ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ದಾಸರಹಳ್ಳಿ ಕ್ಷೇತ್ರದ ರಸ್ತೆ ದುರಸ್ತಿ: ಕಾಲಮಿತಿ ವಿವರ ಸಲ್ಲಿಸಲು ನಿರ್ದೇಶನ

Published 20 ಫೆಬ್ರುವರಿ 2024, 16:17 IST
Last Updated 20 ಫೆಬ್ರುವರಿ 2024, 16:17 IST
ಅಕ್ಷರ ಗಾತ್ರ

ಬೆಂಗಳೂರು: ‘ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಏಳು ವಾರ್ಡ್‌ಗಳಲ್ಲಿ ಹಾಳಾಗಿರುವ ರಸ್ತೆಗಳ ಅಭಿವೃದ್ಧಿ ಹಾಗೂ ಡಾಂಬರೀಕರಣ ಕಾರ್ಯ ಪೂರ್ಣಗೊಳಿಸುವ ಕಾಲಮಿತಿಯ ವಿವರವನ್ನು ಒಂದು ವಾರದಲ್ಲಿ ಸಲ್ಲಿಸಿ’ ಎಂದು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಗೆ (ಬಿಬಿಎಂಪಿ) ಹೈಕೋರ್ಟ್‌ ನಿರ್ದೇಶಿಸಿದೆ.

‘ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ವಾರ್ಡ್‌ಗಳಲ್ಲಿನ ರಸ್ತೆಗಳು ಹಾಳಾಗಿದ್ದರೂ ದುರಸ್ತಿ ಕಾಮಗಾರಿ ನಡೆಯುತ್ತಿಲ್ಲ’ ಎಂದು ಆರೋಪಿಸಿ ವಕೀಲ ಅಶ್ವತ್ಥ್ ನಾರಾಯಣ ಚೌಧರಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಪಿ.ಎಸ್‌.ದಿನೇಶ್‌ ಕುಮಾರ್‌ ನೇತೃತ್ವದ ವಿಭಾಗೀಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಜಿ.ಆರ್‌.ಮೋಹನ್‌, ‘ಈ ಅರ್ಜಿಯನ್ನು 2021ರಲ್ಲಿ ಸಲ್ಲಿಸಲಾಗಿದೆ. ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಏಳು ವಾರ್ಡ್‌ಗಳಲ್ಲಿನ ರಸ್ತೆಗಳ ಪರಿಸ್ಥಿತಿ ಆಗ ಹೇಗಿತ್ತೊ, ಈಗಲೂ ಅದೇ ಪರಿಸ್ಥಿತಿ ಇದೆ’ ಎಂದರು.

‘ರಸ್ತೆಗಳ ಅಭಿವೃದ್ಧಿಗೆ ₹ 110 ಕೋಟಿ ಬಿಡುಗಡೆ ಮಾಡಿರುವುದಾಗಿ ಸರ್ಕಾರ ಹಾಗೂ ಬಿಬಿಎಂಪಿ 2022ರ ಮಾರ್ಚ್ 23ರಂದು ಹೈಕೋರ್ಟ್‌ಗೆ ತಿಳಿಸಿದ್ದವು. ಈ ಹೇಳಿಕೆಯನ್ನು ನ್ಯಾಯಪೀಠ ದಾಖಲಿಸಿಕೊಂಡಿತ್ತು. ಆದರೆ, ಮಂಜೂರು ಮಾಡಿದ್ದ ₹ 110 ಕೋಟಿ ಹಣವನ್ನು ವಾಪಸ್‌ ಪಡೆದುಕೊಳ್ಳಲಾಗಿದೆ’ ಎಂದು ಆರೋಪಿಸಿದರು.

ಇದಕ್ಕೆ ಬಿಬಿಎಂಪಿ ಪರ ವಕೀಲ ಎನ್‌.ಕೆ.ರಮೇಶ್‌, ‘ಹಣ ಮಂಜೂರಾಗಿದ್ದು, ರಸ್ತೆಗಳ ಡಾಂಬರೀಕರಣಕ್ಕೆ ಅನುಮತಿಸಲಾಗಿದೆ. ಡಾಂಬರೀಕರಣ ಕಾರ್ಯ ಪೂರ್ಣಗೊಳಿಸುವ ಕಾಲಮಿತಿ ಕುರಿತ ವಿವರವನ್ನು ಒಂದೆರಡು ದಿನಗಳಲ್ಲಿ ನ್ಯಾಯಪೀಠಕ್ಕೆ ಒದಗಿಸಲಾಗುವುದು’ ಎಂದು ತಿಳಿಸಿದರು.

ಇದನ್ನು ಪರಿಗಣಿಸಿದ ನ್ಯಾಯಪೀಠ, ‘ರಸ್ತೆಗಳ ಅಭಿವೃದ್ಧಿ ಕಾಮಗಾರಿ ಪೂರ್ಣಗೊಳಿಸುವ ಕಾಲಮಿತಿಯ ಮಾಹಿತಿಯನ್ನು ಒಂದು ವಾರದಲ್ಲಿ ನೀಡಿ’ ಎಂದು ಸೂಚಿಸಿ ವಿಚಾರಣೆ  ಮುಂದೂಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT