ಬುಧವಾರ, 18 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಾವು-ಬದುಕಿನ ಸಂದರ್ಭದಲ್ಲಿ ಬಿಜೆಪಿಯವರು ಲೂಟಿ ಹೊಡೆದಿದ್ದಾರೆ: ಎಂ.ಬಿ.ಪಾಟೀಲ

Published : 2 ಸೆಪ್ಟೆಂಬರ್ 2024, 7:02 IST
Last Updated : 2 ಸೆಪ್ಟೆಂಬರ್ 2024, 7:02 IST
ಫಾಲೋ ಮಾಡಿ
Comments

ಬೆಂಗಳೂರು: ‘ಬಿಜೆಪಿ ಅವಧಿಯಲ್ಲಿ ಕೋವಿಡ್‌ ನಿರ್ವಹಣೆ ಹೆಸರಿನಲ್ಲಿ ಬಹಳ ದೊಡ್ಡ ಹಗರಣ ನಡೆದಿದೆ. ಸಾವು - ಬದುಕಿನ ಸಂದರ್ಭದಲ್ಲಿ ಬಿಜೆಪಿಯವರು ಲೂಟಿ ಹೊಡೆದಿದ್ದಾರೆ. ಆ ಸಮಯದಲ್ಲಿ ಆರೋಗ್ಯ ಸಚಿವ ಆಗಿದ್ದವರು ಇದರ ಹೊಣೆ ಹೊರಬೇಕಾಗುತ್ತದೆ’ ಎಂದು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಹೇಳಿದರು.

ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಕೋವಿಡ್ ಸಂದರ್ಭದಲ್ಲಿ ಮಾನವೀಯ ದೃಷ್ಟಿಯಿಂದ ಕೆಲಸ ಮಾಡಬೇಕಿತ್ತು. ಆದರೆ, ಇವರು (ಬಿಜೆಪಿ) ಸಾವಿರಾರು ಕೋಟಿ ಲೂಟಿ ಹೊಡೆದಿದ್ದಾರೆ’ ಎಂದು ಆರೋಪಿಸಿದರು.

‘ಕೋವಿಡ್‌ ಸಂದರ್ಭದಲ್ಲಿ ನಮ್ಮ ಖಾಸಗಿ ವೈದ್ಯಕೀಯ ಕಾಲೇಜಿನಲ್ಲಿ ಮಾದರಿ ಕೆಲಸ ಮಾಡಿದ್ದೇವೆ. ಅಂತಹ ಸಂದರ್ಭದಲ್ಲಿ ಅದು ನಮ್ಮ ಜವಾಬ್ದಾರಿ. ನಮ್ಮ ವೈದ್ಯಕೀಯ ಕಾಲೇಜಿನಲ್ಲಿ ಕಡಿಮೆ ದರದಲ್ಲಿ ಗುಣಮಟ್ಟದ ಚಿಕಿತ್ಸೆ ಕೊಟ್ಟಿದ್ದೇವೆ’ ಎಂದೂ ಹೇಳಿದರು. 

‘ಬಿಜೆಪಿ ಅವಧಿಯಲ್ಲಿ ಕಳಪೆ ಗುಣಮಟ್ಟದ ವೈದ್ಯಕೀಯ ಉಪಕರಣಗಳ ಬಳಕೆ ಮಾಡಲಾಗಿದೆ. ಇದು ಬಹಳ ದೊಡ್ಡ ಹಗರಣ. ಕೆಲಸ ಮಾಡಬೇಕು ನಿಜ, ಹಾಗೆಂದು ಲೂಟಿ ಹೊಡೆಯಬೇಕು ಎಂದೇನೂ ಇಲ್ಲ’ ಎಂದರು.

‘ಭೋವಿ ನಿಗಮ, ಅಂಬೇಡ್ಕರ್ ನಿಗಮ, ಟ್ರಕ್ ಟರ್ಮಿನಲ್ ಹೀಗೆ ಹಲವು ಕಡೆ ಹಗರಣಗಳು ನಡೆದಿವೆ. ಎಲ್ಲ ಹಗರಣಗಳನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುತ್ತೇವೆ. ಬಿಟ್ ಕಾಯಿನ್ ಒಂದೇ ಅಲ್ಲ, ಎಲ್ಲ ಹಗರಣಗಳ ತನಿಖೆ ನಡೆಯುತ್ತಿದೆ. ಪಿಎಸ್ಐ ನೇಮಕಾತಿ ಸೇರಿದಂತೆ ಎಲ್ಲ ಹಗರಣಗಳ ವರದಿ ತರಿಸಿಕೊಳ್ತೇವೆ’ ಎಂದರು. 

ರಾಜ್ಯಪಾಲರು ಕೇಂದ್ರ ಸರ್ಕಾರದ ಕೈಗೊಂಬೆ: 

‘ಮುಡಾ ವಿಚಾರದಲ್ಲಿ ರಾಜ್ಯಪಾಲರ ನಡೆ ಏನು ಎನ್ನುವುದು ಇಡೀ ರಾಜ್ಯಕ್ಕೆ ಗೊತ್ತಾಗಿದೆ. ‘ಶಶಿಕಲಾ ಜೊಲ್ಲೆಯವರ ಪ್ರಕರಣದ ಕಡತವನ್ನು ವಿಲೇವಾರಿ ಮಾಡಿದ್ದೇನೆ. ಉಳಿದ ಕಡತಗಳನ್ನು ಪರಿಶೀಲನೆಗೆ, ಸ್ಪಷ್ಟನೆಗೆ ಕಳಿಸಿದ್ದೇನೆ’ ಎಂದು ರಾಜ್ಯಪಾಲರು ಹೇಳಿದ್ದಾರೆ. ರಾಜ್ಯಪಾಲರು ಸ್ವಯಂ ಆಗಿ ಕೆಲಸ ಮಾಡುತ್ತಿಲ್ಲ. ಅವರು ಕೇಂದ್ರ ಸರ್ಕಾರದ ಕೈಗೊಂಬೆಯಾಗಿದ್ದಾರೆ. ರಾಜಭವನ ಬಿಜೆಪಿ ಕಚೇರಿ ಆಗಿದೆ’ ಎಂದು ಪಾಟೀಲ ಆರೋಪಿಸಿದರು.

ಹಿನ್ನಡೆ ಪ್ರಶ್ನೆಯೇ ಇಲ್ಲ:

‘ಹೈಕೋರ್ಟ್‌ನಲ್ಲಿ ಮುಖ್ಯಮಂತ್ರಿಗೆ ಹಿನ್ನಡೆಯಾಗುವ ಪ್ರಶ್ನೆಯೇ ಇಲ್ಲ. ಮುಖ್ಯಮಂತ್ರಿ ಈಗ ಶಕ್ತಿಶಾಲಿಯಾಗಿದ್ದಾರೆ. ಇನ್ನಷ್ಟು ಶಕ್ತಿಶಾಲಿ ಆಗುತ್ತಾರೆ’ ಎಂದೂ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT