ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಸಕ್ತ ವರ್ಷ: ಬರಗೂರು ರಾಮಚಂದ್ರಪ್ಪ ಸಮಿತಿ ರಚಿಸಿದ್ದ ಹಳೇ ಪಠ್ಯಗಳ ಮುಂದುವರಿಕೆ

Published 17 ಜೂನ್ 2023, 11:22 IST
Last Updated 17 ಜೂನ್ 2023, 11:22 IST
ಅಕ್ಷರ ಗಾತ್ರ

ಬೆಂಗಳೂರು: ಬಿಜೆಪಿ ಸರ್ಕಾರದ ಅವಧಿಯಲ್ಲಿ ರೋಹಿತ್ ಚಕ್ರತೀರ್ಥ ನೇತೃತ್ವದ ಸಮಿತಿ ಪರಿಷ್ಕರಣೆ ಮಾಡಿದ್ದ ಎಲ್ಲ ಪಾಠಗಳನ್ನೂ ಕೈಬಿಟ್ಟು, ಸಾಹಿತಿ ಬರಗೂರು ರಾಮಚಂದ್ರಪ್ಪ ಅಧ್ಯಕ್ಷತೆಯ ಸಮಿತಿ ಹಿಂದೆ ರೂಪಿಸಿದ್ದ ಹಳೆಯ ಪಠ್ಯ ಪುಸ್ತಕಗಳನ್ನೇ ಈ ಶೈಕ್ಷಣಿಕ ವರ್ಷದಲ್ಲೂ ಬೋಧಿಸಲಾಗುತ್ತದೆ.

ವಿವಾದಿತ ಪಠ್ಯಗಳನ್ನು ಹಿಂಪಡೆಯಲು ಗುರುವಾರ ನಡೆದ ಸಚಿವ ಸಂಪುಟ ಸಭೆ ಸಮ್ಮತಿ ಸೂಚಿಸಿದ ಒಂದೇ ದಿನದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ತಿದ್ದುಪಡಿ ರೂಪುರೇಷೆ ಸಿದ್ಧಪಡಿಸಿದ್ದು, ಮೂರ್‍ನಾಲ್ಕು ದಿನಗಳಲ್ಲಿ ಆದೇಶ ಹೊರಬೀಳಲಿದೆ.

ಕಾಂಗ್ರೆಸ್‌ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಯಂತೆ ಪಠ್ಯಪುಸ್ತಕಗಳ ಕುರಿತು ಶಿಕ್ಷಣ ತಜ್ಞರು, ಸಾಹಿತಿಗಳ ಜತೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಸುದೀರ್ಘ ಚರ್ಚೆ ನಡೆಸಿದ್ದರು.

‘ಸಾಮಾಜಿಕ ನ್ಯಾಯ, ಸಂವಿಧಾನಕ್ಕೆ ವಿರುದ್ಧವಾಗಿ ಸನಾತನ ಧರ್ಮ, ಭಾರತೀಯತೆ ಹೆಸರಲ್ಲಿ ಸಂವಿಧಾನದ ಆಶಯಗಳಿಗೆ ವಿರುದ್ಧವಾದ ಆರ್‌ಎಸ್‌ಎಸ್‌ ಸಿದ್ಧಾಂತಗಳಿಂದ ಪ್ರೇರಿತವಾದ ಪಾಠಗಳನ್ನು ಸೇರಿಸಲಾಗಿದೆ. ಇಂತಹ ಪಾಠಗಳಿಂದ ಮಕ್ಕಳ ಮನಸ್ಸಿನ ಮೇಲೆ ಜಾತಿ, ಧರ್ಮದ ಒಲವು ಬೆಳೆಯುವ ಸಾಧ್ಯತೆ ಇದೆ. ಹಾಗಾಗಿ, ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಾಡಿದ್ದ ಎಲ್ಲ ಬದಲಾವಣೆಗಳನ್ನೂ ತೆಗೆದು ಹಾಕಬೇಕು‘ ಎಂದು ತಜ್ಞರು ಸಲಹೆ ನೀಡಿದ್ದರು. 

ಬರಗೂರು ರಾಮಚಂದ್ರಪ್ಪ, ರಾಜಪ್ಪ ದಳವಾಯಿ, ರಘುನಂದನ್‌ ಸೇರಿದಂತೆ ಕೆಲ ಸಾಹಿತಿಗಳು ಹಾಗೂ ಎಸ್‌.ಜಿ.ಸಿದ್ದರಾಮಯ್ಯ ನೇತೃತ್ವದ ‘ಸಮಾನ ಮನಸ್ಕರ ಒಕ್ಕೂಟ‘ ಹಿಂದೆ ಬರಗೂರು ನೇತೃತ್ವದ ಸಮಿತಿ ರಚಿಸಿದ್ದ ಪಠ್ಯಗಳನ್ನೇ ಇದೇ ಶೈಕ್ಷಣಿಕ ವರ್ಷದಲ್ಲೂ ಮುಂದುವರಿಸಲು ಸಲಹೆ ನೀಡಿತ್ತು. ಅವರ ಮಾತುಗಳಿಗೆ ಮನ್ನಣೆ ನೀಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಂಪುಟ ಸಭೆಯಲ್ಲಿ ಒಪ್ಪಿಗೆ ಪಡೆದು ತಕ್ಷಣ ಅಗತ್ಯ ಕ್ರಮ ಕೈಗೊಳ್ಳುವಂತೆ ಸಚಿವ ಮಧು ಬಂಗಾರಪ್ಪ ಅವರಿಗೆ ಸೂಚಿಸಿದ್ದರು.

ಪ್ರಸ್ತುತ ಶೈಕ್ಷಣಿಕ ವರ್ಷಕ್ಕೆ ಬರಗೂರು ರಾಮಚಂದ್ರಪ್ಪ ಸಮಿತಿಯ ಪಠ್ಯಗಳನ್ನೇ ಮುಂದುವರಿಸಿದರೂ, 2024–25ನೇ ಶೈಕ್ಷಣಿಕ ವರ್ಷದಿಂದ ಪಠ್ಯಗಳಲ್ಲಿ ಮತ್ತಷ್ಟು ಬದಲಾವಣೆ ತರಲು ನಿರ್ಧರಿಸಿರುವ ಸರ್ಕಾರ, ಅದಕ್ಕಾಗಿ ತಿಂಗಳ ಒಳಗೆ ಅಧ್ಯಕ್ಷರು, 9 ಸದಸ್ಯರನ್ನು ಒಳಗೊಂಡ ಹೊಸ ಸಮಿತಿ ರಚಿಸಲು ನಿರ್ಧರಿಸಿದೆ. ಸಮಿತಿಗೆ 6 ತಿಂಗಳು ಕಾಲಾವಕಾಶ ನೀಡಲಾಗುತ್ತಿದೆ. ಯಾವುದೇ ಸರ್ಕಾರ ಅಧಿಕಾರಕ್ಕೆ ಬಂದರೂ, ಶೈಕ್ಷಣಿಕ ವಿಷಯಗಳಲ್ಲಿ ರಾಜಕೀಯ ಹಿತಾಸಕ್ತಿ ನುಸುಳದಂತೆ, ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ಪಠ್ಯಗಳನ್ನು ರೂಪಿಸದಂತೆ ಪಠ್ಯ ಪರಿಷ್ಕರಣೆಗಾಗಿ ತಜ್ಞರನ್ನು ಒಳಗೊಂಡ ಶಾಶ್ವತ ಆಯೋಗ ರಚನೆಯ ಚಿಂತನೆಯೂ ನಡೆದಿದೆ ಎಂದು ಮೂಲಗಳು ತಿಳಿಸಿವೆ.

ಚಕ್ರತೀರ್ಥ ಸಮಿತಿಯ ಪ್ರಮುಖ ತಿದ್ದುಪಡಿಗಳು

2019ರಲ್ಲಿ ಅಧಿಕಾರ ಹಿಡಿದ ಬಿಜೆಪಿ ಸರ್ಕಾರ ಬರಗೂರು ಸಮಿತಿ ರೂ‍ಪಿಸಿದ್ದ ಪಠ್ಯ ಪುಸ್ತಕಗಳಲ್ಲಿ ‘ಲೋಪ’ಗಳಿವೆ ಎಂದು ಪ್ರತಿಪಾದಿಸಿತ್ತು. ಭಾಷಾ ವಿಷಯಗಳು, ಪರಿಸರ ಅಧ್ಯಯನ ಹಾಗೂ 6ರಿಂದ 10ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಗಳಲ್ಲಿ ಇರಬಹುದಾದ ಸೂಕ್ಷ್ಮ–ಸಂಕೀರ್ಣ ವಿಷಯಗಳನ್ನು ಪರಿಶೀಲಿಸಿ ಒಂದು ತಿಂಗಳಲ್ಲಿ ವರದಿ ನೀಡುವಂತೆ 2021ರಲ್ಲಿ ರೋಹಿತ್ ಚಕ್ರತೀರ್ಥ ನೇತೃತ್ವದಲ್ಲಿ ಸಮಿತಿ ರಚಿಸಿತ್ತು. 

ಸಮಿತಿಯು ಹತ್ತನೇ ತರಗತಿ ಪಠ್ಯ ಪುಸ್ತಕದಲ್ಲಿ ಆರ್‌ಎಸ್ಎಸ್ ಸಂಸ್ಥಾಪಕ ಕೇಶವ ಬಲಿರಾಮ್ ಹೆಡಗೇವಾರ್ ಅವರ ಭಾಷಣ, ವಿದ್ವಾಂಸ ಬನ್ನಂಜೆ ಗೋವಿಂದಾಚಾರ್ಯರ ‘ಶುಕನಾಶನ ಉಪದೇಶ’ ಮತ್ತು ಶತಾವಧಾನಿ ಆರ್. ಗಣೇಶ್ ಅವರ ‘ಶ್ರೇಷ್ಠ ಭಾರತೀಯ ಚಿಂತನೆಗಳು’ ಚಕ್ರವರ್ತಿ ಸೂಲಿಬೆಲೆ ಅವರ ‘ತಾಯಿ ಭಾರತಿಯ ಅಮರಪುತ್ರರು’ ಪಾಠವನ್ನೂ ಸೇರಿಸಿತ್ತು. ಲಂಕೇಶ್‌ ಅವರ ‘ಮೃಗ ಮತ್ತು ಸುಂದರಿ’ ಸೇರಿದಂತೆ ಹಲವು ಪಠ್ಯಗಳನ್ನು ಕೈಬಿಟ್ಟು ಶಿವಾನಂದ ಕಳವೆ ಅವರ ‘ಸ್ವದೇಶಿ
ಸೂತ್ರದ ಸರಳ ಹಬ್ಬ’ ಮತ್ತು ಎಂ. ಗೋವಿಂದ ಪೈ ಅವರ ‘ನಾನು ಪ್ರಾಸ ಬಿಟ್ಟ ಕಥೆ’ ಸೇರ್ಪಡೆ ಮಾಡಿತ್ತು. 

ಸಾಮಾಜಿಕ ಕ್ರಾಂತಿಯ ಹರಿಕಾರ ಬ್ರಹ್ಮಶ್ರೀ ನಾರಾಯಣ ಗುರುಗಳ ಜೀವನ ಸಾಧನೆ ಪರಿಚಯಿಸುವ ಸುದೀರ್ಘ ಪಾಠವನ್ನು ಕತ್ತರಿಸಿ, ಒಂದು ಪ್ಯಾರಾಕ್ಕೆ ಇಳಿಸಲಾಗಿತ್ತು. ಜತೆಗೆ ಈ ಪಾಠವನ್ನು ಸಮಾಜ ವಿಜ್ಞಾನದಿಂದ ತೆಗೆದು, ಕನ್ನಡ ವಿಷಯಕ್ಕೆ ಸೇರಿಸಲಾಗಿತ್ತು. 12ನೇ ಶತಮಾನದ ಜಗಜ್ಯೋತಿ ಬಸವೇಶ್ವರ, ದಾಸಶ್ರೇಷ್ಠ ಕನಕ
ದಾಸರು, ಡಾ. ಬಿ.ಅಂಬೇಡ್ಕರ್‌, ರಾಷ್ಟ್ರಕವಿ ಕುವೆಂಪು, ಮೈಸೂರು ಹುಲಿ ಟಿಪ್ಪುಸುಲ್ತಾನ್ಅ ವರ ಕುರಿತ ವಿಷಯಗಳಲ್ಲೂ ಹಲವು ಅಂಶ ಗಳನ್ನು ಕೈಬಿಟ್ಟು, ಕೆಲವು ವಿಷಯಗಳನ್ನು ತಿದ್ದುಪಡಿ ಮಾಡುವ ಮೂಲಕ ಯಡವಟ್ಟು ಮಾಡಲಾಗಿತ್ತು.

ಸಮಿತಿಯ ನಿರ್ಧಾರ ವಿರೋಧಿಸಿ ಸಾಹಿತಿ ದೇವನೂರು ಮಹಾದೇವ, ಜಿ. ರಾಮಕೃಷ್ಣ, ಚಂದ್ರಶೇಖರ ತಾಳ್ಯ, ರೂಪ ಹಾಸನ ಸೇರಿದಂತೆ ಹಲವರು ತಮ್ಮ ಬರಹಗಳನ್ನು ಬಳಸಿಕೊಳ್ಳದಂತೆ ಸರ್ಕಾರಕ್ಕೆ ಪತ್ರ ಬರೆದಿದ್ದರು. ಕೆಲ ಸಮುದಾಯಗಳು, ಸಂಘಟನೆಗಳು ಪ್ರತಿಭಟನೆ ಗಳನ್ನೂ ನಡೆಸಿದ್ದವು.

130 ಪುಟ, ₹ 40 ಲಕ್ಷ ಹೆಚ್ಚುವರಿ ವೆಚ್ಚ

ರಾಜ್ಯದ ಸರ್ಕಾರಿ, ಅನುದಾನಿತ ಶಾಲೆಗಳ 57 ಲಕ್ಷ ಮಕ್ಕಳಿಗೆ (ಖಾಸಗಿ ಶಾಲೆಗಳನ್ನು ಹೊರತುಪಡಿಸಿ) 3.40 ಕೋಟಿಗೂ ಹೆಚ್ಚು ಪುಸ್ತಕಗಳು ಮುದ್ರಣಗೊಂಡು ಶಾಲೆಗಳನ್ನು ತಲುಪಿವೆ. ರೋಹಿತ್‌ ಚಕ್ರತೀರ್ಥ ಸಮಿತಿ 1ರಿಂದ 5ನೇ ತರಗತಿಯವರೆಗಿನ ಪಾಠಗಳಲ್ಲಿ ಯಾವುದೇ ಬದಲಾವಣೆ ಮಾಡಿರಲಿಲ್ಲ. 6ರಿಂದ 10ನೇ ತರಗತಿಯವರೆಗಿನ ಪಠ್ಯಗಳಲ್ಲಿ ಸಮಾಜ ವಿಜ್ಞಾನ ಹಾಗೂ ಕನ್ನಡ ವಿಷಯಗಳ 45 ಪಾಠಗಳನ್ನು ಬದಲಾವಣೆ ಮಾಡಿತ್ತು. 9 ಪಾಠಗಳನ್ನು ಹೊಸದಾಗಿ ಸೇರಿಸಿತ್ತು. ಗಣಿತ, ವಿಜ್ಞಾನ ಸೇರಿದಂತೆ ಯಾವ ಬದಲಾವಣೆಗಳೂ ಇರಲಿಲ್ಲ. ಹಾಗಾಗಿ, ಹಿಂದಿನ ಪಠ್ಯಪುಸ್ತಕಗಳನ್ನೇ ಮುಂದುವರಿಸಿದರೆ ಹೆಚ್ಚಿನ ವಿಷಯಗಳಲ್ಲಿ ವ್ಯತ್ಯಾಸವಾಗುವುದಿಲ್ಲ. ಸುಮಾರು 130 ಪುಟಗಳಷ್ಟು ಮರು ಮುದ್ರಣ ಮಾಡ ಬೇಕಾಗುತ್ತದೆ. ಅದಕ್ಕೆ ₹ 35 ಲಕ್ಷದಿಂದ ಗರಿಷ್ಠ ₹ 40 ಲಕ್ಷ ವೆಚ್ಚವಾಗ ಬಹುದು ಎನ್ನುತ್ತಾರೆ ಕರ್ನಾಟಕ ಪಠ್ಯಪುಸ್ತಕ ಸಂಘದ ಹಿರಿಯ ಅಧಿಕಾರಿಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT