ಬೆಂಗಳೂರು: ಡಿ.ಫಾರ್ಮಾ (ಡಿಪ್ಲೊಮಾ ಇನ್ ಫಾರ್ಮಸಿ) ಪರೀಕ್ಷೆಗೆ ಗೈರಾಗಿದ್ದ ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳು ಮೌಲ್ಯಮಾಪನ ವೇಳೆಯಲ್ಲಿ ಪತ್ತೆಯಾಗಿದ್ದ ಫಾರ್ಮಸಿ ಕಾಲೇಜುಗಳ ಮೇಲೆ ಕ್ರಮ ತೆಗೆದುಕೊಳ್ಳುವ ಬದಲು, ಈ ಕಾಲೇಜುಗಳಿಗೆ ಔಷಧ ನಿಯಂತ್ರಣ ಇಲಾಖೆಯ ಪರೀಕ್ಷಾ ಪ್ರಾಧಿಕಾರ ಮಂಡಳಿ (ಡಿ. ಫಾರ್ಮಸಿ) ಪರೀಕ್ಷಾ ಕೇಂದ್ರ ನೀಡಿದೆ.

2023ರ ಜನವರಿಯಲ್ಲಿ ನಡೆದ ಪ್ರಥಮ ಡಿ. ಫಾರ್ಮಸಿ ವಾರ್ಷಿಕ ಪರೀಕ್ಷೆಯಲ್ಲಿ 9 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆಗೆ ಗೈರಾಗಿದ್ದ 104 ವಿದ್ಯಾರ್ಥಿಗಳ 397 ಉತ್ತರ ಪತ್ರಿಕೆಗಳು ಪತ್ತೆಯಾಗಿದ್ದವು. ಈ ಕುರಿತು ತನಿಖೆ ನಡೆಸಿದ್ದ ಆಂತರಿಕ ಸಮಿತಿಯು, ಈ ಹೆಚ್ಚುವರಿ ಪತ್ರಿಕೆಗಳು ತುಮಕೂರು ಜಿಲ್ಲೆಯ ಕೊರಟಗೆರೆಯ ಪ್ರಿಯದರ್ಶಿನಿ ಕಾಲೇಜ್ ಆಫ್ ಫಾರ್ಮಸಿ ಮತ್ತು ಪ್ರಕೃತಿ ಕಾಲೇಜು ಆಫ್ ಫಾರ್ಮಸಿಯ ಪರೀಕ್ಷಾ ಕೇಂದ್ರಗಳಿಗೆ ಸಂಬಂಧಿಸಿದ್ದು ಎಂದು ತನ್ನ ವರದಿಯಲ್ಲಿ ತಿಳಿಸಿದೆ.

ಪರೀಕ್ಷೆಗೆ ಗೈರಾದರೂ ಉತ್ತರ ಪತ್ರಿಕೆಗಳು ಪ್ರತ್ಯಕ್ಷವಾದ ಪ್ರಕರಣ ದೃಢಪಟ್ಟ ಫಾರ್ಮಸಿ ಕಾಲೇಜುಗಳಿಗೆ ಮತ್ತೆ ಪರೀಕ್ಷಾ ಕೇಂದ್ರಗಳನ್ನು ನೀಡಿರುವುದರ ಹಿಂದೆ ಅವ್ಯವಹಾರ ನಡೆದಿರುವ ಶಂಕೆ ವ್ಯಕ್ತವಾಗಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪರೀಕ್ಷಾ ಪ್ರಾಧಿಕಾರ ಮಂಡಳಿಯ ಸದಸ್ಯರಾಗಿದ್ದ ಡಾ. ವಿಜಯ ಜಿ. ಜೋಷಿ ಅಧ್ಯಕ್ಷತೆಯ ಸಮಿತಿಯು ಈಗಾಗಲೇ ಅಂತಿಮ ವರದಿ ಸಲ್ಲಿಸಿದೆ. ಈ ವರದಿಯನ್ನು ಔಷಧ ನಿಯಂತ್ರಕರು ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಸಲ್ಲಿಸಿದ್ದಾರೆ.

ಈ ತನಿಖಾ ಸಮಿತಿಯಲ್ಲಿ ಸದಸ್ಯರಾಗಿದ್ದ ನಜೀರ್ ಅಹಮದ್ ಅವರು ಈಗ ಮಂಡಳಿಯ ಸದಸ್ಯ ಕಾರ್ಯದರ್ಶಿ. ಸರ್ಕಾರಿ ಕಾಲೇಜ್ ಆಫ್ ಫಾರ್ಮಸಿಯ ಪ್ರಾಂಶುಪಾಲರಾದ ಡಾ. ಕಲಾಸ್ಕರ್ ಗುರುನಾಥ್ ಅವರು ಮಂಡಳಿಯ ಅಧ್ಯಕ್ಷರಾಗಿದ್ದಾರೆ.

‘ಕೊರಟಗೆರೆಯ ಪರೀಕ್ಷಾ ಕೇಂದ್ರಗಳಲ್ಲಿ ಪತ್ತೆಯಾಗಿದ್ದ ಈ ಹೆಚ್ಚುವರಿ ಉತ್ತರ ಪತ್ರಿಕೆಗಳು, ಈ ಹಿಂದಿನ ಪರೀಕ್ಷೆಗೆ ಪೂರೈಕೆ ಮಾಡಿರುವ ಉತ್ತರ ಪತ್ರಿಕೆಗಳಾಗಿವೆ’ ಎಂದು ಮಂಡಳಿಯ ಹಿಂದಿನ ಸದಸ್ಯ ಕಾರ್ಯದರ್ಶಿಯ ಹೇಳಿಕೆಯನ್ನು ತನಿಖಾ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಅಲ್ಲದೆ, ಮಂಡಳಿಯ ಸದಸ್ಯ ಕಾರ್ಯದರ್ಶಿ ಮತ್ತು ಅವರ ಸಿಬ್ಬಂದಿ ಹಾಗೂ ಚೀಫ್ ಕಸ್ಟೋಡಿಯನ್ ಮತ್ತು ಅವರ ಸಿಬ್ಬಂದಿ ಕರ್ತವ್ಯಲೋಪದಿಂದ ಅನಧಿಕೃತ ಉತ್ತರ ಪತ್ರಿಕೆಗಳ ಸೇರ್ಪಡೆ ಸಾಧ್ಯವಾಗಿರುತ್ತದೆ. ಇದನ್ನು ಯಾರು ಮಾಡಿರಬಹುದೆಂದು ನಿಖರವಾಗಿ ತಿಳಿಸಲು ಸಾಧ್ಯವಾಗದೇ ಇರುವುದರಿಂದ ಈ ಪ್ರಕರಣವನ್ನು ಹೆಚ್ಚಿನ ತನಿಖೆಗೆ ವಹಿಸಬಹುದಾಗಿದೆ’ ಎಂದೂ ಸಮಿತಿಯು ಶಿಫಾರಸು ಮಾಡಿದೆ. ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್ಷನ್ ಸೊಸೈಟಿಯ ಯೋಜನಾ ನಿರ್ದೇಶಕ ಎನ್.ಎಂ. ನಾಗರಾಜ ನೇತೃತ್ವದ ಸಮಿತಿಯು ಉನ್ನತ ತನಿಖೆ ನಡೆಸುತ್ತಿದೆ.

ದ್ವಿತೀಯ ಪಿಯು ವಿಜ್ಞಾನ ವಿಷಯದಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳು ಎರಡು ವರ್ಷಗಳ ಡಿ.ಫಾರ್ಮಾ ಕೋರ್ಸ್ಗೆ ಪ್ರವೇಶ ಪಡೆಯುತ್ತಾರೆ. ಕೋರ್ಸ್ ಮುಗಿದ ಬಳಿಕ ಔಷಧ ಮೇಲ್ವಿಚಾರಕರಾಗಿ (ಫಾರ್ಮಸಿಸ್ಟ್) ಕಾರ್ಯನಿರ್ವಹಿಸುತ್ತಾರೆ. ಮಂಡಳಿಯು ಫಾರ್ಮಸಿ ಕಾಲೇಜುಗಳ ಮಾನ್ಯತೆ, ಪ್ರವೇಶ ಪ್ರಕ್ರಿಯೆ, ಪರೀಕ್ಷೆಯ ಮೇಲುಸ್ತುವಾರಿ ನಡೆಸುತ್ತದೆ. ಗೈರಾಗಿದ್ದ ವಿದ್ಯಾರ್ಥಿಗಳಿಗೆ ಪರೀಕ್ಷೆಯ ಪ್ರವೇಶ ಪತ್ರಗಳನ್ನೂ ನೀಡಿಲ್ಲ. ಹೊರಗಿನಿಂದ ಉತ್ತರ ಬರೆಸಿ, ಮೌಲ್ಯಮಾಪನದ ಸಂದರ್ಭದಲ್ಲಿ ಸೇರ್ಪಡೆ ಮಾಡಿರುವ ಶಂಕೆಯನ್ನು ಸಮಿತಿ ವ್ಯಕ್ತಪಡಿಸಿದೆ.

ಸೌಲಭ್ಯಗಳಿಲ್ಲದ ಕೇಂದ್ರಗಳಲ್ಲಿ ಪರೀಕ್ಷೆ?

‘ಮಂಡಳಿಯ ಅಡಿಯಲ್ಲಿ 268 ಫಾರ್ಮಸಿ ಕಾಲೇಜುಗಳಿದ್ದು, ಇಲ್ಲಿ ಡಿಪ್ಲೊಮಾ ಇನ್ ಫಾರ್ಮಸಿ ಕೋರ್ಸ್ ಇದೆ. ಈ ಪೈಕಿ, ಬೀದರ್, ಕಲಬುರಗಿ, ಬಾಗಲಕೋಟೆ ಭಾಗದಲ್ಲಿರುವ ಕೆಲವು ಫಾರ್ಮಸಿ ಕಾಲೇಜುಗಳ ಪರೀಕ್ಷಾ ಕೇಂದ್ರಗಳಲ್ಲಿ ಸೌಲಭ್ಯವೇ ಇಲ್ಲ. ಆದರೂ ಪರೀಕ್ಷಾ ಕೇಂದ್ರಗಳಿಗೆ ಮಂಡಳಿಯು ಅನುಮತಿ ನೀಡಿದೆ. ಪರೀಕ್ಷಾ ಕೇಂದ್ರಗಳಿಗೆ ಅನುಮತಿ ನೀಡುವ ವಿಚಾರದಲ್ಲೂ ಅವ್ಯವಹಾರ ನಡೆದಿರುವ ಸಾಧ್ಯತೆಗಳಿವೆ ಎಂದು ಫಾರ್ಮಸಿ ಕಾಲೇಜೊಂದರ ಬೋಧಕ ಸಿಬ್ಬಂದಿ ತಿಳಿಸಿದರು.

ಈ ಕುರಿತು ಪ್ರತಿಕ್ರಿಯೆ ಪಡೆಯಲು ಮಂಡಳಿಯ ಸದಸ್ಯ ಕಾರ್ಯದರ್ಶಿಯನ್ನು ಸಂಪರ್ಕಿಸಲು ಯತ್ನಿಸಿದರೂ ಅವರು ಲಭ್ಯರಾಗಲಿಲ್ಲ.

ಫಲಿತಾಂಶ ವಿಳಂಬ: ಬಿ.ಫಾರ್ಮಾ ನೇರ ಪ್ರವೇಶಕ್ಕೆ ಅಡ್ಡಿ

ಇದೇ ಜನವರಿಯಲ್ಲಿ ನಡೆದ ಡಿ. ಫಾರ್ಮಾ ಎರಡನೇ ವರ್ಷದ ವಾರ್ಷಿಕ ಪರೀಕ್ಷೆಯ ಫಲಿತಾಂಶ ಇನ್ನೂ ಪ್ರಕಟವಾಗಿಲ್ಲ.

ಫಲಿತಾಂಶ ವಿಳಂಬ ಕುರಿತು ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯ ದರ್ಶಿಗೆ ಪತ್ರ ಬರೆದಿರುವ ರಾಜ್ಯ ಫಾರ್ಮಸಿ ಕಾಲೇಜುಗಳ ಆಡಳಿತ ಸಂಘ, ‘ಡಿ. ಫಾರ್ಮಾ ಎರಡನೇ ವರ್ಷದ ಪರೀಕ್ಷೆ ಮುಗಿದು 45 ದಿನಗಳು ಕಳೆದರೂ ಫಲಿತಾಂಶ ಪ್ರಕಟಿಸಿಲ್ಲ. ವಿಶ್ವವಿದ್ಯಾಲಯಗಳಲ್ಲಿ ದ್ವಿತೀಯ ಬಿ. ಫಾರ್ಮಾ ನೇರ ಪ್ರವೇಶಕ್ಕೆ (ಲ್ಯಾಟರಲ್ ಎಂಟ್ರಿ) ಫೆ. 29 ಕೊನೆಯ ದಿನ. ಫಲಿತಾಂಶ ಬಾರದೇ ಇರುವುದರಿಂದ ಬಿ. ಫಾರ್ಮಾ ದ್ವಿತೀಯ ವರ್ಷಕ್ಕೆ ನೇರ ಪ್ರವೇಶ ಪಡೆಯುವ ಅವಕಾಶದಿಂದ ವಿದ್ಯಾರ್ಥಿಗಳು ವಂಚಿತರಾಗಿದ್ದಾರೆ. ಹೀಗಾಗಿ ಈ ವಿಷಯದಲ್ಲಿ ಮಧ್ಯಪ್ರವೇಶ ಮಾಡಬೇಕು’ ಎಂದು ಮನವಿ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.