ಶುಕ್ರವಾರ, 19 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಡೆಂಗಿ: ವೈದ್ಯಕೀಯ ತುರ್ತು ಪರಿಸ್ಥಿತಿ ಘೋಷಣೆಗೆ ಆಗ್ರಹ

Published 6 ಜುಲೈ 2024, 21:10 IST
Last Updated 6 ಜುಲೈ 2024, 21:10 IST
ಅಕ್ಷರ ಗಾತ್ರ

ಬೆಂಗಳೂರು: ಎಲ್ಲೆಡೆ ವೇಗವಾಗಿ ಹರಡುತ್ತಿರುವ ಡೆಂಗಿ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಕೋವಿಡ್ ಮಾದರಿಯಲ್ಲಿ ಚಿಕಿತ್ಸಾ ವ್ಯವಸ್ಥೆ ಕಲ್ಪಿಸಬೇಕು. ವೈದ್ಯಕೀಯ ತುರ್ತು ಪರಿಸ್ಥಿತಿ ಘೋಷಿಸಬೇಕು ಎಂದು ಬಿಜೆಪಿ ಸಂಸದ ಡಾ.ಸಿ.ಎನ್. ಮಂಜುನಾಥ್‌ ಒತ್ತಾಯಿಸಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡೆಂಗಿ ನಿಯಂತ್ರಣಕ್ಕೆ ನಿಖರವಾದ ಚಿಕಿತ್ಸೆ ಇಲ್ಲ. ಸೊಳ್ಳೆಗಳ ನಿಯಂತ್ರಣವೇ ಕಾಯಿಲೆ ಹರಡುವುದನ್ನು ತಡೆಯಲು ಇರುವ ಪ್ರಮುಖ ಅಂಶ. ಸೊಳ್ಳೆಗಳನ್ನು ನಿಯಂತ್ರಿಸಿದರೆ ಚಿಕುನ್‌ ಗುನ್ಯಾ, ಮಲೇರಿಯಾ ಸೇರಿದಂತೆ ಹಲವು ಕಾಯಿಲೆ ತಡೆಯಬಹುದು ಎಂದರು.

ಸರ್ಕಾರ ನಿಗದಿ ಮಾಡಿದ ದರಕ್ಕಿಂತ ಹೆಚ್ಚು ಹಣ ಪಡೆಯುವ ಆಸ್ಪತ್ರೆ, ಘಟಕ, ಪ್ರಯೋಗಾಲಯಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಅರ್ಧಕ್ಕೆ ನಿಂತ ಕಾಮಗಾರಿ , ಅಂಡರ್‌ ಪಾಸ್‌, ಅಗೆದ ರಸ್ತೆಗಳಲ್ಲಿ ಮಳೆ ಬಂದಾಗ ನೀರು ನಿಲ್ಲುತ್ತದೆ. ಇದರಿಂದ ಸೊಳ್ಳೆ ನಿಯಂತ್ರಣ ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು.

ಆರೋಗ್ಯ, ನಗರಾಭಿವೃದ್ಧಿ ಇಲಾಖೆ, ಪಂಚಾಯಿತಿಗಳು, ಜಿಲ್ಲಾ ಪಂಚಾಯಿತಿ, ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಗಳು ಪರಸ್ಪರ ಸಹಯೋಗದಲ್ಲಿ ಕೆಲಸ ಮಾಡಬೇಕು. ಅದಕ್ಕಾಗಿಯೇ ಪ್ರತ್ಯೇಕ ಕಾರ್ಯಪಡೆ ರಚಿಸಬೇಕು. ಪರಿಣತರ ಸಲಹೆ ಪಡೆಯಬೇಕು. ಮಳೆಗಾಲದ ಸಮಸ್ಯೆಗಳಿಗೆ ಬೇಸಿಗೆ ಕಾಲದಲ್ಲೇ ಪರಿಹಾರ ಕಂಡುಕೊಳ್ಳಬೇಕು. ಸೊಳ್ಳೆ ಉತ್ಪತ್ತಿ ಆಗದಂತೆ ನೋಡಿಕೊಳ್ಳಬೇಕು. ಎಲ್ಲ ಶಾಲಾ–ಕಾಲೇಜುಗಳಿಗೆ ಸುತ್ತೋಲೆ ಕಳಿಸಿ, ಶಾಲಾ ಆಡಳಿತ ಮಂಡಳಿಗಳ ಜೊತೆ ಸಭೆ ನಡೆಸಬೇಕು ಎಂದು ಸಲಹೆ ನೀಡಿದರು.

ರಾಜ್ಯ ಸರ್ಕಾರ ದಿವಾಳಿ ಅಂಚಿನಲ್ಲಿದೆ. ಆರೋಗ್ಯ ಇಲಾಖೆ ಐಸಿಯುಗೆ ಸೇರಿದಂತಿದೆ. ಡೆಂಗಿ ನಿಯಂತ್ರಣಕ್ಕೆ ಸರ್ಕಾರ ಮುಂಜಾಗ್ರತಾ ಕ್ರಮ ವಹಿಸಿಲ್ಲ.
–ಅಶ್ವತ್ಥನಾರಾಯಣ ಬಿಜೆಪಿ ರಾಜ್ಯ ಮುಖ್ಯ ವಕ್ತಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT