ಗುರುವಾರ, 30 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃತಿಚೌರ್ಯ: 60 ಪ್ರಬಂಧ ತಿರಸ್ಕರಿಸಿದ ವಿಟಿಯು, ಅಭ್ಯರ್ಥಿಗಳಿಗೆ ತಲಾ 5 ಸಾವಿರ ದಂಡ

Last Updated 3 ಸೆಪ್ಟೆಂಬರ್ 2022, 19:45 IST
ಅಕ್ಷರ ಗಾತ್ರ

ಬೆಂಗಳೂರು: ಈ ವರ್ಷ ಸಲ್ಲಿಕೆಯಾದ 577 ಸಂಶೋಧನಾ ಪ್ರಬಂಧಗಳ ಪೈಕಿ 60 (ಶೇ 10.39) ಅನ್ನು ಕೃತಿಚೌರ್ಯದ ಕಾರಣಕ್ಕೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) ತಿರಸ್ಕರಿಸಿದೆ.

2020ರಿಂದ ಇಲ್ಲಿಯವರೆಗೆ ಒಟ್ಟು 134 ಸಂಶೋಧನಾ ಪ್ರಬಂಧಗಳನ್ನು ಕೃತಿಚೌರ್ಯದ ಕಾರಣಕ್ಕೆ ವಿಟಿಯು ತಿರಸ್ಕರಿಸಿದೆ. ತಂತ್ರಾಂಶ ಅಭಿವೃದ್ಧಿಪಡಿಸಿದ್ದರಿಂದ ಕೃತಿಚೌರ್ಯಗಳನ್ನು ಪತ್ತೆ ಮಾಡಲು ಸಾಧ್ಯವಾಗಿದ್ದು, ಈ ಕೃತ್ಯ ನಡೆಸಿದ ಅಭ್ಯರ್ಥಿಗಳು ವಿಶ್ವವಿದ್ಯಾಲಯಕ್ಕೆ ₹ 5 ಸಾವಿರ ದಂಡ ಕಟ್ಟಬೇಕು ಎಂದೂ ಸೂಚನೆ ನೀಡಿದೆ.

ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (ಎಐಸಿಟಿಇ) ನಿರ್ದೇಶನದಂತೆಸಂಶೋಧನಾ ಪ್ರಬಂಧಗಳ ಗುಣಮಟ್ಟ ಹೆಚ್ಚಿಸುವ ಉದ್ದೇಶದಿಂದ ಕೃತಿಚೌರ್ಯ ಪತ್ತೆ ಮಾಡಲು2014–15ನೇ ಸಾಲಿನಲ್ಲಿ ತಂತ್ರಾಂಶವನ್ನು ವಿಟಿಯು ಅಭಿವೃದ್ಧಿಪಡಿಸಿತ್ತು.

‘ಕೃತಿಚೌರ್ಯವನ್ನು ಓದಿನ ಮೂಲಕ ಪತ್ತೆ ಮಾಡುವುದು ಕಷ್ಟ. ತಂತ್ರಾಂಶ ಬಳಸಿದ್ದರಿಂದ ಮೊದಲ ಹಂತದಲ್ಲಿಯೇ ಸಂಶೋಧನಾ ಪ್ರಬಂಧಗಳನ್ನು ಶೋಧಿಸಿ ತೆಗೆಯಲು ಸಾಧ್ಯವಾಗಿದೆ’ ಎಂದು ವಿಟಿಯು ಕುಲಪತಿ ಕರಿಸಿದ್ಧಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

‘ಈಗಾಗಲೇ ಪ್ರಕಟವಾದ ಸಂಶೋಧನಾ ಪ್ರಬಂಧಗಳಿಂದ ವಿಷಯಗಳನ್ನು ಯಥಾವತ್ತಾಗಿ ತೆಗೆದುಕೊಂಡ ಕಾರಣಕ್ಕೆ ಬಹುತೇಕ ಸಂಶೋಧನಾ ಪ್ರಬಂಧಗಳು ತಿರಸ್ಕೃತಗೊಂಡಿವೆ. ಕೃತಿಚೌರ್ಯ ಶೇ 25ಕ್ಕಿಂತ ಹೆಚ್ಚು ಇದ್ದರೆ ಅಂಥವುಗಳನ್ನು ತಿರಸ್ಕರಿಸಲಾಗುತ್ತದೆ’ ಎಂದು ವಿಟಿಯು ಅಧಿಕಾರಿಯೊಬ್ಬರು ತಿಳಿಸಿದರು.

2020ರಲ್ಲಿ ಸಲ್ಲಿಕೆಯಾಗಿದ್ದ 560 ಸಂಶೋಧನಾ ಪ್ರಬಂಧಗಳ ಪೈಕಿ 43 (ಶೇ 7.67), 2021ರಲ್ಲಿ ಸಲ್ಲಿಕೆಯಾಗಿದ್ದ 831ರ ಪೈಕಿ 31 (ಶೇ4.45) ಅನ್ನು ಕೃತಿಚೌರ್ಯದ ಕಾರಣಕ್ಕೆ ವಿಟಿಯು ತಿರಸ್ಕರಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT