ಬೆಂಗಳೂರು: ರಾಜ್ಯದಲ್ಲಿ ದೇವದಾಸಿ ಪದ್ಧತಿಯನ್ನು ನಿರ್ಮೂಲನೆ ಮಾಡುವ, ದೇವದಾಸಿಗೆ ಜನಿಸಿದ ಮಗು ತನ್ನ ತಂದೆಯನ್ನು ಗುರುತಿಸಲು (ಪಿತೃತ್ವ) ಹಕ್ಕು ಮತ್ತು ಸಮಗ್ರ ಪುನವರ್ಸತಿ ಕಲ್ಪಿಸಲು ಅವಕಾಶ ನೀಡುವ ‘ಕರ್ನಾಟಕ ದೇವದಾಸಿ ಪದ್ಧತಿ (ತಡೆಗಟ್ಟುವಿಕೆ, ನಿಷೇಧ, ಪರಿಹಾರ ಮತ್ತು ಪುನರ್ವಸತಿ) ಮಸೂದೆ– 2025’ ಅನ್ನು ರಾಜ್ಯ ಸರ್ಕಾರ ಸಿದ್ಧಪಡಿಸಿದೆ.

ಆ ಮೂಲಕ, ದೇವದಾಸಿ ಮಹಿಳೆಯರನ್ನು ಎಲ್ಲ ರೀತಿಯ ಶೋಷಣೆಗಳಿಂದ ಹಾಗೂ ಅವರ ಮಕ್ಕಳನ್ನು ಸಾಮಾಜಿಕ ನಿಷೇಧದಿಂದ ಮುಕ್ತಗೊಳಿಸುವ ದಿಸೆಯಲ್ಲಿ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ.

ರಾಷ್ಟ್ರೀಯ ಕಾನೂನು ಶಾಲೆಯ ಸಾಮಾಜಿಕ ಒಳಗೊಳ್ಳುವಿಕೆ ಅಧ್ಯಯನ ಕೇಂದ್ರ ಸಿದ್ಧಪಡಿಸಿರುವ ಕರಡು ಮಸೂದೆಗೆ ಸಂಬಂಧಿಸಿದಂತೆ 20 ಇಲಾಖೆಗಳ ಜೊತೆ ಸಮಾಲೋಚನೆ ನಡೆಸಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಈ ಮಸೂದೆಗೆ ಅಂತಿಮ ರೂಪ ನೀಡಿದೆ. ಕಾನೂನು ಮತ್ತು ಸಂಸದೀಯ ಇಲಾಖೆಯು ಈ ಮಸೂದೆಯನ್ನು ಪರಿಶೀಲನೆ ನಡೆಸಿದ್ದು, ಶೀಘ್ರದಲ್ಲೇ ಸಚಿವ ಸಂಪುಟ ಸಭೆಯಲ್ಲಿ ಮಂಡನೆಯಾಗಲಿದೆ.

ಮುಂಬರುವ ವಿಧಾನ ಮಂಡಲ ಅಧಿವೇಶನದಲ್ಲಿ ಮಸೂದೆಯನ್ನು ಮಂಡಿಸಲು ಚಿಂತನೆ ನಡೆದಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೂಲಗಳು ತಿಳಿಸಿವೆ.

ಹೊಸ ಮಸೂದೆಯ ಕಾರಣಕ್ಕೆ ‘ಕರ್ನಾಟಕ ದೇವದಾಸಿಯರ (ಸಮರ್ಪಣಾ ನಿಷೇಧ) ಕಾಯ್ದೆ– 1982’ ಮತ್ತು ‘ಕರ್ನಾಟಕ ದೇವದಾಸಿಯರ (ಸಮರ್ಪಣಾ ನಿಷೇಧ) (ತಿದ್ದುಪಡಿ) ಕಾಯ್ದೆ, 2009’ ರದ್ದುಗೊಳ್ಳಲಿವೆ.

ಬಾಗಲಕೋಟೆ, ಬಳ್ಳಾರಿ, ಬೆಳಗಾವಿ, ವಿಜಯಪುರ, ಚಿತ್ರದುರ್ಗ, ದಾವಣಗೆರೆ, ಧಾರವಾಡ, ಗದಗ, ಕಲಬುರಗಿ, ಹಾವೇರಿ, ಕೊಪ್ಪಳ, ರಾಯಚೂರು, ಶಿವಮೊಗ್ಗ, ಯಾದಗಿರಿ, ವಿಜಯನಗರ ಈ ಜಿಲ್ಲೆಗಳಲ್ಲಿ ದೇವದಾಸಿಯರಿದ್ದಾರೆ.

ಮಸೂದೆಯಲ್ಲಿ ಏನಿದೆ?:

ನಾಗರಿಕ ಸಮಾಜದಲ್ಲಿ ಜಾಗೃತಿ ಮೂಡಿಸುವುದರ ಜೊತೆಗೆ, ದಮನಿತ ದೇವದಾಸಿ ಮಹಿಳೆಯರನ್ನು ಎಲ್ಲ ರೀತಿಯ ಶೋಷಣೆಗಳಿಂದ, ಅವರ ಮಕ್ಕಳನ್ನು ಸಾಮಾಜಿಕ ನಿಷೇಧದಿಂದ ಮುಕ್ತಗೊಳಿಸಿ ಸಬಲೀಕರಣಗೊಳಿಸುವುದು ಮಸೂದೆಯ ಉದ್ದೇಶ. ಅಲ್ಲದೆ ಅಂತಹ ಮಕ್ಕಳ ಜೈವಿಕ ತಂದೆಯನ್ನು ವಿಶೇಷ ಕಾನೂನಿನಡಿ ಹೊಣೆಗಾರರನ್ನಾಗಿ ಮಾಡಲು ಸಾಕ್ಷ್ಯಗಳನ್ನು ಒದಗಿಸುವ ಪ್ರಸ್ತಾವ ಈ ಮಸೂದೆಯಲ್ಲಿದೆ. ದೇವದಾಸಿ ಕುಟುಂಬಕ್ಕೆ ಸಮಗ್ರ ಪುನರ್ವಸತಿ ಮತ್ತು ದೇವದಾಸಿ ಪದ್ಧತಿಯ ಸಂಪೂರ್ಣ ನಿರ್ಮೂಲನೆಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆಯೂ ವಿವರಿಸಲಾಗಿದೆ.

‘ದೇವದಾಸಿ ಕುಟುಂಬ’ವು ದೇವದಾಸಿ ಮತ್ತು ದೇವದಾಸಿಯ ಎರಡನೇ ತಲೆಮಾರಿನವರೆಗಿನ ವಂಶಾವಳಿಯನ್ನು ಒಳಗೊಂಡಿದೆ ಮತ್ತು ಅವರಿಗೆ ಸೀಮಿತವಾಗಿ ಇರಲಿದೆ. ಅಂದರೆ, ದೇವದಾಸಿ ಮಕ್ಕಳು ಮತ್ತು ಆಕೆಯ ಮೊಮ್ಮಕ್ಕಳು. ಪ್ರತಿಯೊಬ್ಬ ದೇವದಾಸಿ ಮತ್ತು ಅವಳ ಮಗುವು ಎಲ್ಲ ರೀತಿಯಿಂದ ಮತ್ತು ನ್ಯಾಯಾಂಗ ಪ್ರಕ್ರಿಯೆಯ ಉದ್ದಕ್ಕೂ ಗೋಪ್ಯತೆ ಮತ್ತು ಗೋಪ್ಯತೆಯ ರಕ್ಷಣೆಯ ಹಕ್ಕು ಹೊಂದಿರುತ್ತಾರೆ ಎಂದೂ ಮಸೂದೆಯಲ್ಲಿದೆ.

ದೇವದಾಸಿಗೆ ಜನಿಸುವ ಮಗುವನ್ನು ಹಿಂದೂ ಧರ್ಮದ ವೈಯಕ್ತಿಕ ಕಾನೂನಿನ ಪ್ರಕಾರ ಕಾನೂನುಬದ್ಧ ಮಗು ಎಂದು ಪರಿಗಣಿಸಲಾಗುತ್ತದೆ. ಇಬ್ಬರೂ ಪೋಷಕರ ಆಸ್ತಿಯ ಉತ್ತರಾಧಿಕಾರಿ ಮತ್ತು ಉತ್ತರಾಧಿಕಾರ ಹೊಂದುವ ಅರ್ಹತೆ ಮಗುವಿಗೆ ಇರಲಿದೆ.

ದೇವದಾಸಿ ಮಗುವಿಗೆ ತನ್ನ ತಂದೆ ತಿಳಿದಿಲ್ಲ ಎಂಬ ಕಾರಣಕ್ಕೆ ತಾರತಮ್ಯ ಮಾಡಲು ಅವಕಾಶ ಇಲ್ಲ. ದೇವದಾಸಿಯ ಮಕ್ಕಳು ಶಿಕ್ಷಣ, ಆರೋಗ್ಯ ಮತ್ತು ಪರವಾನಗಿಗಳು, ಪಾಸ್ಪೋರ್ಟ್, ಪಾನ್ ಕಾರ್ಡ್, ಪಡಿತರ ಚೀಟಿ ಮತ್ತಿತರ ದಾಖಲೆಗಳಿಗೆ ಅರ್ಜಿ ಸಲ್ಲಿಸುವಾಗ ತನ್ನ ತಂದೆಯ ಹೆಸರು ಘೋಷಿಸುವುದು ಕಡ್ಡಾಯವಾಗಿದೆ. ಯಾವುದೇ ಅರ್ಜಿಯನ್ನು ಸಲ್ಲಿಸುವಾಗ ತಂದೆಯ ಹೆಸರಿನ ಭಾಗವು ಕಡ್ಡಾಯವಲ್ಲ ಎಂದು ಖಚಿತಪಡಿಸಿಕೊಳ್ಳಲು ರಾಜ್ಯ ಸರ್ಕಾರ ಆಡಳಿತಾತ್ಮಕ ಕ್ರಮ ತೆಗೆದುಕೊಳ್ಳಬೇಕು. ಪ್ರತಿಯೊಬ್ಬ ದೇವದಾಸಿ ಮಹಿಳೆಯು ಉತ್ತಮ ಆರೋಗ್ಯ ಮತ್ತು ಯೋಗಕ್ಷೇಮದ ಹಕ್ಕು ಹೊಂದಲಿದ್ದು ಅದನ್ನು ಸರ್ಕಾರ ಒದಗಿಸಬೇಕು ಎಂದೂ ಮಸೂದೆಯಲ್ಲಿದೆ.

ನಿಷೇಧ ಎಷ್ಟು?:

ದೇವದಾಸಿಯಾಗಿ ಮಹಿಳೆಯನ್ನು ಸಮರ್ಪಿಸುವುದು, ಆಕೆಯೇ ಸಮರ್ಪಿಸಿಕೊಳ್ಳುವುದನ್ನು ಈ ಮಸೂದೆಯು ಕಾನೂನುಬಾಹಿರವೆಂದು ಘೋಷಿಸಲಿದೆ. ಈ ಕಾನೂನಿಗೆ ವಿರುದ್ಧವಾಗಿ ನಡೆದುಕೊಂಡರೆ, ದೇವದಾಸಿ ನಿಷೇಧ ಮತ್ತು ಪುನರ್ವಸತಿ ಅಧಿಕಾರಿ ಅಥವಾ ತಾಲ್ಲೂಕು ಅಥವಾ ರಾಜ್ಯ ಸಮಿತಿಯು ಅಂತಹ ಸಮರ್ಪಣೆಯನ್ನು ನಿಷೇಧಿಸಿ ತಡೆಯಾಜ್ಞೆ ಹೊರಡಿಸಬಹುದು.

ಈ ಕುರಿತು ಅರ್ಜಿ ಅಥವಾ ದೂರನ್ನು ವೈಯಕ್ತಿಕವಾಗಿ ಅಥವಾ ನಂಬಲರ್ಹ ವ್ಯಕ್ತಿ ಸಲ್ಲಿಸಬಹುದು. ಅಂತಹ ಸಮರ್ಪಣೆ ನಡೆಯುವ ಸಾಧ್ಯತೆಯ ಬಗ್ಗೆ ಸೂಕ್ತ ಮಾಹಿತಿ ಇರುವ ಸರ್ಕಾರೇತರ ಸಂಸ್ಥೆಯೂ ದೂರು ನೀಡಬಹುದು. ಸಮಿತಿಯು ಸ್ವಯಂಪ್ರೇರಿತವಾಗಿಯೂ ತನಿಖೆ ನಡೆಸಬಹುದು.

ಜಾತ್ರೆಗಳ ಸಮಯದಲ್ಲಿ ಹುಣ್ಣಿಮೆಯಂಥ ಕೆಲವು ದಿನಗಳಲ್ಲಿ ದೇವದಾಸಿಯರಾಗಿ ಸಾಮೂಹಿಕ ಸಮರ್ಪಣೆಯನ್ನು ತಡೆಗಟ್ಟಲು ಸಂಬಂಧಪಟ್ಟ ಜಿಲ್ಲೆಯ ಜಿಲ್ಲಾಧಿಕಾರಿಯನ್ನು ದೇವದಾಸಿ ನಿಷೇಧ ಮತ್ತು ಪುನರ್ವಸತಿ ಅಧಿಕಾರಿ ಎಂದು ಪರಿಗಣಿಸಲಾಗುವುದು. ಯಾವುದೇ ಸಮರ್ಪಣೆಯನ್ನು ದೇವಾಲಯದ ಆವರಣದಲ್ಲಿ ನಡೆಸಲಾಗಿದೆ ಎಂದು ಕಂಡುಬಂದರೆ, ತಾಲ್ಲೂಕು ಸಮಿತಿಯು ಸಂಬಂಧಪಟ್ಟ ದೇವಾಲಯ ಸಮಿತಿಗೆ ನೋಟಿಸ್ ನೀಡಲಿದೆ ಎಂದೂ ಮಸೂದೆಯಲ್ಲಿ ತಿಳಿಸಲಾಗಿದೆ.

ಪಿತೃತ್ವ ಹಕ್ಕು, ಜೀವನಾಂಶ, ಪುನರ್ವಸತಿ

ದೇವದಾಸಿಗೆ ಜನಿಸಿದ ಯಾವುದೇ ಮಗುವು ತಂದೆಯ ಗುರುತು ಖಚಿತಪಡಿಸಿಕೊಳ್ಳುವ ಹಕ್ಕುನ್ನು ಈ ಮಸೂದೆ ಕಲ್ಪಿಸಿದೆ. ಅಂತಹ ಮಗುವು ತಂದೆಯ ಬಂಧದ ಮಾನ್ಯತೆಗಾಗಿ ತಾಲ್ಲೂಕು ಸಮಿತಿಗೆ ಅರ್ಜಿ ಸಲ್ಲಿಸಬಹುದು.

ಜೈವಿಕ ತಂದೆ ಒಪ್ಪಿಕೊಂಡರೆ ಆ ಬಗ್ಗೆ ಲಿಖಿತವಾಗಿ ಜಿಲ್ಲಾ ಸಮಿತಿಯ ಮುಂದೆ ಅರ್ಜಿ ಸಲ್ಲಿಸಬಹುದು. ಅಲ್ಲಿ ತಂದೆ ಮತ್ತೊಮ್ಮೆ ಬಹಿರಂಗವಾಗಿ ಮತ್ತು ಲಿಖಿತವಾಗಿ ಅಂತಹ ಸಂಬಂಧವನ್ನು ಒಪ್ಪಿಕೊಳ್ಳಬೇಕು. ತಂದೆಯು ಒಪ್ಪಿಕೊಳ್ಳಲು ನಿರಾಕರಿಸಿದರೆ ಜಿಲ್ಲಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಬಹುದು. ಮಗುವು ತನ್ನ ಜೈವಿಕ ತಂದೆ ಎಂದು ಭಾವಿಸುವ ವ್ಯಕ್ತಿಯ ಪಿತೃತ್ವವನ್ನು ಖಚಿತಪಡಿಸಿಕೊಳ್ಳಲು ನ್ಯಾಯಾಲಯವು ಡಿಎನ್ಎ ಪರೀಕ್ಷೆ ನಡೆಸಬಹುದು. ಅಂತಹ ಮಗುವಿಗೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರವು ಉಚಿತ ಕಾನೂನು ನೆರವು ಒದಗಿಸಬೇಕು.

ದೇವದಾಸಿಯ ಮಗು ಕಾನೂನಿನ ಅಡಿಯಲ್ಲಿ ಜೀವನಾಂಶ ಪಡೆಯಲು ಹಕ್ಕು ಹೊಂದಿರುತ್ತದೆ. ಅಂತಹ ಅರ್ಜಿಗಳನ್ನು ನ್ಯಾಯಾಲಯದ ಮುಂದೆ ಪ್ರಸ್ತುತಪಡಿಸುವ ಸಾಕ್ಷ್ಯಗಳು ಮತ್ತು ಸಂದರ್ಭಗಳ ಆಧಾರದಲ್ಲಿ ಕಾನೂನು ಪ್ರಕಾರ ಪರಿಗಣಿಸಲಾಗುತ್ತದೆ. ಗಂಡು ಮಗುವು ಪ್ರೌಢಾವಸ್ಥೆವರೆಗೆ ಮತ್ತು ಹೆಣ್ಣು ಮಗುವು ಪ್ರೌಢಾವಸ್ಥೆವರೆಗೆ ಅಥವಾ ವಿವಾಹವಾಗುವವರೆಗೆ ಜೀವನಾಂಶದ ಹಕ್ಕು ಪಡೆಯಬಹುದು. ಪುನರ್ವಸತಿ ಪ್ರಕ್ರಿಯೆಯಡಿ ದೇವದಾಸಿ ಕುಟುಂಬಕ್ಕೆ ಎಲ್ಲ ಅಗತ್ಯ ಮೂಲಸೌಲಭ್ಯಗಳಿರುವ ವಸತಿ ವ್ಯವಸ್ಥೆ ಕಲ್ಪಿಸಬೇಕು ಎಂದು ಮಸೂದೆಯಲ್ಲಿ ಪ್ರಸ್ತಾಪಿಸಲಾಗಿದೆ.

ಶಿಕ್ಷೆ ಮತ್ತು ದಂಡ

ಮಸೂದೆಯು ಕಾಯ್ದೆಯಾಗಿ ಜಾರಿಗೆ ಬಂದ ಬಳಿಕ ದೇವದಾಸಿಯಾಗಿ ಮಹಿಳೆಯನ್ನು ಅರ್ಪಿಸುವ ಯಾವುದೇ ಸಮಾರಂಭ ಅಥವಾ ಕಾರ್ಯವನ್ನು ತನ್ನ ನಿಯಂತ್ರಣದಲ್ಲಿರುವ ಆವರಣದಲ್ಲಿ ನಿರ್ವಹಿಸಲು, ಅನುಮತಿಸಲು, ಭಾಗವಹಿಸಲು ಅಥವಾ ಪ್ರಚೋದಿಸಲು ಯಾರು ಅನುಮತಿ ನೀಡುತ್ತಾರೊ ಅಥವಾ ಅದಕ್ಕೆ ಸಂಬಂಧಿಸಿದ ಯಾವುದೇ ಸಮಾರಂಭ ಅಥವಾ ಕೃತ್ಯವನ್ನು ಎಸಗುತ್ತಾರೊ ಅದನ್ನು ಅಪರಾಧವೆಂದು ಪರಿಗಣಿಸಿ ಎರಡು ವರ್ಷದಿಂದ ಐದು ವರ್ಷಗಳವರೆಗೆ ವಿಸ್ತರಿಸಬಹುದಾದ ಜೈಲು ಶಿಕ್ಷೆ ಅಥವಾ ₹1 ಲಕ್ಷಕ್ಕೆ ಕಡಿಮೆ ಇಲ್ಲದಂತೆ ದಂಡ ವಿಧಿಸಲು ಅವಕಾಶ ಆಗಲಿದೆ.

ದೇವದಾಸಿ ಪದ್ಧತಿಯನ್ನು ಉತ್ತೇಜಿಸಿದರೆ ಅಥವಾ ಪ್ರಚಾರ ಮಾಡಿದರೆ ಒಂದು ವರ್ಷದಿಂದ ಐದು ವರ್ಷಗಳವರೆಗೆ ಜೈಲು ಶಿಕ್ಷೆ ಅಥವಾ ₹50 ಸಾವಿರಕ್ಕೆ ಕಡಿಮೆ ಇಲ್ಲದಂತೆ ದಂಡ ಅಥವಾ ಎರಡನ್ನೂ ವಿಧಿಸಲಾಗುವುದು. ಒಮ್ಮೆ ಶಿಕ್ಷೆಗೆ ಒಳಗಾಗಿರುವವರು ಅಪರಾಧ ಪುನರಾವರ್ತಿಸಿದರೆ ಒಂದು ವರ್ಷದಿಂದ ಏಳು ವರ್ಷಗಳವರೆಗೆ ವಿಸ್ತರಿಸಬಹುದಾದ ಜೈಲು ಶಿಕ್ಷೆ ಮತ್ತು ₹2 ಲಕ್ಷವರೆಗೆ ವಿಸ್ತರಿಸಬಹುದಾದ ದಂಡ ಶಿಕ್ಷೆಗೆ ಗುರಿಯಾಗಲಿದ್ದಾರೆ ಎಂದು ಮಸೂದೆಯಲ್ಲಿ ವಿವರಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.