ಸೋಮವಾರ, 27 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪಹರಣ ಪ್ರಕರಣ: ಸಂಜೆ 5ಕ್ಕೆ ರೇವಣ್ಣ ಜಾಮೀನು ಅರ್ಜಿ ಮೇಲಿನ ಆದೇಶ ಪ್ರಕಟ

Published 13 ಮೇ 2024, 11:08 IST
Last Updated 13 ಮೇ 2024, 11:08 IST
ಅಕ್ಷರ ಗಾತ್ರ

ಬೆಂಗಳೂರು: ಅಪಹರಣ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಶಾಸಕ ಎಚ್.ಡಿ, ರೇವಣ್ಣ ಸಲ್ಲಿಸಿರುವ ಜಾಮೀನು ಅರ್ಜಿಯ ಮೇಲಿನ ವಾದ–ಪ್ರತಿ ವಾದ ಅಂತ್ಯಗೊಂಡಿದೆ. ಅರ್ಜಿ ಮೇಲಿನ ಆದೇಶವನ್ನು ಸಂಜೆ 5 ಗಂಟೆಗೆ ಹೊರಡಿಸುವುದಾಗಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ಪ್ರಕಟಿಸಿದ್ದಾರೆ.

ಹಿನ್ನೆಲೆ

ನಿಯಮಿತ (ರೆಗ್ಯುಲರ್) ಜಾಮೀನು ಕೋರಿ ಶಾಸಕ ಎಚ್‌.ಡಿ.ರೇವಣ್ಣ ಸಲ್ಲಿಸಿರುವ ಅರ್ಜಿಯನ್ನು, ‘ಶಾಸಕರು–ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆ’ಯ ವಿಶೇಷ ನ್ಯಾಯಾಲಯದ (ಸಿಸಿಎಚ್‌–82) ನ್ಯಾಯಾಧೀಶ ಸಂತೋಷ ಗಜಾನನ ಭಟ್‌ ಗುರುವಾರ ವಿಚಾರಣೆ ನಡೆಸುತ್ತಿದ್ದಾರೆ.

ಮೇ 9ರಂದು ನಡೆದ ವಿಚಾರಣೆ ವೇಳೆ, ವಿಚಾರಣೆ ವೇಳೆ ಪ್ರಾಸಿಕ್ಯೂಷನ್‌ ಪರ ವಾದ ಮಂಡಿಸಿದ ಜಯ್ನಾ ಕೊಠಾರಿ, ‘ಆರೋಪಿ ರೇವಣ್ಣ ನೀಡಿದ್ದ ಸೂಚನೆಯ ಅನುಸಾರವೇ ಮಹಿಳೆಯನ್ನು ಒತ್ತಾಯಪೂರ್ವಕವಾಗಿ ಒತ್ತೆಯಾಳಾಗಿ ಇರಿಸಿಕೊಳ್ಳಲಾಗಿತ್ತು. ಸಾಕ್ಷಿಗಳ ಹೇಳಿಕೆಯಲ್ಲಿಯೂ ರೇವಣ್ಣನ ಹೆಸರು ಉಲ್ಲೇಖವಾಗಿದೆ. ಇದು ಸ್ಪಷ್ಟವಾಗಿ ಅಪಹರಣದ ಪ್ರಕರಣವಾಗಿದ್ದು, ಭಾರತೀಯ ದಂಡ ಸಂಹಿತೆ–1860ರ ಕಲಂ 364ಎ ಅನ್ವಯ ಆಗುತ್ತದೆ’ಎಂದಿದ್ದರು.

‘ಅಂತೆಯೇ, ರೇವಣ್ಣನವರ ಪುತ್ರ ಪ್ರಜ್ವಲ್ ಹಲವು ಪ್ರಕರಣಗಳಲ್ಲಿ ಆರೋಪಿ ಆಗಿದ್ದಾನೆ. ಈಗಾಗಲೇ ಆತ ವಿದೇಶದಲ್ಲಿ ತಲೆಮರೆಸಿಕೊಂಡಿದ್ದು, ಈ ಹಿನ್ನೆಲೆಯಲ್ಲಿ 196 ದೇಶಗಳಿಗೆ ಬ್ಲೂ ಕಾರ್ನರ್ ನೋಟಿಸ್ ನೀಡಲಾಗಿದೆ. ಪ್ರಕರಣದಲ್ಲಿ ಇನ್ನೂ ಸಾಕಷ್ಟು ಸಂತ್ರಸ್ತ ಮಹಿಳೆಯರಿದ್ದು, ರೇವಣ್ಣಗೆ ಜಾಮೀನು ನೀಡಿದರೆ ಇವರ ಮೇಲೆ‌ ಪ್ರಭಾವ ಬೀರುವ ಸಾಧ್ಯತೆಯೂ ಇದೆ. ಇದರಿಂದ ಅವರೆಲ್ಲಾ ನಿರ್ಭಯವಾಗಿ ಸಾಕ್ಷ್ಯ ನುಡಿಯಲು ಸಾಧ್ಯವಿಲ್ಲ. ಹಾಗಾಗಿ, ಈ ಪ್ರಕರಣದಿಂದ ಲೈಂಗಿಕ ದೌರ್ಜನ್ಯ ಎಸಗುವವರಿಗೆ ಒಂದು ಸ್ಪಷ್ಟ ಸಂದೇಶ ಹೋಗುವಂತಾಗಬೇಕು’ ‍ಪ್ರತಿಪಾದಿಸಿದ್ದರು.

ಇದಕ್ಕೆ ಪ್ರತಿಯಾಗಿ ರೇವಣ್ಣ ಪರ ವಾದ ಮಂಡಿಸಿದ ಹಿರಿಯ ವಕೀಲ ಸಿ.ವಿ.ನಾಗೇಶ್‌, ‘ರೇವಣ್ಣ ವಿರುದ್ಧ ದಾಖಲಿಸಿರುವ ಪ್ರಕರಣ ಸಂಪೂರ್ಣ ರಾಜಕೀಯ ದುರುದ್ದೇಶದಿಂದ ಕೂಡಿದೆ. ಅವರ ವಿರುದ್ಧ ಈತನಕ ಒಂದೇ ಒಂದು ಸಾಕ್ಷಿಯೂ ದೊರೆತಿಲ್ಲ. ಚುನಾವಣೆ ವೇಳೆ ಎಫ್ಐಆರ್ ದಾಖಲಿಸಲಾಗಿದೆ. ಇದು ಕೇವಲ ರಾಜಕೀಯ ದುರುದ್ದೇಶದಿಂದ ಕೂಡಿದ ಕೇಸು. ಎಫ್ಐಆರ್ ಕೂಡಾ ಸರಿಯಾದ ಕ್ರಮದಲ್ಲಿ ಇಲ್ಲ. ಅಷ್ಟಕ್ಕೂ ಎಸ್ಐಟಿ ತನಿಖೆಯಲ್ಲಿ ಯಾವ ಪ್ರಗತಿ ಸಾಧಿಸಲಾಗಿದೆ’ ಎಂದು ಪ್ರಶ್ನಿಸಿದ್ದರು.

‘ಈ ಮೊದಲು ರೇವಣ್ಣ ಕೋರಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಅಪಹರಣಕ್ಕೆ ಒಳಗಾಗಿದ್ದಾಳೆ ಎನ್ನಲಾದ ಮಹಿಳೆಯ ಸುರಕ್ಷತೆ ಬಗ್ಗೆ ಪ್ರಸ್ತಾಪಿಸಿ ನಿರಾಕರಿಸಲಾಗಿತ್ತು. ಆದರೆ, ಸಂತ್ರಸ್ತ ಮಹಿಳೆ‌ ಅಂದೇ ಪತ್ತೆಯಾಗಿದ್ದಾರೆ. ಈ ಪ್ರಕರಣದಲ್ಲಿ ಮಹಿಳೆಯನ್ನು ಸುಳ್ಳು ಹೇಳಿ ಕರೆದೊಯ್ದಿದ್ದಾರೆ ಎನ್ನಲಾಗದು. ಅಪಹರಣ ಎಂದರೆ, ಬಲವಂತದಿಂದ ಮೋಸ‌ ಮಾಡಿ ಕರೆದೊಯ್ಯುವುದು’ ಎಂದು ವಿವರಿಸಿದ್ದರು.

‘ಇನ್ನಷ್ಟು ವಾದ ಮಂಡಿಸಬೇಕಿದ್ದು ಸಮಯ ನೀಡಬೇಕು’ ಎಂಬ ಪ್ರಾಸಿಕ್ಯೂಷನ್‌ ಕೋರಿಕೆಯನ್ನು ಮನ್ನಿಸಿದ ನ್ಯಾಯಾಧೀಶರು ವಿಚಾರಣೆಯನ್ನು ಇಂದಿಗೆ ಮುಂದೂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT