ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೀಸಲಾತಿ ಬೇಡಿಕೆ ಪರಿಶೀಲನೆಗೆ ತ್ರಿಸದಸ್ಯ ಸಮಿತಿ ರಚನೆ: ಬಸವರಾಜ ಬೊಮ್ಮಾಯಿ

Last Updated 3 ಮಾರ್ಚ್ 2021, 10:48 IST
ಅಕ್ಷರ ಗಾತ್ರ

ಬೆಂಗಳೂರು: ವಿವಿಧ ಸಮುದಾಯಗಳು ಮೀಸಲಾತಿ ಪ್ರವರ್ಗ ಬದಲಾವಣೆ ಮತ್ತು ಪ್ರಮಾಣ ಹೆಚ್ಚಳಕ್ಕೆ ಇಟ್ಟಿರುವ ಬೇಡಿಕೆ ಕುರಿತು ಪರಿಶೀಲಿಸಲು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ತ್ರಿಸದಸ್ಯ ಸಮಿತಿ ರಚಿಸಲು ಬುಧವಾರ ನಡೆದ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ಸಂಪುಟ ಸಭೆಯ ಬಳಿಕ ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ, 'ಪಂಚಮಸಾಲಿ ಸಮುದಾಯ ಪ್ರವರ್ಗ 2ಎ ಅಡಿಯಲ್ಲಿ ಮೀಸಲಾತಿಗೆ ಬೇಡಿಕೆ ಇಟ್ಟಿದೆ. ಕುರುಬರು ಪರಿಶಿಷ್ಟ ಪಂಗಡಗಳ ಪಟ್ಟಿಗೆ ಸೇರಿಸುವಂತೆ ಕೇಳುತ್ತಿದ್ದಾರೆ. ವಾಲ್ಮೀಕಿ ಸಮುದಾಯ ಎಸ್.ಟಿ ಮೀಸಲಾತಿ ಪ್ರಮಾಣ ಹೆಚ್ಚಳಕ್ಕೆ ಆಗ್ರಹಿಸುತ್ತಿದೆ. ಇನ್ನೂ ಅನೇಕ ಸಮುದಾಯಗಳು ಬೇಡಿಕೆ ಇಟ್ಟಿವೆ. ಈ ಎಲ್ಲ ವಿಷಯಗಳ ಕುರಿತು ತ್ರಿಸದಸ್ಯ ಸಮಿತಿ ಪರಿಶೀಲನೆ ನಡೆಸಿ ವರದಿ ನೀಡಲಿದೆ' ಎಂದರು.

ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಸಮಿತಿಯ ನೇತೃತ್ವ ವಹಿಸಲಿದ್ದಾರೆ. ಒಬ್ಬ ನಿವೃತ್ತ ಅಧಿಕಾರಿ ಮತ್ತು ಸಮಾಜ ವಿಜ್ಞಾನಿ ಸಮಿತಿಯ ಸದಸ್ಯರಾಗಿರುತ್ತಾರೆ. ಸಮಿತಿಯ ಅಧ್ಯಕ್ಷರು ಮತ್ತು ಸದಸ್ಯರ ನೇಮಕಾತಿಯ ಅಧಿಕಾರವನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ನೀಡುವ ತೀರ್ಮಾನವನ್ನು ಸಂಪುಟ ಸಭೆಯಲ್ಲಿ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಸದ್ಯ ಇರುವ ಬೇಡಿಕೆಗಳನ್ನು ಒಪ್ಪಿಕೊಂಡರೆ ಮೀಸಲಾತಿಯ ಪ್ರಮಾಣ ಶೇಕಡ 50 ಮೀರುತ್ತದೆ. ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ಶೇ 50 ಮೀರುವಂತಿಲ್ಲ. ಈ ಬಗ್ಗೆಯೂ ಸಮಿತಿ ಸಲಹೆ ನೀಡಲಿದೆ ಎಂದರು.

ತ್ಯಾಜ್ಯ ವಿಲೇವಾರಿಗೆ ಕಂಪನಿ: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಘನ ತ್ಯಾಜ್ಯ ವಿಲೇವಾರಿಗೆ ಬೆಂಗಳೂರು ಸಾಲಿಡ್ ವೇಸ್ಟ್ ಮ್ಯಾನೇಜ್ಮೆಂಟ್ ಕಂಪನಿ ಸ್ಥಾಪನೆಗೆ ಒಪ್ಪಿಗೆ ನೀಡಲಾಗಿದೆ. ಬಿಬಿಎಂಪಿ ಶೇ 51 ಮತ್ತು ರಾಜ್ಯ ಸರ್ಕಾರದ ಶೇ 49ರಷ್ಟು ಷೇರುಗಳನ್ನು ಹೊಂದಿರಲಿವೆ ಎಂದು ಬೊಮ್ಮಾಯಿ ತಿಳಿಸಿದರು.

ಸ್ವತಂತ್ರವಾಗಿ ಕಂಪನಿಯೇ ಬಿಬಿಎಂಪಿ ಘನ ತ್ಯಾಜ್ಯ ವಿಲೇವಾರಿ ನಿರ್ವಹಣೆ ಮಾಡಲಿದೆ. ರಾಜ್ಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕಂಪನಿಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಾರೆ ಎಂದು ತಿಳಿಸಿದರು.

ಕೆಳಹಂತದ ನ್ಯಾಯಾಲಯಗಳ ಸಿಬ್ಬಂದಿಗೆ 2009ರಿಂದ‌ ಪೂರ್ವಾನ್ವಯವಾಗುವಂತೆ ವೇತನ ಪರಿಷ್ಕರಣೆ, ಸರ್ಕಾರಿ ಹಾಗೂ ಅನುದಾನಿತ ಆಯುಷ್ ವೈದ್ಯಕೀಯ ಕಾಲೇಜು ಮತ್ತು ಫಾರ್ಮಸಿ ಕಾಲೇಜುಗಳ ಬೋಧಕ ಸಿಬ್ಬಂದಿಗೆ ಎಐಸಿಟಿಇ ವೇತನ ಶ್ರೇಣಿ ನೀಡಲು ಸಂಪುಟ ಒಪ್ಪಿಗೆ ನೀಡಿದೆ. ಕಂಪ್ಯೂಟರ್‌ ಶಿಕ್ಷಣ ಪಡೆಯುವ ಸರ್ಕಾರಿ ಸಿಬ್ಬಂದಿಗೆ ₹5,000 ಪ್ರೋತ್ಸಾಹ ಧನ ನೀಡುವ ಯೋಜನೆಯನ್ನು ಸ್ಥಗಿತಗೊಳಿಸುವ ತೀರ್ಮಾನ ಕೈಗೊಳ್ಳಲಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT