ಬೆಳಗಾವಿ: ‘ಗೃಹಲಕ್ಷ್ಮಿ ಯೋಜನೆ ಜಾರಿಯಾಗಿ ಒಂದು ವರ್ಷವಾಗಿದೆ. ಇದು ತಮ್ಮ ಜೀವನದಲ್ಲಿ ಏನೆಲ್ಲ ಬದಲಾವಣೆ ತಂದಿದೆ ಎಂಬುದನ್ನು ಯಜಮಾನಿಯರು ಸಾಮಾಜಿಕ ಜಾಲತಾಣಗಳಲ್ಲಿ ರೀಲ್ಸ್‌ಗಳ ಮೂಲಕ ಹಂಚಿಕೊಳ್ಳಬೇಕು’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಭಾನುವಾರ ಕೋರಿದ್ದಾರೆ.
‘ಸೆ.1ರಿಂದ 30 ರವರೆಗೆ ಯುಟ್ಯೂಬ್, ಫೇಸ್‌ಬುಕ್, ಇನ್‌ಸ್ಟಾಗ್ರಾಂಗಳಲ್ಲಿ ಯಜಮಾನಿಯರು ರೀಲ್ಸ್‌ಗಳನ್ನು ಹಂಚಿಕೊಳ್ಳಬೇಕು. ಇದರಲ್ಲಿ ಹೆಚ್ಚು ವೀಕ್ಷಣೆಯಾದ ರೀಲ್ಸ್‌ಗೆ ನಾನು ವೈಯಕ್ತಿಕವಾಗಿ ಬಹುಮಾನ ನೀಡುತ್ತೇನೆ’ ಎಂದು ಘೋಷಿಸಿದ್ದಾರೆ.
‘ಮೊದಲ 50 ಯಜಮಾನಿಯರ ರೀಲ್ಸ್ ಹಾದಿಯನ್ನು ಎದುರು ನೋಡುತ್ತಿದ್ದೇನೆ. ಹಾಗಾಗಿ ಪ್ರತಿ ಯಜಮಾನಿಯರು ಗೃಹಲಕ್ಷ್ಮಿ ಯೋಜನೆಯಿಂದ ತಮ್ಮ ಬದುಕಿನಲ್ಲಿ ಆಗಿರುವ ಬದಲಾವಣೆಯನ್ನು ರಾಜ್ಯದ ಜನರ ಮುಂದೆ ಹಂಚಿಕೊಳ್ಳಿ’ ಎಂದು ಪ್ರಕಟಣೆ ಮೂಲಕ ಮನವಿ ಮಾಡಿದ್ದಾರೆ.