ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವೇದ ಕಾಲದಲ್ಲೇ ಪ್ರಜಾಪ್ರಭುತ್ವ: ಸಂವಿಧಾನದ ಮಹತ್ವ ಕುಂದಿಸುವ ಯತ್ನ

ಸಂಕಲ್ಪ ಸಮಾವೇಶದಲ್ಲಿ ಬಂಜಗೆರೆ ಜಯಪ್ರಕಾಶ್ ಅಭಿಮತ
ಫಾಲೋ ಮಾಡಿ
Comments

ಬೆಂಗಳೂರು: ‘ವೇದ ಕಾಲದಲ್ಲೇ ಪ್ರಜಾಪ್ರಭುತ್ವ ಇತ್ತು ಎಂಬ ಸುಳ್ಳು ಹರಡುವ ಮೂಲಕ ಅಂಬೇಡ್ಕರ್ ಮತ್ತು ಸಂವಿಧಾನದ ಮಹತ್ವ ಕುಂದಿಸುವ ಪ್ರಯತ್ನ ನಡೆಯುತ್ತಿದೆ’ ಎಂದು ಲೇಖಕ ಬಂಜಗೆರೆ ಜಯಪ್ರಕಾಶ್ ಕಳವಳ ವ್ಯಕ್ತಪಡಿಸಿದರು.

ಸಂವಿಧಾನ ಸಮರ್ಪಣಾ ದಿನದ ಅಂಗವಾಗಿ ಕರ್ನಾಟಕ ದಲಿತ ಸಂಘರ್ಷ ಸಮಿತಿ(ಭೀಮವಾದ) ಆಯೋಜಿಸಿದ್ದ ಸಂಕಲ್ಪ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

‘ಸರ್ಕಾರದಿಂದ ಸಂವಿಧಾನ ದಿನ ಆಚರಿಸಲು ಪೂರಕವಾಗಿ ಪರಿಕಲ್ಪನಾ ಟಿಪ್ಪಣಿಯನ್ನು ಭಾರತೀಯ ಇತಿಹಾಸ ಸಂಶೋಧನಾ ಪರಿಷತ್(ಐಸಿಎಚ್‌ಆರ್) ಮೂಲಕ ಕೇಂದ್ರ ಸರ್ಕಾರ ಬಿಡುಗಡೆ ಮಾಡಿಸಿದೆ. ಎಲ್ಲಾ ಶಾಲಾ–ಕಾಲೇಜುಗಳಿಗೆ ಇದನ್ನು ಕಳುಹಿಸಲಾಗಿದೆ. ವೇದ ಕಾಲದಲ್ಲೇ ಪ್ರಜಾಪ್ರಭುತ್ವ ಇತ್ತು. ಪ್ರಪಂಚದಲ್ಲಿ ಪ್ರಜಾಪ್ರಭುತ್ವಕ್ಕೆ ಭಾರತವೇ ಜನನಿ, ಭಗವದ್ಗೀತೆಯು ಪ್ರತಿ ವ್ಯಕ್ತಿಗೂ ಘನತೆಯನ್ನು ಕೊಟ್ಟಿದೆ. ಅದೊಂದು ಮಹಾಗ್ರಂಥ ಎಂದು ಬರೆಯಲಾಗಿದೆ’ ಎಂದು ವಿವರಿಸಿದರು.

‘ವೇದಗಳ ಕಾಲದಲ್ಲಿ ಇದ್ದ ಗಣತಂತ್ರದಲ್ಲಿ ದಾಸರು, ಗುಲಾಮರಿಗೆ ಪಾಲ್ಗೊಳ್ಳಲು ಅವಕಾಶ ಇರಲಿಲ್ಲ. ಆದ್ದರಿಂದ ಅದನ್ನು ಕುಲಾದಿಪತ್ಯ ಗಣತಂತ್ರ ಎಂದೇ ಕರೆಯುತ್ತೇವೆ. 1950ರ ಜನವರಿಗೆ 26ರಂದು ಸಂವಿಧಾನ ಜಾರಿಯಾದ ಬಳಿಕವೇ ನಿಜವಾದ ಪ್ರಜಾಪ್ರಭುತ್ವ ರೂಪುಗೊಂಡಿದೆ. ಇದರ ಮಹತ್ವವನ್ನು ಕಡೆಗಣಿಸಲು ವಿತಂಡ ಮತ್ತು ಕುತರ್ಕಗಳನ್ನು ಹುಟ್ಟುಹಾಕಲಾಗುತ್ತಿದೆ. ವೇದಗಳ ಕಾಲದಲ್ಲೇ ಪ್ರಜಾಪ್ರಭುತ್ವ ಇದ್ದಿದ್ದರೆ ಹೊಸ ಸಂವಿಧಾನ ಬರೆಯಬೇಕಾದ ಅನಿವಾರ್ಯತೆ ಇರುತ್ತಿತ್ತೆ’ ಎಂದು ಪ್ರಶ್ನಿಸಿದರು.

ಮೈಸೂರಿನ ಉರಿಲಿಂಗಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ ಮಾತನಾಡಿ, ‘ಈ ರೀತಿ ಸುಳ್ಳುಗಳನ್ನು ಹರಡುವ ಮೂಲಕ ಕೆಂಪು ಕೋಟೆಯನ್ನು ಸುಳ್ಳಿನ ಕೋಟೆ ಮಾಡಲು ಸರ್ಕಾರ ಹೊರಟಿದೆ. ಸಂವಿಧಾನದ ಅಡಿಯಲ್ಲಿ ಶೋಷಿತರು ಸ್ವಾಭಿಮಾನದಿಂದ ಬದುಕುತ್ತಿರುವುದನ್ನು ಸಹಿಸದವರು ಅದನ್ನು ಅಸ್ಥಿರಗೊಳಿಸಲು ಪ್ರಯತ್ನಿಸುತ್ತಲೇ ಇದ್ದಾರೆ. ಈಗಂತೂ ಸಂವಿಧಾನಕ್ಕೆ ರಣಹದ್ದುಗಳ ಕಾಟ ಹೆಚ್ಚಾಗಿದೆ. ಸಂವಿಧಾನ ಕಾಪಾಡಿಕೊಳ್ಳಲು ಭೀಮವಾದ ಗಟ್ಟಿಗೊಳ್ಳಬೇಕಿದೆ’ ಎಂದು ಹೇಳಿದರು.

‘ಸೂಚನಾ ಪತ್ರ ಹರಿದು ಪ್ರತಿಭಟನೆ’

ಸಂವಿಧಾನ ಸಮರ್ಪಣಾ ದಿನವನ್ನು ಭಾರತ –ಲೋಕತಂತ್ರದ ಜನನಿ ಎಂಬ ಹೆಸರಿನಲ್ಲಿ ಆಚರಿಸಲು ಹೊರಡಿಸಿರುವ ಸೂಚನಾ ಪತ್ರವನ್ನು ಹರಿದು ಪ್ರತಿಭಟನೆ ನಡೆಸಲು ದಲಿತ ಸಂಘರ್ಷ ಸಮಿತಿಗಳ ಐಕ್ಯ ಹೋರಾಟ ಚಾಲನಾ ಸಮಿತಿ ಕರೆ ನೀಡಿದೆ.

‘ಡಾ. ಬಿ.ಆರ್. ಅಂಬೇಡ್ಕರ್ ರಚಿಸಿದ ಸಂವಿಧಾನವನ್ನು 1949ರ ನವೆಂಬರ್ 26ರಂದು ಸಮರ್ಪಿಸಿದರು. ಆ ದಿನದ ನೆನಪಿಗೆ ಸಂವಿಧಾನ ಸಮರ್ಪಣಾ ದಿನವನ್ನಾಗಿ ಆಚರಿಸಲಾಗುತ್ತಿದೆ. ಇದನ್ನು ಅಣಕಿಸುವ ರೀತಿಯಲ್ಲಿ ವೇದಗಳ ಕಾಲದಲ್ಲೇ ಪ್ರಜಾಪ್ರಭುತ್ವ ಇತ್ತು ಎಂಬ ಹಸಿ ಸುಳ್ಳು ಹೇಳಲು ಹೊರಟಿದೆ ಕೇಂದ್ರ ಸರ್ಕಾರ ಹೊರಟಿದೆ’ ಎಂದು ಸಮಿತಿ ಆರೋಪಿಸಿದೆ.

‘ಭಾರತ –ಲೋಕತಂತ್ರದ ಜನನಿ ಎಂಬ ಹೆಸರಿನಲ್ಲಿ ದೇಶಾದ್ಯಂತ ಎಲ್ಲಾ ರಾಜ್ಯ ಸರ್ಕಾರಗಳು, ವಿಶ್ವವಿದ್ಯಾಲಯಗಳು ಹಾಗೂ ಕೇಂದ್ರ ಕಚೇರಿಗಳು ಆಚರಿಸಬೇಕೆಂದು ಸೂಚನೆ ಹೊರಡಿಸಿದೆ. ಹೀಗೆ ನೀಡಿರುವ ಸೂಚನೆಯಲ್ಲಿ ಎಲ್ಲಿಯೂ ಅಂಬೇಡ್ಕರ್ ಅವರನ್ನು ನೆನಪಿಸಿಕೊಳ್ಳದೆ ಅವಮಾನಿಸಿದೆ. ಭಾರತದ ಪ್ರಜಾಪ್ರಭುತ್ವ ಕಲ್ಪನೆಯ ಮೂಲವನ್ನುಅಂಬೇಡ್ಕರ್ ಅವರು ಬೌದ್ಧ ಧಮ್ಮದಲ್ಲಿ ಕಂಡಿದ್ದರು. ಕೇಂದ್ರ ಸರ್ಕಾರದ ಟಿಪ್ಪಣಿಯಲ್ಲಿ ಬುದ್ಧನ ಹೆಸರನ್ನೇ ಪ್ರಸ್ತಾಪಿಸಿಲ್ಲ. ಈ ಕೃತ್ಯ ಖಂಡಿಸಿ ಇಡೀ ಸೂಚನಾ ಪತ್ರವನ್ನು ಹರಿದು ಸ್ವಾತಂತ್ರ್ಯ ಉದ್ಯಾನದಲ್ಲಿ ಶನಿವಾರ ಬೆಳಿಗ್ಗೆ 11 ಗಂಟೆಗೆ ಪ್ರತಿಭಟನೆ ನಡೆಸಲಾಗುವುದು’ ಎಂದು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT