ಬುಧವಾರ, 22 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಹೇರಲು ಸಂಚು: ಡಿಕೆಶಿ ಆರೋಪ

Published 19 ಏಪ್ರಿಲ್ 2024, 12:59 IST
Last Updated 19 ಏಪ್ರಿಲ್ 2024, 12:59 IST
ಅಕ್ಷರ ಗಾತ್ರ

ಬೆಂಗಳೂರು: ‘ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಹುಯಿಲೆಬ್ಬಿಸಿ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಹೇರಲು ಬಿಜೆಪಿ ಸಂಚು ನಡೆಸುತ್ತಿದೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಆರೋಪಿಸಿದರು.

‘ಹುಬ್ಬಳ್ಳಿಯ ಯುವತಿ ಕೊಲೆ ಪ್ರಕರಣ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿರುವುದಕ್ಕೆ ಸಾಕ್ಷಿ’ ಎಂಬ ಬಿಜೆಪಿ ನಾಯಕರ ಆರೋಪದ ಕುರಿತು ಸುದ್ದಿಗಾರರಿಗೆ ಶುಕ್ರವಾರ ಪ್ರತಿಕ್ರಿಯಿಸಿದ ಅವರು, ‘ರಾಷ್ಟ್ರಪತಿ ಆಡಳಿತ ಹೇರಲು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌. ಅಶೋಕ ಮತ್ತು ಅವರ ಪಕ್ಷದ ನಾಯಕರು ಈ ರೀತಿಯ ಹುನ್ನಾರ, ನಾಟಕ ಮಾಡುತ್ತಿದ್ದಾರೆ. ಆ ರೀತಿ ಆಗಲು ನಾವು ಬಿಡುವುದಿಲ್ಲ. ತಪ್ಪು ಮಾಡಿರುವವರ ವಿರುದ್ಧ ನಿಷ್ಪಕ್ಷಪಾತವಾಗಿ ಕಾನೂನು ಕ್ರಮ ಜರುಗಿಸುತ್ತೇವೆ’ ಎಂದರು.

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸರಿ ಇಲ್ಲ ಎಂಬ ಬಿಜೆಪಿಯವರ ಆರೋಪದಲ್ಲಿ ಹುರುಳಿಲ್ಲ. ಬಿಜೆಪಿಯವರು ಗೂಬೆ ಕೂರಿಸುವ ‍ಪ್ರಯತ್ನ ಮಾಡುತ್ತಿದ್ದಾರೆ. ರಾಜ್ಯದಲ್ಲಿರುವಷ್ಟು ಉತ್ತಮವಾದ ಕಾನೂನು ಸುವ್ಯವಸ್ಥೆ ಬೇರೆ ಯಾವ ರಾಜ್ಯಗಳಲ್ಲೂ ಇಲ್ಲ ಎಂದು ಹೇಳಿದರು.

ಕರ್ನಾಟಕ ಬಿಹಾರ ಆಗುತ್ತದೆ ಎನ್ನುವ ಹಾವೇರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಅವರ ಹೇಳಿಕೆ ಬಗ್ಗೆ ಕೇಳಿದಾಗ, ‘ಅವರ ಕಾಲದಲ್ಲಿಯೂ ಅನೇಕ ಕೃತ್ಯಗಳು ನಡೆದಿದ್ದವು. ಎಲ್ಲರ ಕಾಲದಲ್ಲೂ ವೈಯಕ್ತಿಕ ಕಾರಣಗಳಿಗೆ ಇವು ನಡೆಯುತ್ತಿರುತ್ತವೆ. ಆದರೆ ರಾಜ್ಯದ ಕಾನೂನು ಸುವ್ಯವಸ್ಥೆ ಹದಗೆಟ್ಟಿಲ್ಲ. ಈ ವಿಚಾರವಾಗಿ ಹಸ್ತಕ್ಷೇಪ ಮಾಡುವುದಿಲ್ಲ. ಪೊಲೀಸರು ತಮ್ಮ ಕೆಲಸ ಮಾಡಲಿದ್ದಾರೆ’ ಎಂದು ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT