ಭಾನುವಾರ, 16 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿನ್ನಾಭರಣ ಅಡವಿಟ್ಟರೂ ಸಿಗದು ಸಾಲ: ಋಣಮುಕ್ತ ಕಾಯ್ದೆಗೆ ಬೆದರಿದ ಲೇವಾದೇವಿದಾರ

Last Updated 26 ಸೆಪ್ಟೆಂಬರ್ 2019, 20:08 IST
ಅಕ್ಷರ ಗಾತ್ರ

ಚಿತ್ರದುರ್ಗ: ಗ್ರಾಮೀಣ ಪ್ರದೇಶದ ಬಡವರ ರಕ್ಷಣೆಗೆ ರಾಜ್ಯ ಸರ್ಕಾರ ಜಾರಿಗೆ ತಂದಿರುವ ‘ಋಣಮುಕ್ತ ಕಾಯ್ದೆ’ಗೆ ಹೆದರಿದ ಗಿರವಿ ಅಂಗಡಿ ಮಾಲೀಕರು ಹಾಗೂ ಲೇವಾದೇವಿದಾರರು ಚಿನ್ನಾಭರಣ ಅಡವಿಟ್ಟು ಸಾಲ ಕೊಡುವ ಪ್ರಕ್ರಿಯೆಯನ್ನು ಬಹುತೇಕ ಸ್ಥಗಿತಗೊಳಿಸಿದ್ದಾರೆ.

ಸಾಲದಿಂದ ‘ಋಣಮುಕ್ತಿ’ ಹೊಂದಲು ಸರ್ಕಾರ ನಿಗದಿಪಡಿಸಿದ ಮಾನದಂಡ ಹಾಗೂ ಕೇಳುತ್ತಿರುವ ದಾಖಲೆಗಳನ್ನು ಒದಗಿಸಲಾಗದೇ ಬಡವರು ಕೂಡ ತೊಳಲಾಡುತ್ತಿದ್ದಾರೆ. ‘ಋಣಮುಕ್ತ’ ಕಾಯ್ದೆಗೆ ನೂರಕ್ಕೂ ಹೆಚ್ಚು ಜನ ಅರ್ಜಿ ಸಲ್ಲಿಸಿದ್ದು, ಸಾಲ ಮನ್ನಾದ ಫಲಾನುಭವಿಗಳಾಗಲು ಕಾತುರರಾಗಿದ್ದಾರೆ.

ಋಣಮುಕ್ತ ಕಾಯ್ದೆ ಜೂನ್‌ 23ರಂದು ಜಾರಿಗೆ ಬಂದಿದೆ. ಬಡ್ಡಿಗೆ ಸಾಲ ನೀಡಿದ ಲೇವಾದೇವಿದಾರರಲ್ಲಿ ಭೀತಿ ಹುಟ್ಟಿದ್ದು, ಕಾಯ್ದೆಯಿಂದ ನುಣುಚಿಕೊಳ್ಳಲು ಹೆಣಗಾಡುತ್ತಿದ್ದಾರೆ. ಅರ್ಜಿ ಸಲ್ಲಿಕೆಗೆ ಫಲಾನುಭವಿಗಳಿಗೆ ಅಗತ್ಯವಿರುವ ದಾಖಲಾತಿ ಸಿಗದಂತೆ ನೋಡಿಕೊಳ್ಳುತ್ತಿದ್ದಾರೆ. ಹೀಗಾಗಿ, ಉಪ ವಿಭಾಗಾಧಿಕಾರಿ ಕಚೇರಿಯಲ್ಲಿ ಅರ್ಜಿ ಪಡೆದವರಲ್ಲಿ ಕೆಲವರು ಮಾತ್ರ ನಮೂನೆಗಳನ್ನು ಮರಳಿಸುತ್ತಿದ್ದಾರೆ.

‘ಋಣಮುಕ್ತ ಕಾಯ್ದೆಯ ಆಶಯವನ್ನು ಕಂಡು ಸಂತಸವಾಗಿತ್ತು. ಸಾಲ ಮನ್ನಾ ಆಗಲಿದೆ ಎಂಬ ಭರವಸೆಯೂ ಹುಟ್ಟಿತ್ತು. ಆದರೆ, ಅರ್ಜಿಯೊಂದಿಗೆ ಕೇಳಿದ ದಾಖಲಾತಿಗಳನ್ನು ಒದಗಿಸಲು ಸಾಧ್ಯವಾಗುತ್ತಿಲ್ಲ. ಯೋಜನೆಯ ಪ್ರತಿಫಲ ಸಿಗುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಮದಕರಿಪುರದ ಉಮೇಶ್‌.

ಸಣ್ಣ ಹಿಡುವಳಿದಾರ, ಖಾಸಗಿ ಉದ್ಯೋಗಿ, ಕೃಷಿ ಕಾರ್ಮಿಕರು ಯೋಜನೆಯ ಪ್ರಯೋಜನ ಪಡೆಯಲು ಅರ್ಹರು. ಸಣ್ಣ ಹಿಡುವಳಿ ಹಾಗೂ ಕೃಷಿ ಕಾರ್ಮಿಕ ಪ್ರಮಾಣ ಪತ್ರವನ್ನು ಅರ್ಜಿಯೊಂದಿಗೆ ಸಲ್ಲಿಸಬೇಕು. ಬಹುತೇಕ ಬಡವರ ಬಳಿ ಇಂಥ ಪ್ರಮಾಣ ಪತ್ರಗಳೇ ಇಲ್ಲ. ಗಿರವಿ ಅಂಗಡಿಯಲ್ಲಿ ಚಿನ್ನಾಭರಣ, ಚೆಕ್‌ ಅಡವಿಟ್ಟು ಪಡೆದ ಸಾಲಕ್ಕೂ ದಾಖಲೆಗಳಿಲ್ಲ. ಅರ್ಜಿ ಸಲ್ಲಿಸಲು ಮುಂದಾದ ಬಡವರ ಮೇಲೆ ಲೇವಾದೇವಿದಾರರು ಒತ್ತಡ ಹೇರುತ್ತಿದ್ದಾರೆ.

ಕಾಯ್ದೆ ಅನುಷ್ಠಾನಗೊಂಡ ಬಳಿಕ ಗಿರವಿ ಅಂಗಡಿಯ ಮಾಲೀಕರು ಚಿನ್ನಾಭರಣ ಅಡವಿಟ್ಟುಕೊಂಡು ಸಾಲ ನೀಡುವ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿದ್ದಾರೆ. ಕೆಲವರು ಅಂಗಡಿಗಳನ್ನು ಮುಚ್ಚಿ, ಸಾಲ ಪಡೆದ ಮನೆಗೆ ಎಡತಾಕುತ್ತಿದ್ದಾರೆ. ಅರ್ಜಿ ಸಲ್ಲಿಸದಂತೆ ಹಾಗೂ ಅಸಲು ಹಣವನ್ನಾದರೂ ಪಾವತಿಸುವಂತೆ ದುಂಬಾಲು ಬೀಳುತ್ತಿದ್ದಾರೆ.

ಬಹುತೇಕ ಗಿರವಿ ಅಂಗಡಿಗಳಲ್ಲಿ ಸಾಲದ ವ್ಯವಹಾರ ಪತ್ರದ ಮೂಲಕ ನಡೆಯುವುದಿಲ್ಲ. ಗಿರವಿ ಇಟ್ಟುಕೊಂಡ ಚಿನ್ನಾಭರಣದ ಪ್ರಮಾಣ ಹಾಗೂ ನೀಡಿದ ಸಾಲಕ್ಕೆ ಚೀಟಿಯೊಂದನ್ನು ನೀಡುತ್ತಾರೆ. ಗ್ರಾಮೀಣ ಪ್ರದೇಶದ ಕೆಲವರು ಚೀಟಿಯ ಬದಲಿಗೆ ಮೌಖಿಕವಾಗಿ ವ್ಯವಹಾರ ಮಾಡುತ್ತಾರೆ. ಇದರಿಂದ ಸರ್ಕಾರ ಕೇಳಿದ ದಾಖಲೆಗಳನ್ನು ಒದಗಿಸಲು ಸಾಲಗಾರರಿಗೆ ಸಾಧ್ಯವಾಗುತ್ತಿಲ್ಲ.

*
ಸಾಲ ನೀಡಿದವರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವುದಕ್ಕೆ ಹೈಕೋರ್ಟ್‌ ತಡೆ ನೀಡಿದೆ. ಅರ್ಜಿ ಸ್ವೀಕರಿಸುತ್ತಿದ್ದು, ಸರ್ಕಾರದ ನಿರ್ದೇಶನಕ್ಕೆ ಕಾಯುತ್ತಿದ್ದೇವೆ.
–ವಿ.ಪ್ರಸನ್ನ, ಉಪ ವಿಭಾಗಾಧಿಕಾರಿ, ಚಿತ್ರದುರ್ಗ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT