ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗರಿಗೆದರಿದ ಆಸೆ: ಅರಳಿದ ‘ಸದಾ’ನಂದ. . .!

Published 18 ಮಾರ್ಚ್ 2024, 23:30 IST
Last Updated 18 ಮಾರ್ಚ್ 2024, 23:30 IST
ಅಕ್ಷರ ಗಾತ್ರ

ಎಪ್ಪತ್ತೊಂದು ವರ್ಷಕ್ಕೆ ಕಾಲಿಟ್ಟಿರುವ ಮಾಜಿ ಮುಖ್ಯಮಂತ್ರಿ, ಮಾಜಿ ಕೇಂದ್ರ ಸಚಿವ, ಮಾಜಿ ವಿರೋಧ ಪಕ್ಷದ ನಾಯಕ, ಮಾಜಿ ಶಾಸಕ ಹೀಗೆ ಹಲವು ‘ಮಾ..ಜಿ’ಗಳನ್ನು ಬೆನ್ನಿಗಿಟ್ಟುಕೊಂಡಿರುವ ಬೆಂಗಳೂರು ಉತ್ತರ ಕ್ಷೇತ್ರದ ಹಾಲಿ ಬಿಜೆಪಿ ಸಂಸದ ಡಿ.ವಿ. ಸದಾನಂದಗೌಡರಿಗೆ ಮತ್ತೆ ಚುನಾವಣೆಗೆ ಸ್ಪರ್ಧಿಸುವ ಆಸೆ ಗರಿಗೆದರಿದೆಯಂತೆ...

ತಮ್ಮ ಹುಟ್ಟುಹಬ್ಬದ ಸಡಗರದ ವೇಳೆ ಅಭಿಮಾನಿಗಳ ಉಮೇದು, ಉತ್ಸಾಹ ಕಂಡ ಗೌಡರಿಗೆ ಮತ್ತೊಮ್ಮೆ ಲೋಕಸಭೆಗೆ ಯಾಕೆ ಸ್ಪರ್ಧಿಸಬಾರದು ಎಂಬ ಕನಸು ಶುರುವಾಗಿದೆ. ತಮ್ಮ ಅತ್ಯಾಪ್ತರ ಅಭಿಮಾನ ಕಂಡು ಮನಸೂರೆಗೊಂಡ ಅವರು ಮತ್ತೊಮ್ಮೆ ಅರಳಲು ಅಣಿಯಾಗಿದ್ದಾರಂತೆ...  ಹೀಗೆ ಶುರುವಾದ ಗೌಡರ ಕನಸು ಬಿಜೆಪಿ ಕಚೇರಿ ಜಗನ್ನಾಥ ಭವನ ತೊರೆದು, ಕ್ವೀನ್ಸ್‌ ರಸ್ತೆಯಲ್ಲಿರುವ ‘ಭಾರತ್ ಜೋಡೊ ಭವನ’ದ ಮೇಲೆಲ್ಲ ಸುಳಿದಾಡುತ್ತಿದೆ ಎಂಬುದು ಅವರ ‘ಬೆಂಬಲಿಗರ’ ಸಿಹಿನುಡಿ.

‘ನಾನು ಚುನಾವಣಾ ರಾಜಕೀಯದಿಂದ ಸ್ವಯಂ ನಿವೃತ್ತಿ ಘೋಷಿಸಿದ್ದೆ. ಶೋಭಾ ಕರಂದ್ಲಾಜೆ, ಸಿ.ಟಿ. ರವಿ ಬೆಂಗಳೂರಿಗೆ ಕಾಲಿಡಬಾರದು ಎಂದು ಹಟಕ್ಕೆ ಬಿದ್ದು ಈ ಭಾಗದ ಪಕ್ಷದ ಒಕ್ಕಲಿಗ ಸಮುದಾಯದ ಶಾಸಕರು, ಮಾಜಿ ಮುಖ್ಯಮಂತ್ರಿಗಳು ಮನೆಗೆ ಬಂದು ನೀವೇ ನಿಲ್ಲಬೇಕು ಎಂದು ಏಣಿ ಹತ್ತಿಸಿದರು. ಏಣಿ ಹಿಡಿಯುವುದೇ ಕಷ್ಟ ಎಂದಿರುವಾಗ, ಅವರ ಮಾತು ಕೇಳಿ ಏಣಿ ಹತ್ತಿದೆ. ಈಗ ಏಣಿಯೂ ಇಲ್ಲ; ದೋಣಿಯೂ ಇಲ್ಲ‘ ಎಂದು ಸಿಟ್ಟಿಗೆದ್ದ ಗೌಡರು, ಆಗಿದ್ದಾಗಲಿ ಎಂದು ಒಂದು ಹೆಜ್ಜೆ ಹೊರಗಿಟ್ಟಿದ್ದಾರಂತೆ. 

ಮುಖ್ಯಮಂತ್ರಿಯಾಗಿ ಎರಡು ವರ್ಷ ಮುಂದುವರಿಯಲು ಬಿಡಲಿಲ್ಲ. ಈಗ ತಮ್ಮ ಕ್ಷೇತ್ರದಲ್ಲಿ ಶೋಭಾ ಅವರನ್ನು ಕಣಕ್ಕೆ ಇಳಿಸಿದ್ದಾರೆ. ಇದಕ್ಕೆ ಸಡ್ಡು ಹೊಡೆಯಲು ಶೋಭಾ ಎದುರೇ ಕಣಕ್ಕೆ ಇಳಿದರೆ ಹೇಗೆ ಎಂಬುದು ಗೌಡರ ಲೆಕ್ಕಾಚಾರವಂತೆ. ತಾವು ಎಷ್ಟೇ ಹಟಕ್ಕೆ ಬಿದ್ದರೂ ತಮಗೆ ಅನುಕೂಲಕಾರಿ ಕ್ಷೇತ್ರ ಸಿಗದು. ದಕ್ಷಿಣ ಕನ್ನಡ, ಉಡುಪಿ, ಉತ್ತರಗಳನ್ನು ಯಾರಿಗೋ ಧಾರೆ ಎರೆದಾಗಿದೆ. ಆದರೆ, ಈ ಮೂರರಲ್ಲಿ ಎದುರಾಳಿ ಪಕ್ಷ ಟಿಕೆಟ್ ಘೋಷಿಸಿಲ್ಲ. ಮೈಸೂರು–ಕೊಡಗು ಕೂಡ ಬಾಕಿ ಉಂಟು. ಈ ನಾಲ್ಕರಲ್ಲಿ ಎಲ್ಲೇ ಕೊಟ್ಟರೂ ತಾವು ಸಿದ್ದ ಎಂದು ಸಂದೇಶ ಕೊಟ್ಟಿರುವ ಗೌಡರು, ಅದಕ್ಕೆ ಪೂರಕ ಎಂಬಂತೆ ‘ಕಾಂಗ್ರೆಸ್‌ನವರು ಸಂಪರ್ಕಿಸಿರುವುದು ಹೌದು’ ಎಂಬ ಬಾಂಬ್‌ ಅನ್ನು ತಮ್ಮ ನೆಚ್ಚಿನ ಪ್ರಧಾನಿ ಮೋದಿಯವರು ಕರ್ನಾಟಕದಲ್ಲಿದ್ದಾಗಲೇ ಸಿಡಿಸಿದ್ದಾರಂತೆ. ‘ಉತ್ತರ’ದಲ್ಲಿ ಯಾರ ಹೂವು ಯಾರ ಮುಡಿಗೋ ಎಂದು ಕಾಂಗ್ರೆಸ್‌ ಕಡೆಗೆ ಈಗಲೇ ಹೊರಟಿರುವ ಬಿಜೆಪಿ ಶಾಸಕರು ಹಾಡತೊಡಗಿದ್ದಾರಂತೆ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT