ಭಾನುವಾರ, 15 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಯಾರೇ ವಿರೋಧಿಸಿದರೂ ಬೆಂಗಳೂರಲ್ಲಿ ನೀರಿನ ದರ ಏರಿಕೆ ಅನಿವಾರ್ಯ: ಡಿ.ಕೆ.ಶಿವಕುಮಾರ್

Published : 22 ಆಗಸ್ಟ್ 2024, 9:53 IST
Last Updated : 22 ಆಗಸ್ಟ್ 2024, 19:44 IST
ಫಾಲೋ ಮಾಡಿ
Comments

ಬೆಂಗಳೂರು: ‘ಯಾವುದೇ ಆಕ್ಷೇಪ ವ್ಯಕ್ತಪಡಿಸಿದರೂ ನಗರದಲ್ಲಿ ನೀರಿನ ದರ ಏರಿಕೆ  ಮಾಡುತ್ತೇವೆ. ಹಾಗೆಂದು, ಎಲ್ಲರಿಗೂ ನೀರಿನ ದರ ಹೆಚ್ಚಳ ಮಾಡುವುದಿಲ್ಲ. ಎಷ್ಟು ಏರಿಕೆ ಮಾಡಬೇಕೆಂದು ಇನ್ನೂ ನಿರ್ಧರಿಸಿಲ್ಲ’ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.

ವಿಧಾನಸೌಧದ ಆವರಣದಲ್ಲಿ ಗುರುವಾರ ನಡೆದ ‘ಬಾಗಿಲಿಗೆ ಬರಲಿದೆ ಕಾವೇರಿ ಸಂಪರ್ಕ, 110 ಹಳ್ಳಿಗಳಿಗೆ ಕಾವೇರಿ ನೀರಿನ ಸಂಪರ್ಕ’ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ‘ಕಳೆದ 12-13 ವರ್ಷಗಳಿಂದ ಬೆಂಗಳೂರಿನಲ್ಲಿ ನೀರಿನ ದರ ಹೆಚ್ಚಿಸಿಲ್ಲ’ ಎಂದರು.

‘ರಾಜಧಾನಿಯ 1.40 ಕೋಟಿ ಜನಸಂಖ್ಯೆಗೆ ನೀರನ್ನು ಒದಗಿಸಲೇಬೇಕು. ಇದಕ್ಕಾಗಿ ಸಾಲ ಮಾಡಿ, ಸಂಪರ್ಕ ಜಾಲವನ್ನು ಹೆಚ್ಚಿಸದ ಹೊರತು ನೀರು ಪೂರೈಸಲು ಕಷ್ಟವಾಗುತ್ತದೆ. ದರ ಹೆಚ್ಚಳ ಮಾಡದಿದ್ದರೆ ನೀರು ಸರಬರಾಜು ಕಂಪನಿ ಉಳಿಯುವುದಿಲ್ಲ. ನೌಕರರು ಬದುಕಲು ಆಗುವುದಿಲ್ಲ. ಸಂಸ್ಥೆಗೆ ವಿದ್ಯುತ್ ಬಿಲ್ ಕಟ್ಟಲು ಆಗುತ್ತಿಲ್ಲ’ ಎಂದು ಹೇಳಿದರು.

‘ನಾನಿರುವ ತನಕ ಖಾಸಗೀಕರಣ ಆಗುವುದಿಲ್ಲ’

‘ಬಿಡಬ್ಲ್ಯೂಎಸ್‌ಎಸ್‌ಬಿ ನನ್ನ ಬಳಿಯೇ ಇರುವ ಕಾರಣ ಅನೇಕರು ನೂತನ ಯೋಜನೆ ಕುರಿತು ಚರ್ಚೆ ನಡೆಸಲು ಬಂದರು. ಈ ಹಿಂದೆ ಇಂಧನ ಇಲಾಖೆಯಲ್ಲಿ ಇದ್ದಾಗಲು ಇದೇ ಪ್ರಸ್ತಾವ ಬಂದಿತ್ತು. ಮುಂಬೈ ಸೇರಿದಂತೆ ಇತರೆಡೆ ಅದಾನಿ ಹಾಗೂ ಇತರೇ ಕಂಪೆನಿಗಳು ವಿದ್ಯುತ್ ಸರಬರಾಜು ಮಾಡುತ್ತಿವೆ. ನಾನು ಇರುವ ತನಕ ಅದೆಲ್ಲವೂ ಸಾಧ್ಯವಿಲ್ಲ’ ಎಂದರು.

‘ಜಲ ಹಾಗೂ ಇಂಧನ ಇವೆರಡೂ ಬಹಳ ಮುಖ್ಯವಾದವುಗಳು. ಈ ಹಿಂದೆ ನಾನು ಇಂಧನ ಸಚಿವನಾಗಿದ್ದೆ. ಜೆ. ಎಚ್ ಪಟೇಲ್ ಅವರ ಕಾಲದಲ್ಲಿ ನೀರು ಸರಬರಾಜನ್ನು ಖಾಸಗಿಯವರಿಗೆ ನೀಡಬೇಕು ಎನ್ನುವ ಪ್ರಸ್ತಾವ ಬಂದಿತ್ತು. ನಂತರ ಎಸ್.ಎಂ. ಕೃಷ್ಣ ಅವರ ಸರ್ಕಾರದಲ್ಲಿ ನಾನು ನಗರಾಭಿವೃದ್ಧಿ ಸಚಿವನಾಗಿದ್ದಾಗಲೂ ಈ ಬಗ್ಗೆ ದೊಡ್ಡ ಚರ್ಚೆಯಾಯಿತು’ ಎಂದು ನೆನಪಿಸಿದರು.

‘ಸದನದಲ್ಲಿ ನಾಣಯ್ಯನವರು ವ್ಯಾಪಕವಾಗಿ ಚರ್ಚೆ ಮಾಡಿದರು. ಆಗ ಎಸ್.ಎಂ. ಕೃಷ್ಣ ಅವರು ನನ್ನನ್ನು ಹೊರದೇಶಕ್ಕೆ ಕಳುಹಿಸಿ ನೀರು ಸರಬರಾಜನ್ನು ಖಾಸಗಿಕರಣದ ಬಗ್ಗೆ ಅಧ್ಯಯನ ಮಾಡುವಂತೆ ತಿಳಿಸಿದ್ದರು. ನಾನು ಫ್ರಾನ್ಸ್ ಮತ್ತಿತರ ದೇಶಗಳಿಗೆ ಹೋಗಿದ್ದೆ. ನಮ್ಮಲ್ಲಿರುವ ಬಿಡಬ್ಲ್ಯೂಎಸ್‌ಎಸ್‌ಬಿ ಎಂಜಿನಿಯರ್‌ಗಳು ಹೊರ ದೇಶದಲ್ಲಿರುವ ಎಂಜಿನಿಯರ್‌ಗಳಿಗಿಂತ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಎಸ್.ಎಂ. ಕೃಷ್ಣ ಅವರಿಗೆ ಹೇಳಿದೆ. ಅಲ್ಲಿಂದ ಬಂದವರು ನಮ್ಮವರ ಬಳಿಯೇ ಕೆಲಸ ಮಾಡಿಸುತ್ತಾರೆ. ನೀರಿನ ಪೈಪ್ ಲೈನ್ ಬದಲಾಯಿಸಿ ಹೊಸ ವ್ಯವಸ್ಥೆ ಮಾಡುತ್ತೇವೆ ಎಂದು ಹೇಳಿ ಶೇ 30ರಷ್ಟು ಹೆಚ್ಚು ವೆಚ್ಚ ಕೇಳುತ್ತಾರೆ. ಆ ವ್ಯವಸ್ಥೆ ನಮ್ಮ ರಾಜ್ಯಕ್ಕೆ ಅನುಕೂಲಕರವಾಗಿಲ್ಲ. ದೆಹಲಿ, ಮುಂಬೈಗೆ ಸೂಕ್ತವಾಗಿದೆ ಎಂದು ವರದಿ ನೀಡಿದೆ. ಖಾಸಗೀಕರಣದ ಬಗ್ಗೆ ವ್ಯಾಪಕ ಖಂಡನೆ ವ್ಯಕ್ತವಾದ ಕಾರಣ ಆ ಪ್ರಸ್ತಾವ ಕೈ ಬಿಡಲಾಯಿತು’ ಎಂದರು.

ರಾಜ್ಯಪಾಲರ ಮೇಲೆ ಬಿಜೆಪಿ, ಜೆಡಿಎಸ್‌ನವರೇ ಕಲ್ಲು ಎಸೆಯಬಹುದು
‘ರಾಜ್ಯಪಾಲರು ಬುಲೆಟ್ ಪ್ರೂಫ್ ಕಾರಿನಲ್ಲಿ ಓಡಾಡಲು ಕಾಂಗ್ರೆಸ್ ಕಾರಣ’ ಎನ್ನುವ ಬಗ್ಗೆ ಕೇಳಿದಾಗ ‘ಬಿಜೆಪಿ, ಜೆಡಿಎಸ್‌ನ ಕಿಡಿಗೇಡಿಗಳು ಕಲ್ಲು ಹೊಡಯಬಹುದು ಎನ್ನುವ ಕಾರಣಕ್ಕೆ ಪೊಲೀಸ್ ಅವರು ರಕ್ಷಣೆಗಾಗಿ ಈ ಕ್ರಮ ತೆಗೆದುಕೊಂಡಿದ್ದಾರೆ. ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಕಾನೂನು ಸುವ್ಯವಸ್ಥೆ ಹಾಳು ಮಾಡಲು ಬಿಜೆಪಿ, ದಳ ಪ್ರಯತ್ನಿಸುತ್ತಿದೆ ಎನ್ನುವ ಮಾಹಿತಿ ನಮಗಿದೆ. ನಮಗೆ ರಾಜ್ಯಪಾಲರ ಮೇಲೆ ಗೌರವವಿದೆ. ಆದ ಕಾರಣ ಅವರಿಗೆ ರಕ್ಷಣೆ ನೀಡಲಾಗಿದೆ’ ಎಂದರು. ಕಾಂಗ್ರೆಸ್ ರಾಜ್ಯಪಾಲರಿಗೆ ಅವಮಾನಿಸಿದ್ದನ್ನು ವಿರೋಧಿಸಿ ಬಿಜೆಪಿ ಪ್ರತಿಭಟನೆ ಹಮ್ಮಿಕೊಂಡಿರುವ ಬಗ್ಗೆ ಕೇಳಿದಾಗ, ‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನನ್ನನ್ನು, ನಿಮ್ಮನ್ನು ಯಾರನ್ನು ಬೇಕಾದರೂ ಟೀಕೆ ಮಾಡಬಹುದು. ಯಾರಿಗೆ ಯಾವ ಗೌರವ ಕೊಡಬೇಕೋ ಅದನ್ನು ಖಂಡಿತ ಕೊಡಲೇಬೇಕು. ಘನವೆತ್ತ ರಾಜ್ಯಪಾಲರಿಗೆ ನಾವು ಖಂಡಿತಾ ಗೌರವ ನೀಡುತ್ತೇವೆ’  ಎಂದು ಹೇಳಿದರು.

‘ನ್ಯಾಯ ಸಿಗುವ ನಂಬಿಕೆ ಇದೆ‘

‘ನಾನು ಅಧಿಕಾರ ವಹಿಸಿಕೊಂಡ ತಕ್ಷಣ 6 ಎಂಎಲ್‌ಡಿ ನೀರು ಸರಬರಾಜನ್ನು ಹೆಚ್ಚಳ ಮಾಡಲಾಗಿದೆ. ತಮಿಳುನಾಡಿಗೆ ನಿಗದಿತ ನೀರಿಗಿಂತ 100 ಟಿಎಂಸಿ ಅಡಿ ಹೆಚ್ಚುವರಿ ಕಾವೇರಿ ನೀರನ್ನು ಹರಿಸಲಾಗಿದೆ. ನಮ್ಮಲ್ಲಿ ಹೆಚ್ಚುವರಿ ನೀರನ್ನು ಹಿಡಿದಿಟ್ಟುಕೊಳ್ಳಲು ಆಗುವುದಿಲ್ಲ. ನಮ್ಮಲ್ಲಿ ಮತ್ತೊಂದು ಅಣೆಕಟ್ಟು ಇರುತ್ತಿದ್ದರೆ ತಮಿಳುನಾಡಿನವರಿಗೆ ಹೆಚ್ಚು ಅನುಕೂಲವಾಗುತ್ತಿತ್ತು. ಮೇಕೆದಾಟು ಯೋಜನೆ ವಿಷಯದಲ್ಲಿ ನ್ಯಾಯಾಲಯದಲ್ಲಿ ನಮಗೆ ನ್ಯಾಯ ಸಿಗುವ ವಿಶ್ವಾಸವಿದೆ’ ಎಂದರು.

‘ಕೆಆರ್‌ಎಸ್‌ನಿಂದ ನೇರವಾಗಿ ನಗರಕ್ಕೆ ನಿಗದಿಯಾದ ನೀರನ್ನು ತರಬಹುದು ಎಂದು ಒಂದಷ್ಟು ಜನ ವರದಿ ಕೊಟ್ಟಿದ್ದಾರೆ. ಶರಾವತಿಯಿಂದ ನೀರು ತರಬೇಕು ಎನ್ನುವ ಆಲೋಚನೆಯಿದೆ. ಅಲ್ಲಿನ ಸ್ಥಳೀಯರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಎತ್ತಿನಹೊಳೆ ಯೋಜನೆ ರಾಜಕಾರಣದಿಂದ ಅಲ್ಲಲ್ಲಿ ಬೇರೆ, ಬೇರೆ ಕಡೆ ತಿರುವು ಪಡೆದುಕೊಂಡಿದೆ. ಇದನ್ನೂ ಒಂದು ಹಂತಕ್ಕೆ ತಲುಪಿಸಿದ್ದೇನೆ. ಕಾವೇರಿ 5ನೇ ಹಂತದ ಕಾಮಗಾರಿಗೆ ಸ್ಥಗಿತಗೊಂಡಿದ್ದು, ಮತ್ತೆ ಚಾಲನೆ ಮಾಡಲಾಗುವುದು’ ಎಂದು ತಿಳಿಸಿದರು.

‘ಕಾಲುವೆಗಳಲ್ಲಿ ನೀರನ್ನು ಕೊನೆಯ ಹಂತಕ್ಕೆ ತಲುಪಿಸಬೇಕು ಎಂದು ಕಾಲುವೆಗಳ ಅಕ್ಕ ಪಕ್ಕ ಅರ್ಧ ಕಿ.ಮೀ ವ್ಯಾಪ್ತಿಯಲ್ಲಿ ಯಾವುದೇ ಕೊಳವೆ ಬಾವಿಗಳನ್ನು ಹಾಕುವಂತಿಲ್ಲ ಹಾಗೂ ಪಂಪ್ ಮೂಲಕ ನೀರು ಎತ್ತುವಂತೆಯೂ ಇಲ್ಲ ಎನ್ನುವ ಕಾನೂನು ತರಲಾಗಿದೆ’ ಎಂದರು.

‘ಅಂತರ್ಜಲ ಹೆಚ್ಚಳ ಮಾಡಲು ಕೆರೆ ಅಭಿವೃದ್ದಿ ಸಮಿತಿ ಜೊತೆ ಕೆಲಸ ಮಾಡಬೇಕಿದೆ. ಕಳೆದ ವರ್ಷದ ಬರಗಾಲದ ಸಮಯದಲ್ಲಿ ಬೆಂಗಳೂರಿನಲ್ಲಿ ಏಳು ಸಾವಿರ ಕೊಳವೆ ಬಾವಿಗಳು ಬತ್ತಿ ಹೋಗಿದ್ದರೂ ಹೆಚ್ಚು ಶ್ರಮ ಹಾಕಿ ಕೆಲಸ ಮಾಡಿ ಸರ್ಕಾರಕ್ಕೆ ಕೆಟ್ಟ ಹೆಸರು ಬರದಂತೆ ನೋಡಿಕೊಂಡ ನೌಕರರಿಗೆ ಅಭಾರಿಯಾಗಿದ್ದೇನೆ’ ಎಂದು ಹೇಳಿದರು.

‘ದರ ಏರಿಸಿದರೆ ಹೋರಾಟ’

ಮಂಡ್ಯ: ‘ರಾಜ್ಯದಲ್ಲಿ ಪೆಟ್ರೋಲ್‌, ಹಾಲಿನ ದರ ಹೆಚ್ಚಿಸಿದ್ದಾಯ್ತು. ಈಗ ನೀರಿನ ದರ ಹೆಚ್ಚಿಸಲು ಹೊರಟಿದ್ದಾರೆ. ನೌಕರರಿಗೆ ಸಂಬಳ ಮತ್ತು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಕೊಡೋಕು ದುಡ್ಡಿಲ್ಲದೆ ರಾಜ್ಯ ಸರ್ಕಾರ ಪಾಪರ್‌ ಆಗಿದೆ’ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಆರ್‌.ಅಶೋಕ್‌ ವಾಗ್ದಾಳಿ ನಡೆಸಿದರು.

ನಗರದಲ್ಲಿ ಗುರುವಾರ ಬಿಜೆಪಿ ಏರ್ಪಡಿಸಿದ್ದ ಪ್ರತಿಭಟನೆಯಲ್ಲಿ ಮಾತನಾಡಿ, ‘ಗ್ಯಾರಂಟಿ ಯೋಜನೆಗಳಿಗೂ ಹಣವಿಲ್ಲ. ಅದನ್ನು ನಿಲ್ಲಿಸಿದರೆ ರಾಷ್ಟ್ರಮಟ್ಟದಲ್ಲೂ ಪಕ್ಷಕ್ಕೆ ತೊಂದರೆಯಾಗುತ್ತದೆ ಎಂದು ಪಕ್ಷದ ವರಿಷ್ಠರು ತಿಳಿಸಿದ್ದಾರೆ. ನೀರಿನ ದರ ಹೆಚ್ಚಿಸುತ್ತಿರುವುದು ದೊಡ್ಡ ಅಪರಾಧ. ಅದರ ವಿರುದ್ಧ ದೊಡ್ಡ ಹೋರಾಟ ಮಾಡುತ್ತೇವೆ’ ಎಂದರು.

‘ಹಗರಣವಾದರೂ ಸಿದ್ದರಾಮಯ್ಯ ರಾಜೀನಾಮೆ ಕೊಡಲ್ಲ ಅಂತಾರೆ. ಡಿ.ಕೆ.ಶಿವಕುಮಾರ್ ನೀರಿನ ದರ ಹೆಚ್ಚಿಸುತ್ತೇವೆ ಅಂತಾರೆ. ಸರ್ಕಾರ ಹೆಚ್ಚು ದಿನ ಇರಲ್ಲ ಅನ್ನುವುದು ಅವರಿಗೆ ಗ್ಯಾರಂಟಿಯಾಗಿದೆ. ಹೀಗಾಗಿ ಅಧಿಕಾರದಲ್ಲಿರುವ ಅಷ್ಟೂ ದಿನ ಲೂಟಿ ಮಾಡೋಕೆ ನಿಂತಿದ್ದಾರೆ. ತುಘಲಕ್‌ ಆಡಳಿತ ನಡೆಸುತ್ತಿದ್ದಾರೆ. ಕಾಂಗ್ರೆಸ್‌ ಪಕ್ಷದ್ದು ಮುಗಿದ ಕತೆ’ ಎಂದು ಜರಿದರು.

‘ದೇವೇಗೌಡರ ಕುಟುಂಬವನ್ನು ಬಹಳ ದಿನಗಳಿಂದ ಕಾಂಗ್ರೆಸ್‌ ನಾಯಕರು ದ್ವೇಷಿಸುತ್ತಿದ್ದಾರೆ. ರೇವಣ್ಣ ಅವರನ್ನು ಜೈಲಿಗೆ ಹಾಕಿದ್ದಾಯ್ತು. ಈಗ ಕುಮಾರಸ್ವಾಮಿಯನ್ನು ಗುರಿಯಾಗಿಸಿಕೊಂಡಿದ್ದಾರೆ. ಆದರೆ ಅವರೊಂದಿಗೆ ನಾವಿದ್ದೇವೆ’ ಎಂದರು.

ದರ ಹೆಚ್ಚಿಸದೆ ನೀರು ಪೂರೈಸಿ: ಮೋಹನ್ ದಾಸರಿ

ಕುಡಿಯುವ ನೀರಿನ ದರ ಏರಿಕೆ ಮಾಡದೆ ನಗರದ ಜನರಿಗೆ ನೀರಿನ ಪೂರೈಕೆ ಮಾಡಲು ಅಸಾಧ್ಯ ವೆನಿಸಿದರೆ ಬೆಂಗಳೂರು ‌ಅಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್ ಅವರು ಕೂಡಲೇ ರಾಜೀನಾಮೆ ನೀಡಲಿ ಎಂದು ಆಮ್‌ ಅದ್ಮಿ ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಮೋಹನ್ ದಾಸರಿ ಆಗ್ರಹಿಸಿದ್ದಾರೆ.

‘ಮೈಸೂರು ಮಹಾರಾಜರ ರೀತಿಯಲ್ಲಿ ತಮ್ಮ ಆಸ್ತಿಪಾಸ್ತಿಗಳನ್ನೆಲ್ಲ ಅಡವಿಟ್ಟು ಬೆಂಗಳೂರಿಗೆ ನೀರು ಪೂರೈಕೆ ಮಾಡುತ್ತಿದ್ದೇನೆಂಬ ಅಹಂ ಭಾವದಲ್ಲಿ ಡಿ.ಕೆ.ಶಿವಕುಮಾರ್ ಇದ್ದಂತೆ ಕಾಣುತ್ತಿದೆ. ನೀರು ಪೂರೈಕೆ ಮಾಡುವುದು ಸರ್ಕಾರದ ಕರ್ತವ್ಯ. ಬೆಂಗಳೂರಿಗೆ ಸಂಬಂಧವಿಲ್ಲದವರು ಬೆಂಗಳೂರು ಅಭಿವೃದ್ಧಿ ಮಾಡಲು ಹೊರಟಾಗ ಈ ರೀತಿ ಆಗುತ್ತದೆ’ ಎಂದು ಪತ್ರಿಕಾ ಹೇಳಿಕೆಯಲ್ಲಿ ಟೀಕಿಸಿದ್ದಾರೆ.

‘ಮೇಕೆದಾಟು ಹೆಸರಿನಲ್ಲಿ ಪಾದಯಾತ್ರೆ ಮಾಡುವ ಮೂಲಕ ಅಧಿಕಾರ ಪಡೆದುಕೊಂಡ ಶಿವಕುಮಾರ್, ಈ ಕೂಡಲೇ ನಗರದ ಜನರ ಕ್ಷಮೆಯಾಚಿಸ ಬೇಕು. ಇಲ್ಲದಿದ್ದಲ್ಲಿ ಆಮ್ ಆದ್ಮಿ ಪಕ್ಷ ಹೋರಾಟ ಆರಂಭಿಸುತ್ತದೆ. ಬೆಂಗಳೂರು ಜಲಮಂಡಳಿಯ ವ್ಯಾಪಕ ಭ್ರಷ್ಟಾಚಾರಗಳನ್ನು ತಡೆಗಟ್ಟುವುದನ್ನು ಬಿಟ್ಟು, ಕುಡಿಯುವ ನೀರಿನ ದರ ಹೆಚ್ಚಿಸಲು ಸರ್ಕಾರ ಮುಂದಾದಲ್ಲಿ ಪಕ್ಷದ ವತಿಯಿಂದ ಹೋರಾಟ ನಡೆಸಲಾಗುವುದು’ ಎಂದು ಅವರು ಎಚ್ಚರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT