ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನಿರ್ಮಾಪಕ ಸೌಂದರ್ಯ ಜಗದೀಶ್‌ ಆತ್ಮಹತ್ಯೆ ಪ್ರಕರಣ; ಪವಿತ್ರಾ ಖಾತೆಗೆ ₹2 ಕೋಟಿ?

Published 24 ಜೂನ್ 2024, 19:30 IST
Last Updated 24 ಜೂನ್ 2024, 19:30 IST
ಅಕ್ಷರ ಗಾತ್ರ

ಬೆಂಗಳೂರು: ಸಿನಿಮಾ ನಿರ್ಮಾಪಕ ಹಾಗೂ ಉದ್ಯಮಿ ಸೌಂದರ್ಯ ಜಗದೀಶ್ ಅವರು ತಮ್ಮ ಖಾತೆಯಿಂದ ಪವಿತ್ರಾ ಪಿ. ಎಂಬುವವರ ಖಾತೆಗೆ ₹ 2 ಕೋಟಿ ಸಂದಾಯ ಮಾಡಿರುವುದು ಪೊಲೀಸ್‌ ತನಿಖೆಯಿಂದ ಗೊತ್ತಾಗಿದ್ದು, ರೇಣುಕಸ್ವಾಮಿ ಹತ್ಯೆ ಪ್ರಕರಣದ ಆರೋಪಿಯಾಗಿರುವ ಪವಿತ್ರಾಗೌಡ ಅವರಿಗೇ ಈ ಹಣ ಸಂದಾಯ ಆಗಿರಬಹುದೇ ಎಂಬ ನಿಟ್ಟಿನಲ್ಲಿ ಪೊಲೀಸರು ತನಿಖೆ ಮುಂದುವರಿಸಿದ್ಧಾರೆ.

ನಟ ದರ್ಶನ್‌ ಅವರ ಆಪ್ತೆ ಪವಿತ್ರಾಗೌಡ ಅವರು ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಎ–1 ಆರೋಪಿಯಾಗಿದ್ದು, ನ್ಯಾಯಾಂಗ ಬಂಧನದಲ್ಲಿದ್ದಾರೆ.

‘ರಾಜಾಜಿನಗರದಲ್ಲಿ ಇರುವ ಬ್ಯಾಂಕ್‌ವೊಂದಕ್ಕೆ ಪವಿತ್ರಾ ಪಿ. ಹೆಸರಿನ ಖಾತೆಗೆ 2017ರಲ್ಲಿ ₹1 ಕೋಟಿ ಹಾಗೂ 2018ರಲ್ಲಿ ₹1 ಕೋಟಿ ಜಮಾವಣೆ ಮಾಡಲಾಗಿದೆ. ಈ ಕುರಿತು ಹೆಚ್ಚಿನ ತನಿಖೆ ನಡೆಸುವಂತೆ ಸೌಂದರ್ಯ ಜಗದೀಶ್ ಅವರ ಪಾಲುದಾರರೊಬ್ಬರು ಪೊಲೀಸರಲ್ಲಿ ಮನವಿ ಮಾಡಿದ್ದಾರೆ’ ಎಂದು ಮೂಲಗಳು ಹೇಳಿವೆ.

ಸೌಂದರ್ಯ ಜಗದೀಶ್ ಅವರು ಏಪ್ರಿಲ್‌ 14ರಂದು ತಮ್ಮ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಸಂಬಂಧ ಮಹಾಲಕ್ಷ್ಮಿ ಲೇಔಟ್ ಠಾಣೆಯಲ್ಲಿ ಯುಡಿಆರ್ (ಅಸಹಜ ಸಾವು) ಪ್ರಕರಣ ದಾಖಲಾಗಿತ್ತು.

ಅದಾದ ಮೇಲೆ, ಮೇ 24ರಂದು ಸೌಂದರ್ಯ ಜಗದೀಶ್‌ ಅವರ ಪತ್ನಿ ಶಶಿರೇಖಾ ಅವರು ‘₹ 60 ಕೋಟಿ ವಂಚನೆಯಿಂದ ಪತಿ ನೊಂದಿದ್ದರು’ ಎಂದು ಆರೋಪಿಸಿ, ದೂರು ನೀಡಿದ್ದರು. ಪ್ರತ್ಯೇಕ ದೂರು ನೀಡಿದ್ದರಿಂದ ಆತ್ಮಹತ್ಯೆ ಪ್ರಚೋದನೆ ಆಯಾಮದಲ್ಲಿ ಪೊಲೀಸರು ತನಿಖೆ ಮುಂದುವರಿಸಿದ್ದರು. ಇದೀಗ ಪವಿತ್ರಾ ಪಿ. ಹೆಸರಿನ ಖಾತೆಗೆ ಹಣ ಸಂದಾಯ ಆಗಿರುವುದು ಗೊತ್ತಾಗಿದೆ.

‘ಹಣದ ವ್ಯವಹಾರದ ಬಗ್ಗೆ ಸೌಂದರ್ಯ ಜಗದೀಶ್‌ ಅವರ ಪಾಲುದಾರ ಸುರೇಶ್ ಅವರು ದಾಖಲೆಗಳನ್ನು ಪೊಲೀಸರಿಗೆ ನೀಡಿದ್ದಾರೆ’ ಎಂದು ಮೂಲಗಳು ತಿಳಿಸಿವೆ.

‘ಸೌಂದರ್ಯ ಜಗದೀಶ್ ಅವರು ‘ಸೌಂದರ್ಯ ಕನ್‌ಸ್ಟ್ರಕ್ಷನ್’ ಕಂಪನಿ ನಡೆಸುತ್ತಿದ್ದರು. ವಿ.ಎಸ್.ಸುರೇಶ್, ಎಸ್‌.ಪಿ. ಹೊಂಬಣ್ಣ ಹಾಗೂ ಸುಧೀಂದ್ರ ಅವರು ಕಂಪನಿಯ ಸಹ ಪಾಲುದಾರರು ಆಗಿದ್ದರು. ತಮ್ಮ ಕೆಲ ಆಸ್ತಿಯನ್ನು ಬ್ಯಾಂಕ್‌ನಲ್ಲಿ ಅಡವಿಟ್ಟಿದ್ದ ಸೌಂದರ್ಯ ಜಗದೀಶ್, ₹60 ಕೋಟಿ ಸಾಲ ಪಡೆದು ಕಂಪನಿಯಲ್ಲಿ ಹೂಡಿಕೆ ಮಾಡಿದ್ದರು. ಕಂಪನಿ ನಷ್ಟದಲ್ಲಿರುವುದಾಗಿ ಹೇಳಿದ್ದ ಸಹ ಪಾಲುದಾರರು, ₹60 ಕೋಟಿ ವಂಚಿಸಿದ್ದರು. ಜೊತೆಗೆ, ಸೌಂದರ್ಯ ಜಗದೀಶ್ ಅವರಿಂದ ಹಲವು ದಾಖಲೆಗಳಿಗೆ ಸಹಿ ಪಡೆದುಕೊಂಡಿದ್ದರು. ಇದನ್ನು ಪ್ರಶ್ನಿಸಿದ್ದಕ್ಕೆ ಸಹ ಪಾಲುದಾರರು, ಜೀವ ಬೆದರಿಕೆ ಒಡ್ಡಿದ್ದರು. ಇದರ ಕಿರುಕುಳದಿಂದಲೇ ಸೌಂದರ್ಯ ಜಗದೀಶ್ ಆತ್ಮಹತ್ಯೆ ಮಾಡಿಕೊಂಡಿದ್ಧಾರೆ’ ಎಂದು ಶಶಿರೇಖಾ ದೂರಿನಲ್ಲಿ ತಿಳಿಸಿದ್ದರು.

‘ಸೌಂದರ್ಯ ಜಗದೀಶ್ ಅವರ ಕೊಠಡಿಯಲ್ಲಿದ್ದ ಬಟ್ಟೆಯಲ್ಲಿ ಮರಣ ಪತ್ರವೊಂದು ಸಿಕ್ಕಿತ್ತು. ಅದೇ ಮರಣಪತ್ರ ಆಧರಿಸಿ ಪತ್ನಿ ದೂರು ನೀಡಿದ್ದರು. ಅದನ್ನು ಆಧರಿಸಿಯೇ ತನಿಖೆ ನಡೆಸಲಾಗುತ್ತಿದೆ’ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT