‌ನವರು ವಸ್ತ್ರಸಂಹಿತೆ ಅನುಸರಿಸುತ್ತಿದ್ದರು. ಅದು ಸರಿಯಲ್ಲ. ಈ ಕ್ಲಬ್‌ನ್ನು ಪಂಚೆ ಧರಿಸಿಕೊಂಡೇ ಉದ್ಘಾಟಿಸಿದ್ದೇನೆ’ ಎಂದರು.‌

‘ರಾತ್ರಿ ವೇಳೆ ಊಟ ಮಾಡಿದರೆ ಕ್ಲಬ್ ಚೆನ್ನಾಗಿ ನಡೆಯುತ್ತದೆ. ಹೀಗೆ ಬೇರೆಲ್ಲೊ ಹೋಗಿ ಊಟ ಮಾಡಬೇಡಿ. ಊಟ ರುಚಿಕರವಾಗಿರಲಿ’ ಎಂದು ವಿಧಾನ ಸಭಾಧ್ಯಕ್ಷ ಯು.ಟಿ. ಖಾದರ್‌ ಕಡೆಗೆ ನೋಡಿ ಹೇಳಿದ ಮುಖ್ಯಮಂತ್ರಿ, ‘ಊಟ ಚೆನ್ನಾಗಿ ಮಾಡಿಸಿ’ ಎಂದೂ ಸಲಹೆ ನೀಡಿದರು. 

ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ, ಇಂಧನ ಸಚಿವ ಕೆ.ಜೆ. ಜಾರ್ಜ್, ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಗೋವಿಂದರಾಜ್, ಶಾಸಕ ಅರವಿಂದ ಬೆಲ್ಲದ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT